ಚಾಂಪಿಯನ್ಸ್ ಟ್ರೋಫಿಗೆ ಈ ದಿನದಂದು ಭಾರತ ತಂಡ ಪ್ರಕಟ ಸಾಧ್ಯತೆ; ಐಸಿಸಿ ಗಡುವು ಅಂತ್ಯಕ್ಕೆ ಆರೇ ದಿನ ಬಾಕಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿಗೆ ಈ ದಿನದಂದು ಭಾರತ ತಂಡ ಪ್ರಕಟ ಸಾಧ್ಯತೆ; ಐಸಿಸಿ ಗಡುವು ಅಂತ್ಯಕ್ಕೆ ಆರೇ ದಿನ ಬಾಕಿ

ಚಾಂಪಿಯನ್ಸ್ ಟ್ರೋಫಿಗೆ ಈ ದಿನದಂದು ಭಾರತ ತಂಡ ಪ್ರಕಟ ಸಾಧ್ಯತೆ; ಐಸಿಸಿ ಗಡುವು ಅಂತ್ಯಕ್ಕೆ ಆರೇ ದಿನ ಬಾಕಿ

ಫೆಬ್ರುವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಜನವರಿ 12ಕ್ಕಿಂತ ಮುಂಚೆ ತಂಡವನ್ನು ಪ್ರಕಟಿಸಬೇಕಿದೆ. ಬಿಸಿಸಿಐ ಆಯ್ಕೆ ಸಮಿತಿಯು ಅದಕ್ಕೂ ಮುನ್ನ ಟೀಮ್‌ ಇಂಡಿಯಾವನ್ನು ಪ್ರಕಟಿಸಲಿದೆ. ಐಸಿಸಿ ಗಡುವು ಅಂತಿಮವಾದ ಬಳಿಕ ತಂಡದಲ್ಲಿ ಮತ್ತೆ ಬದಲಾವಣೆ ಮಾಡಲು ಅವಕಾಶ ಇರಲಿದೆ.

ಜನವರಿ 12ರೊಳಗೆ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಅಂತಿಮ
ಜನವರಿ 12ರೊಳಗೆ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಅಂತಿಮ (PTI)

2024ರಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆದ ಭಾರತ ಕ್ರಿಕೆಟ್‌ ತಂಡವು, 2025ರ ಆರಂಭದಲ್ಲೇ ಬಾರ್ಡರ್-ಗವಾಸ್ಕರ್‌ ಟ್ರೋಫಿ ಸರಣಿ ಸೋಲುಗಳೊಂದಿಗೆ ಅಭಿಯಾನ ಆರಂಭಿಸಿತು. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕಿಳಿದು, ಫೈನಲ್‌ ಸ್ಥಾನವನ್ನು ಕಳೆದುಕೊಂಡಿತು. ಭಾರತ ತಂಡವು ಆಡಿದ ಕೊನೆಯ ಎಂಟು ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಸೋತಿದೆ. ಇದೀಗ ತಂಡದ ಮುಂದಿನ ಪಂದ್ಯಗಳ ಬಗ್ಗೆ ಅಭಿಮಾನಿಗಳಲ್ಲಿ ಆಸಕ್ತಿ ಮೂಡಿದೆ. ಫೆಬ್ರುವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದ್ದು, ಭಾರತ ತಂಡದ ಗಮನವು ವೈಟ್-ಬಾಲ್ ಕ್ರಿಕೆಟ್‌ನತ್ತ ತಿರುಗಲಿದೆ.

ಅದಕ್ಕೂ ಮೊದಲು ಜನವರಿ 22ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ 5 ಟಿ20 ಪಂದ್ಯ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ. ಹೀಗಾಗಿ ಭಾರತ ತಂಡದ ಆಯ್ಕೆ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು, ಶೀಘ್ರದಲ್ಲೇ ಇಂಗ್ಲೆಂಡ್‌ ವಿರುದ್ಧದ ಸರಣಿ ಮತ್ತು ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ 15 ಸದಸ್ಯರ ತಾತ್ಕಾಲಿಕ ತಂಡವನ್ನು ಆಯ್ಕೆ ಮಾಡಲು ಜನವರಿ 12 ಅಂತಿಮ ದಿನಾಂಕವಾಗಿದೆ. ಅದಕ್ಕೂ ಮುನ್ನ ತಂಡವನ್ನು ಅಂತಿಮಗೊಳಿಸಬೇಕಿದೆ. ಹೀಗಾಗಿ ಜನವರಿ 12ರೊಳಗೆ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಆದರೆ, ಫೆಬ್ರುವರಿ 13ರವರೆಗೆ ಬದಲಾವಣೆಗಳನ್ನು ಮಾಡಲು ಐಸಿಸಿ ಅವಕಾಶ ನೀಡುತ್ತದೆ.

ಅಧಿಕೃತವಾಗಿ ಫೆಬ್ರುವರಿ 13ರಂದು ಬಹಿರಂಗ

“ಎಲ್ಲಾ ತಂಡಗಳು ಜನವರಿ 12ರೊಳಗೆ ತಮ್ಮ ತಾತ್ಕಾಲಿಕ ತಂಡಗಳನ್ನು ಸಲ್ಲಿಸಬೇಕಾಗಿದೆ. ಆದರೆ ಫೆಬ್ರುವರಿ 13ರವರೆಗೆ ಬದಲಾವಣೆ ಮಾಡಲು ಅವಕಾಶವಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಸಿದ ತಂಡಗಳನ್ನು ಫೆಬ್ರುವರಿ 13ರ ನಂತರವೇ ಬಹಿರಂಗ ಮಾಡುತ್ತಿರುವುದರಿಂದ, ತಂಡವನ್ನು ಘೋಷಿವುದೋ ಬಿಡುವುದೋ ಎಂಬುದು ತಂಡಗಳಿಗೆ ಬಿಟ್ಟಿದ್ದು” ಎಂದು ಐಸಿಸಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡುವುದು ಬಹುತೇಕ ಖಚಿತ. ಇದೇ ವೇಳೆ ಜಸ್ಪ್ರೀತ್ ಬುಮ್ರಾ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಉಪನಾಯಕರಾಗಿ ಹೆಸರಿಸುವ ಸಾಧ್ಯತೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಚಾಂಪಿಯನ್ಸ್ ಟ್ರೋಫಿಗೆ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ರಿಷಭ್ ಪಂತ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್/ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.‌

Whats_app_banner