ಟಿ20 ವಿಶ್ವಕಪ್ ಆದ್ಮೇಲೆ ಬೆದರಿಕೆ ಕರೆ ಬಂದಿದ್ವು, ಭಾರತಕ್ಕೆ ಬರಬೇಡ ಎಂದಿದ್ರು; ಕರಾಳ ಹಂತ ತೆರೆದಿಟ್ಟ ವರುಣ್ ಚಕ್ರವರ್ತಿ
ವರುಣ್ ಚಕ್ರವರ್ತಿ ಅವರು 2021ರ ಟಿ20 ವಿಶ್ವಕಪ್ ಸೋಲಿನ ನಂತರದ “ಕರಾಳ ಹಂತ”ದ ಬಗ್ಗೆ ತೆರೆದಿಟ್ಟಿದ್ದಾರೆ. ಭಾರತಕ್ಕೆ ಬರದಂತೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಹೇಳಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಿಸ್ಟರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ 5 ವಿಕೆಟ್ ಗೊಂಚಲು ಸೇರಿ 9 ವಿಕೆಟ್ ಕಿತ್ತು ಭಾರತ 3ನೇ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತರ್ವಹಿಸಿದ್ದ ವರುಣ್ ತನಗೆ 2021ರ ಟಿ20 ವಿಶ್ವಕಪ್ ನಂತರ ಬೆದರಿಕೆ ಕರೆಗಳು ಬಂದಿರುವುದಾಗಿ ರಿವೀಲ್ ಮಾಡಿದ್ದಾರೆ. ಆ ಟಿ20 ವಿಶ್ವಕಪ್ನಲ್ಲಿ ಬೀದರ್ ಮೂಲದವರೂ ಆದ ತಮಿಳುನಾಡು ಕ್ರಿಕೆಟಿಗನಾದ ಚಕ್ರವರ್ತಿ ಕಣಕ್ಕೆ ಇಳಿದಿದ್ದ 3 ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.
ಐಪಿಎಲ್ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಹಿನ್ನೆಲೆ ಭಾರತ ತಂಡಕ್ಕೆ ವರುಣ್ ಆಯ್ಕೆ ಆಗಿದ್ದರು. ಅದರಂತೆ ಯುಎಇ ಮತ್ತು ದುಬೈನಲ್ಲಿ ಜರುಗಿದ ಪ್ರತಿಷ್ಠಿತ ಟಿ20 ವಿಶ್ವಕಪ್ಗೂ ಸ್ಪಿನ್ನರ್ ಆಯ್ಕೆಯಾಗಿದ್ದರು. ಏಕೆಂದರೆ ಅದೇ ವರ್ಷ ಯುಎಇನಲ್ಲಿ ನಡೆದಿದ್ದ ಐಪಿಎಲ್ನಲ್ಲಿ ಕೆಕೆಆರ್ ಪರ ವಿಕೆಟ್ ಬೇಟೆಯಾಡಿದ್ದ ಕಾರಣ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಆಗಿದ್ದೇ ಬೇರೆ. ಒಂದೇ ಒಂದು ವಿಕೆಟ್ ಪಡೆಯದೆ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದರು. ಆದರೆ ಈ ಟೂರ್ನಿಯ ತನಗೆ ಬೆದರಿಕೆ ಕರೆಗಳು ಬಂದಿರುವ ಕುರಿತು ಇವಾಗ ಬಹಿರಂಗಪಡಿಸಿದ್ದಾರೆ.
ಕರಾಳ ಹಂತ ತೆರೆದಿಟ್ಟ ವರುಣ್ ಚಕ್ರವರ್ತಿ
ಟಿ20 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನದಿಂದ ಟೀಕೆಗೊಳಗಾಗಿದ್ದ ವರುಣ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಎಕ್ಸ್-ಫ್ಯಾಕ್ಟರ್ ಆಗಿ ಹೊರಹೊಮ್ಮಿದರು. 8 ತಂಡಗಳ ಟೂರ್ನಿಯಲ್ಲಿ ಮಿಸ್ಟರಿ ಸ್ಪಿನ್ನರ್ 3 ಪಂದ್ಯಗಳಲ್ಲಿ 9 ವಿಕೆಟ್ ಉರುಳಿಸಿದ ಸ್ಪಿನ್ನರ್, ಟಿ20 ವಿಶ್ವಕಪ್ ನಂತರದ ಕರಾಳ ಹಂತವನ್ನು ಕರಾಳ ಹಂತದ ಬಗ್ಗೆ ಈಗ ತೆರೆದಿಟ್ಟಿದ್ದಾರೆ. 33 ವರ್ಷದ ಆಟಗಾರ ದೇಶಕ್ಕೆ ಮರಳದಂತೆ ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬಂದಿದ್ದವು. ದೇಶಕ್ಕೆ ಬಂದಿಳಿದ ನಂತರ ಕೆಲವರು ತಮ್ಮ ಬೈಕುಗಳಲ್ಲಿ ತಮ್ಮ ಮನೆಗೆ ಹಿಂಬಾಲಿಸಿದ್ದರು ಎಂದು ಹೇಳಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾದ ನಂತರ ನ್ಯಾಯ ಒದಗಿಸಲು ಸಾಧ್ಯವಾಗದ ಕಾರಣ ಟೂರ್ನಿ ಮುಗಿದ ನಂತರ ಖಿನ್ನತೆ ಒಳಗಾಗಿದ್ದರಂತೆ!
‘ಅಂದು ನನಗೆ ಕರಾಳ ಸಮಯವಾಗಿತ್ತು. ನಾನು ಖಿನ್ನತೆಗೆ ಒಳಗಾಗಿದ್ದೆ. ಏಕೆಂದರೆ ಟಿ20 ವಿಶ್ವಕಪ್ನಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ಒಂದು ವಿಕೆಟ್ ಕೂಡ ಪಡೆಯದಿದ್ದಕ್ಕೆ ವಿಷಾದಿಸುತ್ತೇನೆ. ಅದರ ನಂತರ, ಮೂರು ವರ್ಷಗಳವರೆಗೆ, ನನ್ನನ್ನು ಆಯ್ಕೆ ಮಾಡಲಿಲ್ಲ. ಆದ್ದರಿಂದ, ತಂಡಕ್ಕೆ ಮರಳುವುದು ನನ್ನ ಚೊಚ್ಚಲ ಹಾದಿಗಿಂತ ಕಠಿಣವಾಗಿತ್ತು ಎಂದು ನಾನು ಭಾವಿಸುತ್ತೇನೆ’ ಎಂದು ವರುಣ್ ಯೂಟ್ಯೂಟ್ನ ಚಾಟ್ನಲ್ಲಿ ಗೋಬಿನಾಥ್ಗೆ ತಿಳಿಸಿದ್ದಾರೆ.
ನನ್ನ ಆಟವನ್ನು ಬದಲಿಸಿದೆ ಎಂದ ವರುಣ್
‘2021ರ ವಿಶ್ವಕಪ್ ಬಳಿಕ ನನಗೆ ಬೆದರಿಕೆ ಕರೆಗಳು ಬಂದವು. ಭಾರತಕ್ಕೆ ಬರಬೇಡಿ ಎಂದು ಜನರು ನಿಂದಿಸಿದ್ದರು. ಜನರು ನನ್ನ ಮನೆಯ ಬಳಿಗೆ ಬಂದಿದ್ದರು. ನಾನು ಕೆಲವೊಮ್ಮೆ ಅಡಗಿಕೊಳ್ಳಬೇಕಾಯಿತು. ನಾನು ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದಾಗ, ಕೆಲವರು ತಮ್ಮ ಬೈಕುಗಳಲ್ಲಿ ನನ್ನನ್ನು ಫಾಲೋ ಮಾಡಿದ್ದರು. ಅಭಿಮಾನಿಗಳು ಭಾವುಕರಾಗಿದ್ದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಅವರು ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗ್ರೂಪ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಪಡೆದ ವರುಣ್, ಟಿ20 ವಿಶ್ವಕಪ್ ಸೋಲಿನ ನಂತರ ಆಟವನ್ನು ಬದಲಾಯಿಸಬೇಕಾಯಿತು’ ಎಂದು ಹೇಳಿದ್ದಾರೆ.
ಅವರು ತಮ್ಮ ದೈನಂದಿನ ದಿನಚರಿ ಮತ್ತು ಅಭ್ಯಾಸ ವೇಳಾಪಟ್ಟಿಯನ್ನು ಹೇಗೆ ಬದಲಾಯಿಸಿದರು ಎಂದು ವಿವರಿಸಿದ್ದಾರೆ. ‘ನಾನು 2021ರ ನಂತರ ಸಾಕಷ್ಟು ಬದಲಾಗಬೇಕಾಯಿತು. ನಾನು ನನ್ನ ದೈನಂದಿನ ದಿನಚರಿ, ಅಭ್ಯಾಸ ಬದಲಾಯಿಸಿದೆ. ಈ ಮೊದಲು ಒಂದು ಸೆಷನ್ನಲ್ಲಿ 50 ಎಸೆತಗಳನ್ನು ಅಭ್ಯಾಸ ಮಾಡುತ್ತಿದ್ದೆ. ಅದನ್ನು ದ್ವಿಗುಣಗೊಳಿಸಿದೆ. ವಿಶ್ವಕಪ್ ಸೋತು ಮೂರನೇ ವರ್ಷದ ನಂತರ ಎಲ್ಲವೂ ಮುಗಿದಿದೆ ಎಂದು ನಾನು ಭಾವಿಸಿದ್ದೆ. ಐಪಿಎಲ್ ಗೆದ್ದ ಬಳಿಕ ನನಗೆ ಕರೆ ಬಂದಿದ್ದು ಸಂತೋಷವಾಗಿದೆ’ ಎಂದು ವರುಣ್ ಹೇಳಿದ್ದಾರೆ.