ಕನ್ನಡ ಸುದ್ದಿ  /  Cricket  /  Ajinkya Rahane Musheer Khan Half Century Helps Mumbai To Take Lead Against Vidarbha In Ranji Trophy 2024 Final Jra

ರಣಜಿ ಟ್ರೋಫಿ ಫೈನಲ್;‌ ಅಜಿಂಕ್ಯಾ ರಹಾನೆ-ಮುಶೀರ್‌ ಖಾನ್‌ ಜೊತೆಯಾಟ, ವಿದರ್ಭ ವಿರುದ್ಧ ಮುನ್ನಡೆಯಲ್ಲಿ ಮುಂಬೈ

ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಔಟಾಗಿದ್ದ ಮುಂಬೈ, ಎರಡನೇ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿದೆ. ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಅಜಿಂಕ್ಯಾ ರಹಾನೆ ಮತ್ತು ಮುಶೀರ್‌ ಖಾನ್‌ ಅಜೇಯರಾಗಿ ಉಳಿದಿದ್ದಾರೆ.

ಅಜಿಂಕ್ಯಾ ರಹಾನೆ-ಮುಶೀರ್‌ ಖಾನ್‌ ಜೊತೆಯಾಟ
ಅಜಿಂಕ್ಯಾ ರಹಾನೆ-ಮುಶೀರ್‌ ಖಾನ್‌ ಜೊತೆಯಾಟ (PTI)

ವಿದರ್ಭ ವಿರುದ್ಧದ ರಣಜಿ ಟ್ರೋಫಿ ಫೈನಲ್‌ (Ranji Trophy Final) ಪಂದ್ಯದಲ್ಲಿ ಮುಂಬೈ (Mumbai vs Vidarbha) ತಂಡವು ಸುಸ್ಥಿತಿಯಲ್ಲಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಅಜಿಂಕ್ಯಾ ರಹಾನೆ ಬಳಗವು 260 ರನ್‌ಗಳ ಮುನ್ನಡೆಯಲ್ಲಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ವಿಫಲವಾಗಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನಾಟವಾಡಿದ ಅಜಿಂಕ್ಯಾ ರಹಾನೆ, ಅಜೇಯ 58 ರನ್‌ಗಳೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್‌ ಮಾಡಲಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ರಹಾನೆ, ಅಯ್ಯರ್‌ ಅವರಂಥ ಅನುಭವಿ ಬ್ಯಾಟರ್‌ಗಳ ವೈಫಲ್ಯದೊಂದಿಗೆ 224 ರನ್‌ಗಳಿಗೆ ಆಲೌಟ್‌ ಆಗಿದ್ದ ಮುಂಬೈ, ಸೋಮವಾರ ದಿನದ ಅಂತ್ಯದಲ್ಲಿ ವಿದರ್ಭ ವಿರುದ್ಧ 260 ರನ್‌ಗಳ ಮುನ್ನಡೆ ಸಾಧಿಸಿದೆ. ಅಂಡರ್‌ 19 ವಿಶ್ವಕಪ್‌ನಲ್ಲಿ ಆಡಿದ್ದ ಯುವ ಆಟಗಾರ ಮುಶೀರ್ ಖಾನ್ ಔಟಾಗದೆ 51 ರನ್ ಗಳಿಸಿದ್ದಾರೆ. ಅನುಭವಿ ನಾಯಕ ರಹಾನೆ, ವಿದರ್ಭ ಬೌಲಿಂಗ್ ದಾಳಿಯನ್ನು ತಾಳ್ಮೆಯಿಂದ ಎದುರಿಸಿ ಅಜೇಯರಾಗಿ ಉಳಿದಿದ್ದಾರೆ. ಸದ್ಯ, 42ನೇ ರಣಜಿ ಪ್ರಶಸ್ತಿಗೆ ಎದುರು ನೋಡುತ್ತಿರುವ ಮುಂಬೈ ತಂಡವು 141/2 ರನ್‌ಗಳೊಂದಿಗೆ ಎರಡನೇ ದಿನದಾಟ ಮುಗಿಸಿದೆ.

ಮೊದಲ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್‌ಗಳಿಗೆ ಔಟಾಗಿದ್ದ ಮುಂಬೈ ಮೊದಲ ದಿನದಾಟದ ಬಳಿಕ 119 ರನ್‌ಗಳ ಮುನ್ನಡೆ ಸಾಧಿಸಿತು. ವಿದರ್ಭ ತಂಡವು ಭಾರಿ ಬ್ಯಾಟಿಂಗ್‌ ಕುಸಿತ ಅನುಭವಿಸಿದ ಪರಿಣಾಮ ಮೊದಲ ಇನ್ನಿಂಗ್ಸ್‌ನಲ್ಲಿ 105 ರನ್‌ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ | ಐಪಿಎಲ್‌ ಅಲ್ಲ, ಟಿ20 ವಿಶ್ವಕಪ್‌ಗೂ ಇಲ್ಲ; ಮೊಹಮ್ಮದ್‌ ಶಮಿ ಮತ್ತೆ ಮೈದಾನಕ್ಕಿಳಿಯುವ ದಿನ ತಿಳಿಸಿದ ಜಯ್‌ ಶಾ

ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ ತಂಡದ ಆರಂಭಿಕರಾದ ಪೃಥ್ವಿ ಶಾ ಕೇವಲ 11 ರನ್‌ ಗಳಿಸಿ ಕ್ಲೀನ್‌ ಬೋಲ್ಡ್‌ ಆದರು. ಭೂಪೇನ್ ಲಾಲ್ವಾನಿ 18 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಒಂದಾದ ರಹಾನೆ ಮತ್ತು ಮುಶೀರ್, 232 ಎಸೆತಗಳಲ್ಲಿ 107 ರನ್‌ಗಳ ಅಜೇಯ ಜೊತೆಯಾಟವಾಡಿದರು. ಇದು ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಈ ಬಾರಿಯ ರಣಜಿ ಋತುವಿನಲ್ಲಿ ಕೇವಲ 12 ರನ್‌ಗಳ ಸರಾಸರಿ ಹೊಂದಿರುವ ರಹಾನೆ, ನಿರ್ಣಾಯಕ ಫೈನಲ್‌ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಕೇವಲ ಎರಡನೇ ಅರ್ಧಶತಕ ಗಳಿಸುವ ಮೂಲಕ ತಮ್ಮ ಹಾಗೂ ತಂಡದ ಆತ್ಮವಿಶ್ವಾಸ ಹೆಚ್ಚಿಸಿದರು. ಅತ್ತ ಸರ್ಫರಾಜ್‌ ಖಾನ್‌ ತಮ್ಮ ಮುಶೀರ್ ಖಾನ್‌ 134 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ ಅಜೇಯ 51 ರನ್ ಗಳಿಸಿದ್ದಾರೆ.

ಇದನ್ನೂ ಓದಿ | ಚಾಣಕ್ಯನ ಬದಲಿಗೆ ಧೋನಿಯ 3D ಚಿತ್ರ ರಚಿಸಿದ ಎಐ; ನಗೆಪಾಟಲಿಗೀಡಾದ ಮಗಧ ಡಿಎಸ್ ವಿಶ್ವವಿದ್ಯಾಲಯ ಟ್ರೋಲ್

ಮುಂಬೈ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ರಹಾನೆ ಹಾಗೂ ಶ್ರೇಯಸ್‌ ಅಯ್ಯರ್‌ ತಲಾ 7 ರನ್‌ ಗಳಿಸಿ ಭಾರಿ ಟೀಕೆಗೊಳಗಾದರು. ಅತ್ತ ಆಲ್‌ರೌಂಟರ್‌ ಶಾರ್ದುಲ್‌ ಠಾಕೂರ್‌ ಸ್ಫೋಟಕ 75 ರನ್‌ ಗಳಿಸಿ ಮಿಂಚಿದರು. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಅನುಭವಿ ಆಟಗಾರರ ಪ್ರದರ್ಶನವು ಭಾರಿ ನಿರೀಕ್ಷೆ ಮೂಡಿಸಿದೆ. ಅಲ್ಲದೆ ಮೂರನೇ ದಿನದಾಟವು ಕುತೂಹಲದ ಘಟ್ಟ ತಲುಪಿದೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)