ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ನ್ಯೂಯಾರ್ಕ್ ಬೀದಿಗಳಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಸುತ್ತಾಟ, ವಿಡಿಯೋ
Virat Kohli-Anushka Sharma : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನ್ಯೂಯಾರ್ಕ್ ಬೀದಿಗಳಲ್ಲಿ ಸುತ್ತಾಟ ನಡೆಸಿದ್ದಾರೆ.
ಜೂನ್ 9ರಂದು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ (India vs Pakistan) ವಿರುದ್ಧ ಮತ್ತೊಮ್ಮೆ ಧೂಳೆಬ್ಬಿಸಲು ವಿರಾಟ್ ಕೊಹ್ಲಿ ಸಿದ್ಧರಾಗಿದ್ದಾರೆ. ಆದರೆ, ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ (Virat Kohli and Anushka Sharma) ದಂಪತಿ ನ್ಯೂಯಾರ್ಕ್ ಬೀದಿಗಳಲ್ಲಿ (New York Street) ಸುತ್ತಾಡುತ್ತಿದ್ದಾರೆ. ಈ ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗುತ್ತಿದೆ.
ಜೂನ್ 5ರಂದು ಐರ್ಲೆಂಡ್ ವಿರುದ್ದ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ, ಮುಂದಿನ ಪಂದ್ಯಕ್ಕೆ 4 ದಿನಗಳ ಅಂತರದಿದ್ದ ಕಾರಣ ಪ್ರಸ್ತುತ ರಜೆಯ ದಿನಗಳನ್ನು ಮಜಾ ಮಾಡುತ್ತಿದ್ದಾರೆ. ನ್ಯೂಯಾರ್ಕ್ನಲ್ಲಿ ಮಳೆ ಹೆಚ್ಚು ಕಾಣಿಸಿದ ಹಿನ್ನೆಲೆ ಗಾರ್ಡನ್ ಸಿಟಿಯಲ್ಲಿ ದಂಪತಿ ಹೆಚ್ಚೊತ್ತು ಸುತ್ತಾಟ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶೀಘ್ರದಲ್ಲೇ ಕಾರುಹತ್ತಿ ಸ್ಥಳದಿಂದ ಹೊರಟರು. ಅವರಿಗೆ ದೊಡ್ಡಮಟ್ಟದಲ್ಲಿ ಭದ್ರತೆ ಒದಗಿಸಲಾಗಿತ್ತು.
ಐರ್ಲೆಂಡ್ ವಿರುದ್ಧದ ವಿರಾಟ್ ತೀವ್ರ ನಿರಾಸೆ ಮೂಡಿಸಿದ್ದರು. 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿದ್ದರು. ಇದೀಗ ಪಾಕ್ ವಿರುದ್ಧ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಮಾತ್ರವಲ್ಲದೆ, ಇತರ ಭಾರತದ ಆಟಗಾರರು ಕೂಡ ನ್ಯೂಯಾರ್ಕ್ ಸುತ್ತುತ್ತಿದ್ದಾರೆ. ರಿಷಭ್ ಪಂತ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ಯುವರಾಜ್ ಸಿಂಗ್ ನ್ಯೂಯಾರ್ಕ್ನಲ್ಲಿರುವ ಬಾಣಸಿಗ ವಿಕಾಸ್ ಖನ್ನಾರ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ.
ಪಾಕಿಸ್ತಾನ ವಿರುದ್ಧ ಕೊಹ್ಲಿ ಅಬ್ಬರ
ಪಾಕಿಸ್ತಾನ ಎದುರು ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಈವರೆಗೂ 10 ಟಿ20ಐಗಳಲ್ಲಿ ಕೊಹ್ಲಿ, 81.33 ಸರಾಸರಿಯಲ್ಲಿ 488 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 5 ಅರ್ಧಶತಕಗಳು ಸೇರಿವೆ. ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ. ಆದರೆ ನ್ಯೂಯಾರ್ಕ್ ಹೊಸ ಪಿಚ್ ಆಗಿದ್ದು, ಟೂರ್ನಿಯ ಆರಂಭದಿಂದಲೂ ಬೌಲರ್ಗಳೇ ಹೆಚ್ಚು ಮೇಲುಗೈ ಸಾಧಿಸುತ್ತಿದ್ದು, ಕೊಹ್ಲಿ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಕೊಹ್ಲಿ ಪ್ರದರ್ಶನ
ಪಂದ್ಯಗಳು - 5
ರನ್ – 308
ಸರಾಸರಿ – 308
ಸ್ಟ್ರೈಕ್ರೇಟ್ – 132.75
100/50 – 0/4
ಗರಿಷ್ಠ ಸ್ಕೋರ್ – 82*
ಕಳೆದ ವರ್ಷ ರೋಚಕ ಗೆಲುವು ತಂದುಕೊಟ್ಟಿದ್ದ ಕೊಹ್ಲಿ
2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ, ಅತ್ಯಂತ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಗುಂಪು-ಹಂತದ ಪಂದ್ಯದಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ 160 ರನ್ ಸಾಧಾರಣ ಗುರಿ ಬೆನ್ನಟ್ಟುವ ವೇಳೆ ಭಾರತ ತೊಂದರೆಗೆ ಸಿಲುಕಿತ್ತು. ಭಾರತ 6.1 ಓವರ್‌ಗಳಲ್ಲಿ 31ಕ್ಕೆ 4 ವಿಕೆಟ್ ಕಳೆದುಕೊಂಡಿತ್ತು. ಮೆನ್ ಇನ್ ಬ್ಲೂ ಗೆಲ್ಲುವ ಸಂಭವನೀಯತೆ ಶೇ 15ರಷ್ಟಿತ್ತು. ಆದರೆ, ಕೊಹ್ಲಿಯ 53 ಎಸೆತಗಳಲ್ಲಿ 82* ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ