ರೋಹಿತ್​, ಕೊಹ್ಲಿ ಬೆನ್ನಲ್ಲೇ 29 ಶತಕ ಸಿಡಿಸಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್​ ನಿವೃತ್ತಿ; ಏನಾಗ್ತಿದೆ ಭಾರತ ತಂಡದಲ್ಲಿ?
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್​, ಕೊಹ್ಲಿ ಬೆನ್ನಲ್ಲೇ 29 ಶತಕ ಸಿಡಿಸಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್​ ನಿವೃತ್ತಿ; ಏನಾಗ್ತಿದೆ ಭಾರತ ತಂಡದಲ್ಲಿ?

ರೋಹಿತ್​, ಕೊಹ್ಲಿ ಬೆನ್ನಲ್ಲೇ 29 ಶತಕ ಸಿಡಿಸಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್​ ನಿವೃತ್ತಿ; ಏನಾಗ್ತಿದೆ ಭಾರತ ತಂಡದಲ್ಲಿ?

ರೋಹಿತ್​ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಬೆನ್ನಲ್ಲೇ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ 'ಎ' ತಂಡದ ಮಾಜಿ ನಾಯಕ ಪ್ರಿಯಾಂಕ್ ಪಾಂಚಾಲ್ ಕೂಡ ನಿವೃತ್ತಿ ಘೋಷಿಸಿದ್ದಾರೆ.

ರೋಹಿತ್​, ಕೊಹ್ಲಿ ಬೆನ್ನಲ್ಲೇ 29 ಶತಕ ಸಿಡಿಸಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್​ ನಿವೃತ್ತಿ; ಏನಾಗ್ತಿದೆ ಭಾರತ ತಂಡದಲ್ಲಿ?
ರೋಹಿತ್​, ಕೊಹ್ಲಿ ಬೆನ್ನಲ್ಲೇ 29 ಶತಕ ಸಿಡಿಸಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟರ್​ ನಿವೃತ್ತಿ; ಏನಾಗ್ತಿದೆ ಭಾರತ ತಂಡದಲ್ಲಿ?

ಸೂಪರ್​ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಭಾರತದ ಮತ್ತೊಬ್ಬ ಕ್ರಿಕೆಟಿಗ ನಿವೃತ್ತಿ ಘೋಷಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದ ಹಿನ್ನೆಲೆ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನವೇ ಎಲ್ಲಾ ಮಾದರಿಯ ಕ್ರಿಕೆಟ್​ಗೆ ದೇಶೀಯ ಅನುಭವಿ ಆಟಗಾರ ಪ್ರಿಯಾಂಕ್ ಪಾಂಚಾಲ್ ನಿವೃತ್ತಿ ಘೋಷಿಸಿದ್ದಾರೆ. ಈ ಹಿಂದೆ ಅನೇಕ ಟೆಸ್ಟ್​ ಸರಣಿಗಳಲ್ಲಿ ಭಾರತ ತಂಡದ ಭಾಗವಾಗಿದ್ದ ಗುಜರಾತ್​ನ ಪ್ರಿಯಾಂಕ್, ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡದ ನಿರಾಸೆಯೊಂದಿಗೆ ಹೊರನಡೆದಿದ್ದಾರೆ.

ಭಾರತ 'ಎ' ತಂಡದ ಮಾಜಿ ನಾಯಕ ಪ್ರಿಯಾಂಕ್ ಅವರು ಟ್ವಿಟರ್​​ನಲ್ಲಿ ಸೋಮವಾರ (ಮೇ 26) ಈ ಮಾಹಿತಿ ನೀಡಿದೆ. 127 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ 35ರ ಹರೆಯದ ಪಾಂಚಾಲ್ 45.18ರ ಸರಾಸರಿಯಲ್ಲಿ 29 ಶತಕ, 34 ಅರ್ಧಶತಕಗಳ ಸಹಿತ 8,856 ರನ್ ಗಳಿಸಿದ್ದಾರೆ. ಇವರು ತ್ರಿಶತಕವನ್ನೂ ಸಿಡಿಸುವ ಗಮನ ಸೆಳೆದಿದ್ದಾರೆ. ಬಲಗೈ ಆರಂಭಿಕ ಆಟಗಾರ 97 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದು, 8 ಶತಕ, 21 ಅರ್ಧಶತಕ ಸಹಿತ 40.80 ಸರಾಸರಿಯಲ್ಲಿ 3,672 ರನ್ ಗಳಿಸಿದ್ದಾರೆ. 59 ಟಿ20 ಪಂದ್ಯಗಳಲ್ಲಿ 28.71ರ ಸರಾಸರಿಯಲ್ಲಿ 9 ಅರ್ಧಶತಕ ಸಹಿತ 1,522 ರನ್ ಗಳಿಸಿದ್ದಾರೆ.

17 ವರ್ಷಗಳ ಕಾಲ ಗುಜರಾತ್ ಪ್ರತಿನಿಧಿಸಿದ್ದ ಪ್ರಿಯಾಂಕ್

ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಪ್ರಿಯಾಂಕ್ ಭಾರತ ಎ ತಂಡದ ನಾಯಕತ್ವವನ್ನೂ ವಹಿಸಿದ್ದರು. 2021/22 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅವರ ಬದಲಿ ಸ್ಥಾನಕ್ಕೆ ಆಯ್ಕೆಯಾಗಿದ್ದರೂ ಆಡುವ 11ರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಅವರ ಸಾಧನೆಯನ್ನು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಭಿನಂದಿಸಿದ್ದು, ಶುಭಕೋರಿದೆ. ಪ್ರಿಯಾಂಕ್ ಅವರ ಅದ್ಭುತ ವೃತ್ತಿಜೀವನವನ್ನು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಭಿನಂದಿಸುತ್ತದೆ ಎಂದು ಜಿಸಿಎ ಕಾರ್ಯದರ್ಶಿ ಅನಿಲ್ ಪಟೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 17 ವರ್ಷಗಳಿಗೂ ಹೆಚ್ಚು ಕಾಲ ದೇಶೀಯ ಕ್ರಿಕೆಟ್​ನಲ್ಲಿ ಗುಜರಾತ್ ತಂಡವನ್ನು ಪ್ರತಿನಿಧಿಸಿದ್ದರು.

2016-17ರಲ್ಲಿ ಮಿಂಚಿದ್ದ ಪಾಂಚಾಲ್​

2016-17ರ ರಣಜಿ ಟ್ರೋಫಿಯಲ್ಲಿ ಪಾಂಚಾಲ್ ಅದ್ಭುತ ಪ್ರದರ್ಶನ ನೀಡಿದ್ದರು. ಆ ಆವೃತ್ತಿಯಲ್ಲಿ ಅವರು 1,310 ರನ್ ಗಳಿಸಿದ್ದರು. ಅವರ ಅದ್ಭುತ ಆಟದ ನೆರವಿನಿಂದ ಗುಜರಾತ್ ಅಗ್ರ ದೇಶೀಯ ಕ್ರಿಕೆಟ್​ನ ರಾಜ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತು. 2015-16ರಲ್ಲಿ ವಿಜಯ್ ಹಜಾರೆ ಟ್ರೋಫಿ, 2012-13 ಮತ್ತು 2013-14ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಗುಜರಾತ್ ತಂಡದ ಭಾಗವಾಗಿದ್ದರು.

ಇತ್ತೀಚೆಗೆ ರೋಹಿತ್-ಕೊಹ್ಲಿ ನಿವೃತ್ತಿ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ರೋಹಿತ್ ಮೇ 7 ರಂದು, ವಿರಾಟ್ ಮೇ 12ರಂದು ರೆಡ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ರೋಹಿತ್ ಅವರನ್ನು ಆಡುವ ಹನ್ನೊಂದರಿಂದ ಕೈಬಿಡಲಾಗಿತ್ತು. ಇಂಗ್ಲೆಂಡ್ ಸರಣಿಗೆ ಅವರನ್ನು ಆಯ್ಕೆ ಮಾಡುವುದೂ ಅನುಮಾನವಾಗಿತ್ತು. ಅದಕ್ಕೂ ಮುನ್ನವೇ ತಂಡವನ್ನು ತ್ಯಜಿಸಿದರು. ಮತ್ತೊಂದೆಡೆ ವಿರಾಟ್, ತನಗಿನ್ನೂ ಎರಡು ಮೂರು ವರ್ಷ ಆಡುವ ಫಿಟ್​ನೆಸ್ ಇದ್ದರೂ ಇಂಗ್ಲೆಂಡ್ ಪ್ರವಾಸಕ್ಕೂ ಮೊದಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.