ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತೀಯ ಕ್ರಿಕೆಟಿಗರ 1950ರ ದಶಕದ ಫೋಟೋಸ್‌ ವೈರಲ್‌, ಇದು Ai ತಂತ್ರಜ್ಞಾನದ ಮ್ಯಾಜಿಕ್

ಭಾರತೀಯ ಕ್ರಿಕೆಟಿಗರ 1950ರ ದಶಕದ ಫೋಟೋಸ್‌ ವೈರಲ್‌, ಇದು AI ತಂತ್ರಜ್ಞಾನದ ಮ್ಯಾಜಿಕ್

ಕಲಾವಿದರೊಬ್ಬರು ಕೃತಕ ಬುದ್ಧಿಮತ್ತೆ ಸಾಧನ ಉಪಯೋಗಿಸಿ ಭಾರತದ ಖ್ಯಾತ ಕ್ರಿಕೆಟರ್‌ಗಳ ಚಿತ್ರವನ್ನು ರಚಿಸಿದ್ದಾರೆ. ಪ್ರಸ್ತುತ ಕ್ರಿಕೆಟ್‌ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಕ್ರಿಕೆಟಿಗರು 1950ರ ದಶಕದಲ್ಲಿ ಆಡುತ್ತಿದ್ದರೆ ಹೇಗಿರುತ್ತಿದ್ದರು ಎಂಬುದೇ ಈ ಚಿತ್ರದ ಸ್ವಾರಸ್ಯ.

ಭಾರತದ ಕ್ರಿಕೆಟಿಗರ AI ಚಿತ್ರ
ಭಾರತದ ಕ್ರಿಕೆಟಿಗರ AI ಚಿತ್ರ (Reddit/r/IndianArtAI)

ನಾವೆಲ್ಲರೂ ಈಗ ಕೃತಕ ಬುದ್ಧಿಮತ್ತೆ (AI) ಅಥವಾ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿಕೊಂಡಿರುವ ಕೃತಕ ಬುದ್ಧಿಮತ್ತೆ ಎಂಬ ಕೃತಕ ಪ್ರಪಂಚವು, ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಪರಿಣಾಮ ಬೀರಿದೆ. ಕಣ್ಣ ಮುಂದೆ ಕಾಣಿಸುತ್ತಿರುವುದು ವಾಸ್ತವ ಅಲ್ಲದಿದ್ದರೂ, ಅದು ವಾಸ್ತವದಂತೆಯೇ ಭಾಸವಾಗುವಂತೆ ಮಾಡುವ ಸಾಮರ್ಥ್ಯ ಈ ತಂತ್ರಜ್ಞಾನಕ್ಕಿದೆ.

ಟ್ರೆಂಡಿಂಗ್​ ಸುದ್ದಿ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಉಪಯೋಗಿಸಿಕೊಂಡು ಕೃತಕ ಲೋಕವನ್ನೇ ಸೃಷ್ಟಿಸಲು ಸಾಧ್ಯ. ನಮ್ಮ ಕಲ್ಪನೆಗೆ ಬರುವ ಚಿತ್ರವನ್ನು ಕೂಡಾ ಸುಲಭವಾಗಿ ರಚಿಸಬಹುದು. ಹಳೆಯ ಫೋಟೋಗಳಿಗೆ ಹೊಸ ಲುಕ್‌ ಮಾತ್ರವಲ್ಲದೆ ಹೊಸ ಫೋಟೋವನ್ನು ಶತಮಾನಗಳಷ್ಟು ಹಳೆಯ ಶೈಲಿಯಲೂ ಚಿತ್ರಿಸಬಹುದು. ಇಂಥ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲೂ ತುಂಬಾ ವೈರಲ್‌ ಆಗುತ್ತವೆ. ಅದರಲ್ಲೂ ಸೆಲೆಬ್ರಿಟಿಗಳ ಚಿತ್ರಗಳು ತೀರಾ ಸಾಮಾನ್ಯ.

ಇಂಥಾ ಚಿತ್ರಗಳನ್ನು ರಚಿಸಲು ಆನ್‌ಲೈನ್‌ನಲ್ಲಿ ಬೇಕಾದಷ್ಟು ಟೂಲ್‌ಗಳಿವೆ. ಮಿಡ್‌ಜರ್ನಿಯಂತಹ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಪರಿಕರಗಳನ್ನು ಬಳಸಿ ರಚಿಸಿದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತವೆ. ಕಲಾವಿದರೊಬ್ಬರು ಭಾರತದ ಖ್ಯಾತ ಕ್ರಿಕೆಟರ್‌ಗಳ ಚಿತ್ರವನ್ನು ಇದೇ ಸಾಧನ ಉಪಯೋಗಿಸಿ ರಚಿಸಿದ್ದಾರೆ. ಪ್ರಸ್ತುತ ಕ್ರಿಕೆಟ್‌ ಲೋಕದಲ್ಲಿ ಮಿಂಚುತ್ತಿರುವ ಭಾರತೀಯ ಕ್ರಿಕೆಟಿಗರು 1950ರ ದಶಕದಲ್ಲಿ ಆಡುತ್ತಿದ್ದರೆ ಹೇಗಿರುತ್ತಿದ್ದರು ಎಂಬುದೇ ಈ ಚಿತ್ರದ ಸ್ವಾರಸ್ಯ.

ಭಾರತದ ಖ್ಯಾತ ಕ್ರಿಕೆಟಿಗರ ಫ್ಲ್ಯಾಶ್‌ಬ್ಯಾಕ್ ಫೋಟೋಗಳು, ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್‌ ಆಗಿವೆ. ರೆಡ್ಡಿಟ್‌ನಲ್ಲಿ ಇದರ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದ್ದು, ರೆಡ್ಡಿಟ್‌ ಬಳಕೆದಾರ @anshuwuman ಎಂಬವರು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಇದಕ್ಕೆ ಹಲವಾರು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಯಾರೆಂದು ಗುರಿತಿಸಬಲ್ಲಿರಾ?

ಚಿತ್ರದಲ್ಲಿ ಕಾಣುವ ಕ್ರಿಕೆಟಿಗರನ್ನು ಕ್ಷಣ ಮಾತ್ರದಲ್ಲೇ ಗುರುತಿಸುವುದು ನಿಮ್ಮಿಂದ ಕಷ್ಟವಾಗಬಹುದು. ಹಾಗಂತಾ ಇದು ಕಷ್ಟದ ಕೆಲಸವೇನೂ ಅಲ್ಲ. ಇಲ್ಲಿರುವವರು ಭಾರತ ತಂಡದ ಜನಪ್ರಿಯ ಕ್ರಿಕೆಟಿಗರೇ. ಫ್ರೆಂಚ್ ಗಡ್ಡ ಮತ್ತು ಸ್ಟೈಲಿಶ್‌ ಕೂದಲಿನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡರೆ, ಕ್ಲೀನ್‌ ಶೇವ್‌ನಲ್ಲಿ ಕೋಟ್‌ ಧರಿಸಿರುವ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಲುಕ್‌ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಶರ್ಮಾ 1950ರ ದಶಕದಲ್ಲಿ ಆಡಿದ್ದರೆ, ಖಂಡಿತಾ ಇದೇ ರೀತಿ ಕಾಣಿಸುತ್ತಿದ್ದರೇನೋ. ಟೀಮ್‌ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ, ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಫೋಟೋವನ್ನು ಕೂಡಾ ಅದ್ಭುತವಾಗಿ ರಚಿಸಲಾಗಿದೆ.

ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಕನ್ನಡಿಗ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಫೋಟೋ ನೋಡಿ ನೆಟ್ಟಿಗರು ಖುಷಿಯಾಗಿದ್ದಾರೆ. ಅದರಲ್ಲೂ ಜಡೇಜಾ ಮಾತ್ರ ದಿಗ್ಗಜ ಫುಟ್‌ಬಾಲ್‌ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೊ ಅವರಂತೆಯೇ ಕಾಣಿಸಿಕೊಂಡಿದ್ದಾರೆ. ಯುವ ಆರಂಭಿಕ ಶುಭ್ಮನ್ ಗಿಲ್ ಕೂಡ ಫೋಟೋದಲ್ಲಿದ್ದಾರೆ.

ಚಿತ್ರಗಳನ್ನು ರಚಿಸಿರುವ ಕಲಾವಿದ ಪ್ರತೀಕ್ ಅರೋರಾ ಅವರು, ಎಐ ಟೂಲ್‌ ಆಗಿರುವ ಮಿಡ್‌ಜರ್ನಿ ಬಳಸಿ ಇವುಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.

ಟಿ20 ವರ್ಲ್ಡ್‌ಕಪ್ 2024