ನಾಯಕನಾಗಿ ಚರಿತ್ರೆ ಸೃಷ್ಟಿಸಲು ಸಜ್ಜಾದ ಅಜಿಂಕ್ಯ ರಹಾನೆ; ಕೊಹ್ಲಿ, ರೋಹಿತ್, ಧೋನಿಯೂ ಮಾಡಿಲ್ಲ ಈ ದಾಖಲೆ
ಕನ್ನಡ ಸುದ್ದಿ  /  ಕ್ರಿಕೆಟ್  /  ನಾಯಕನಾಗಿ ಚರಿತ್ರೆ ಸೃಷ್ಟಿಸಲು ಸಜ್ಜಾದ ಅಜಿಂಕ್ಯ ರಹಾನೆ; ಕೊಹ್ಲಿ, ರೋಹಿತ್, ಧೋನಿಯೂ ಮಾಡಿಲ್ಲ ಈ ದಾಖಲೆ

ನಾಯಕನಾಗಿ ಚರಿತ್ರೆ ಸೃಷ್ಟಿಸಲು ಸಜ್ಜಾದ ಅಜಿಂಕ್ಯ ರಹಾನೆ; ಕೊಹ್ಲಿ, ರೋಹಿತ್, ಧೋನಿಯೂ ಮಾಡಿಲ್ಲ ಈ ದಾಖಲೆ

18ನೇ ಆವೃತ್ತಿಯ ಐಪಿಎಲ್​ನಲ್ಲಿ ಅಜಿಂಕ್ಯ ರಹಾನೆ ಅವರು ಕೆಕೆಆರ್​ ತಂಡವನ್ನು ಮುನ್ನಡೆಲು ಸಜ್ಜಾಗಿದ್ದು, ಲೀಗ್​​ನಲ್ಲಿ 3 ವಿಭಿನ್ನ ತಂಡಗಳನ್ನು ಮುನ್ನಡೆಸಿದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ನಾಯಕನಾಗಿ ಚರಿತ್ರೆ ಸೃಷ್ಟಿಸಲು ಸಜ್ಜಾದ ಅಜಿಂಕ್ಯ ರಹಾನೆ; ಕೊಹ್ಲಿ, ರೋಹಿತ್, ಧೋನಿಯೂ ಮಾಡಿಲ್ಲ ಈ ದಾಖಲೆ
ನಾಯಕನಾಗಿ ಚರಿತ್ರೆ ಸೃಷ್ಟಿಸಲು ಸಜ್ಜಾದ ಅಜಿಂಕ್ಯ ರಹಾನೆ; ಕೊಹ್ಲಿ, ರೋಹಿತ್, ಧೋನಿಯೂ ಮಾಡಿಲ್ಲ ಈ ದಾಖಲೆ (HT_PRINT)

ಮುಂಬರುವ 18ನೇ ಆವೃತ್ತಿಯ ಐಪಿಎಲ್ ಆವೃತ್ತಿಯಲ್ಲಿ ಅಜಿಂಕ್ಯ ರಹಾನೆ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡ 2025ರ ಐಪಿಎಲ್ ಟೂರ್ನಿಗೆ ರಹಾನೆ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. 2019ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿದ್ದ ರಹಾನೆ, ಅದಾದ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಕ್ಯಾಪ್ಟನ್ ಆಗಿದ್ದಾರೆ. ವೆಂಕಟೇಶ್ ಅಯ್ಯರ್ ಈ ಪಾತ್ರಕ್ಕೆ ಮುಂಚೂಣಿಯಲ್ಲಿದ್ದರು. ಆದರೆ, ಅವರಿಗೆ ಉಪನಾಯಕತ್ವ ಪಟ್ಟ ಸಿಕ್ಕಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಕಳೆದ ಋತುವಿನಲ್ಲಿ 3ನೇ ಬಾರಿಗೆ ಪ್ರಶಸ್ತಿ ಗೆದ್ದಿತ್ತು. ಆದರೆ, ಮೆಗಾ ಹರಾಜಿಗೆ ಶ್ರೇಯಸ್ ತಂಡ ತೊರೆದರು. ಭಾರತದ ಸ್ಟಾರ್ ಬ್ಯಾಟರ್​ ಅಜಿಂಕ್ಯ ರಹಾನೆ ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿದ ಬೆನ್ನಲ್ಲೇ ಹೊಸ ಇತಿಹಾಸ ನಿರ್ಮಿಸಲಿದ್ದಾರೆ. ಇದರೊಂದಿಗೆ ರಹಾನೆ ಮೂರು ವಿಭಿನ್ನ ತಂಡಗಳನ್ನು ಮುನ್ನಡೆಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಧೋನಿ, ಕೊಹ್ಲಿ, ರೋಹಿತ್​ ಕೂಡ ಈ ಸಾಧನೆ ಮಾಡಿಲ್ಲ!

2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ರಹಾನೆ, ಅಂದು ಟೂರ್ನಿಯಿಂದ ಹೊರಬಿದ್ದ ಸ್ಟೀವ್ ಸ್ಮಿತ್ ಬದಲಿಗೆ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದರು. ಬಳಿಕ ರಾಜಸ್ಥಾನ್ ರಾಯಲ್ಸ್ ತಂಡವನ್ನೂ ಮುನ್ನಡೆಸಿದ್ದರು. ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್) ಮತ್ತು ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೇವಲ ಒಂದು ತಂಡವನ್ನು ಮುನ್ನಡೆಸಿದ್ದಾರೆ. ಎಂಎಸ್ ಧೋನಿ 2 ತಂಡಗಳನ್ನು ಮುನ್ನಡೆಸಿದ್ದಾರೆ. ಇವರು ಕೂಡ ಮಾಡದ ಸಾಧನೆ ರಹಾನೆ ಮಾಡಲು ಸಜ್ಜಾಗಿದ್ದಾರೆ.

ರಾಜಸ್ಥಾನ್ ರಾಯಲ್ಸ್ ನಾಯಕನಾಗಿದ್ದ ಸ್ಮಿತ್ 2018ರಲ್ಲಿ ಒಂದು ಆವೃತ್ತಿಗೆ ನಿಷೇಧಕ್ಕೆ ಒಳಗಾಗಿದ್ದರು. ಅದೇ ತಂಡದ ಭಾಗವಾಗಿದ್ದ ರಹಾನೆ, 2019ರಲ್ಲಿ ತಂಡದ ನಾಯಕತ್ವ ಪಡೆದರು. 2019ರ ವಿಶ್ವಕಪ್​ಗೆ ತಯಾರಿ ನಡೆಸಲು ನಾಯಕ ಸ್ಮಿತ್, ಲೀಗ್​ ಮಧ್ಯದಲ್ಲಿ ಭಾರತವನ್ನು ತೊರೆಯುತ್ತಾರೆ ಎಂಬ ಸುದ್ದಿ ಬಂದ ಹಿನ್ನೆಲೆ ಅವರನ್ನು ಟೂರ್ನಿಯ ಮಧ್ಯದಲ್ಲೇ ನಾಯಕತ್ವದಿಂದ ತೆಗೆದುಹಾಕಲಾಗಿತ್ತು.

2019ರ ನಂತರ ರಹಾನೆ ಡೆಲ್ಲಿ ಕ್ಯಾಪಿಟಲ್ಸ್, ಕೆಕೆಆರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಕಣಕ್ಕಿಳಿದಿದ್ದರು. ಕಳೆದ ವರ್ಷದ ಮೆಗಾ ಹರಾಜಿನಲ್ಲಿ ರಹಾನೆ ಕೆಕೆಆರ್​ಗೆ ಮರಳಿದರು. ಈಗ 3 ಬಾರಿಯ ಐಪಿಎಲ್ ಚಾಂಪಿಯನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಐಪಿಎಲ್​ ನಾಯಕತ್ವದಲ್ಲಿ ರಹಾನೆ ಕಳಪೆ ದಾಖಲೆ ಹೊಂದಿದ್ದಾರೆ. ಅವರು 25 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು, 9 ಗೆಲುವು, 16 ಸೋಲಿನ ರುಚಿ ಕಂಡಿದ್ದಾರೆ.

ಕೆಕೆಆರ್ ತಂಡ

ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಕ್ವಿಂಟನ್ ಡಿ ಕಾಕ್, ರಹಮಾನಲ್ಲಾ ಗುರ್ಬಾಜ್, ಅಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಆ್ಯನ್ರಿಚ್ ನೋಕಿಯಾ, ಹರ್ಷಿತ್ ರಾಣಾ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಮಾಯಾಂಕ್ ಮಾರ್ಕಂಡೆ, ರೋವ್ಮನ್ ಪೊವೆಲ್, ಮನೀಶ್ ಪಾಂಡೆ, ಸ್ಪೆನ್ಸರ್ ಜಾನ್ಸನ್, ಲುವ್ನಿತ್ ಸಿಸೋಡಿಯಾ, ಅನುಕುಲ್ ರಾಯ್, ಮೊಯಿನ್ ಅಲಿ, ಉಮ್ರಾನ್ ಮಲಿಕ್.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner