39 ರನ್‌ಗೆ ಉಗಾಂಡಾ ಆಲೌಟ್; ವೆಸ್ಟ್ ಇಂಡೀಸ್‌ಗೆ 134 ರನ್ ಭರ್ಜರಿ ಗೆಲುವು; ಟಿ20 ವಿಶ್ವಕಪ್‌ನಲ್ಲಿ ಕಳಪೆ ದಾಖಲೆ ಬರೆದ ಕ್ರಿಕೆಟ್ ಶಿಶು
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಟಿ20 ವಿಶ್ವಕಪ್‌ನಲ್ಲಿ 134 ರನ್‌ಗಳ ದಾಖಲೆಯ ಗೆಲುವು ಸಾಧಿಸಿದೆ. ಇದೇ ಪಂದ್ಯದಲ್ಲಿ 39 ರನ್‌ಗೆ ಆಲೌಟ್ ಆಗುವ ಮೂಲಕ ಕ್ರಿಕೆಟ್ ಶಿಶು ಉಗಾಂಡಾ ಕಳಪೆ ದಾಖಲೆ ನಿರ್ಮಿಸಿದೆ.

ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಎರಡನೇ ಜಯ ದಾಖಲಿಸಿದೆ. ಉಗಾಂಡಾ ವಿರುದ್ಧ (West Indies vs Uganda) 134 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ತವರಿನ ಆತಿಥ್ಯದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಅಕೆಲ್ ಹೊಸೈನ್ ಭರ್ಜರಿ ಐದು ವಿಕೆಟ್ ಕಬಳಿಸುವ ಮೂಲಕ ವಿಂಡೀಸ್‌ಗೆ ಭರ್ಜರಿ ಜಯ ಒಲಿಸಿದರು. ಇದರೊಂದಿಗೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅತ್ತ ಟಿ20 ವಿಶ್ವಕಪ್ ಇತಿಹಾಸದಲ್ಲಿ ಜಂಟಿಯಾಗಿ ಅತ್ಯಂತ ಕನಿಷ್ಠ ಮೊತ್ತ ದಾಖಲಿಸಿದ ಕುಖ್ಯಾತಿಗೆ ಉಗಾಂಡ ಪಾತ್ರವಾಯ್ತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, 5 ವಿಕೆಟ್ ಕಳೆದುಕೊಂಡು 173ರ ಸವಾಲಿನ ಮೊತ್ತ ಕಲೆ ಹಾಕಿತು. ಜಾನ್ಸನ್ ಚಾರ್ಲ್ಸ್ ತಂಡದ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು. ಆಲ್‌ರೌಂಡರ್ ಆಂಡ್ರೆ ರಸೆಲ್ (30) ಆತಿಥೇಯರ ಪರ ಇನ್ನಿಂಗ್ಸ್‌ಗೆ ಉತ್ತಮ ಅಂತ್ಯಕೊಟ್ಟರು. ಭರ್ಜರಿ ಗುರಿ ಬೆನ್ನಟ್ಟಿದ ಉಗಾಂಡಾ, ಕೇವಲ 12 ಓವರ್‌ಗಳಲ್ಲಿ 39 ರನ್ ಗಳಿಸಿ ಆಲೌಟ್ ಆಯ್ತು. 11 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸುವ ಮೂಲಕ ಹೊಸೈನ್ ಆರ್ಭಟಿಸಿದರು. ಈ ಗೆಲುವಿನೊಂದಿಗೆ ವಿಂಡೀಸ್ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ವೆಸ್ಟ್ ಇಂಡೀಸ್ ಪರ ಆರಂಭಿಕ ಎರಡು ಓವರ್‌ಗಳಲ್ಲಿ ಜಾನ್ಸನ್ ಚಾರ್ಲ್ಸ್ ವೇಗಿಗಳ ವಿರುದ್ಧ ಆಕ್ರಮಣಕಾರಿ ಆಟಕ್ಕೆ ಇಳಿದರು. ಅನುಭವಿ ನಿಕೋಲಸ್ ಪೂರನ್ ಕೂಡಾ ವೇಗವಾಗಿ ರನ್ ಕಲೆ ಹಾಕಲು ಮುಂದಾದರು. ಉತ್ತಮ ಆರಂಭದ ಹೊರತಾಗಿಯೂ ಡೆತ್ ಓವರ್‌ಗಳಲ್ಲಿ ತಂಡದಿಂದ ಮೊತ್ತ ಹೆಚ್ಚಿಸಲು ಸಾಧ್ಯವಾಗಲಿಲ್ಲ. ತಂಡದ ಪರ ಯಾವುದೇ ಬ್ಯಾಟರ್‌ಗಳಿಂದಲೂ ಅರ್ಧಶತಕ ಸಿಡಿಯಲಿಲ್ಲ.
ಬೃಹತ್ ಗುರಿಗೆ ಉತ್ತರವಾಗಿ ಉಗಾಂಡಾ ಮೊದಲ 37 ಎಸೆತಗಳಲ್ಲಿ ಕೇವಲ 22 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಕೇವಲ 39 ರನ್‌ಗಳಿಗೆ ಆಲೌಟ್ ಆಗಿ ಕಳಪೆ ದಾಖಲೆ ಬರೆಯಿತು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಜಂಟಿಯಾಗಿ ದಾಖಲಿಸಿದ ಅತ್ಯಲ್ಪ ಮೊತ್ತವಾಗಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲ್ ಔಟ್ ಆದ ತಂಡಗಳು
- 39 - ನೆದರ್ಲೆಂಡ್ಸ್ (ಶ್ರೀಲಂಕಾ ವಿರುದ್ಧ), ಚಟ್ಟೋಗ್ರಾಮ್ -2014
- 39 - ಉಗಾಂಡ (ವೆಸ್ಟ್ ಇಂಡೀಸ್ ವಿರುದ್ಧ), ಪ್ರಾವಿಡೆನ್ಸ್ -2024*
- 44 - ನೆದರ್ಲೆಂಡ್ಸ್ (ಶ್ರೀಲಂಕಾ ವಿರುದ್ಧ), ಶಾರ್ಜಾ, 2021
- 55 - ವೆಸ್ಟ್ ಇಂಡೀಸ್ (ಇಂಗ್ಲೆಂಡ್ ವಿರುದ್ಧ), ದುಬೈ, 2021
- 58 - ಉಗಾಂಡ (ಅಫ್ಘಾನಿಸ್ತಾನ ವಿರುದ್ಧ), ಗಯಾನಾ, 2024
ಎರಡನೇ ಅತಿ ದೊಡ್ಡ ಗೆಲುವು
ವೆಸ್ಟ್ ಇಂಡೀಸ್ ಪಾಲಿಗೆ ಇದು ಟಿ20 ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಗೆಲುವಾಗಿದೆ. ಒಟ್ಟಾರೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಎರಡನೇ ಅತಿ ದೊಡ್ಡ ಗೆಲುವಾಗಿದೆ. 2007ರಲ್ಲಿ ಕೀನ್ಯಾ ವಿರುದ್ಧ ಶ್ರೀಲಂಕಾ 172 ರನ್‌ಗಳ ಅಂತರದಿಂದ ಗೆದ್ದಿರುವುದು ಅತಿ ದೊಡ್ಡ ಜಯವಾಗಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ 36 ರನ್ ಭರ್ಜರಿ ಜಯ; ಹಾಲಿ ಚಾಂಪಿಯನ್ಗೆ ಟೂರ್ನಿಯಿಂದ ಹೊರಬೀಳುವ ಭೀತಿ
