ಕನ್ನಡ ಸುದ್ದಿ  /  Cricket  /  All-round Gujarat Titans Beat Mumbai Indians In Last Over Thriller Hardik Pandya Shubman Gill Cricket News Gt Vs Mi Prs

ಮಾಜಿ ತಂಡದ ವಿರುದ್ಧ ಸೋತ ಹಾರ್ದಿಕ್​ ಪಾಂಡ್ಯಗೆ ತೀವ್ರ ಮುಖಭಂಗ; ಮುಂಬೈ ವಿರುದ್ಧ ಗುಜರಾತ್​ಗೆ ರೋಚಕ ಗೆಲುವು

Mumbai Indians vs Gujarat Titans: ಐಪಿಎಲ್​ನ 5ನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಸೋತು ತೀವ್ರ ಮುಖಭಂಗಕ್ಕೆ ಒಳಗಾಗಿದೆ.

ಮುಂಬೈ ವಿರುದ್ಧ ಗುಜರಾತ್​ಗೆ ರೋಚಕ ಗೆಲುವು
ಮುಂಬೈ ವಿರುದ್ಧ ಗುಜರಾತ್​ಗೆ ರೋಚಕ ಗೆಲುವು (ANI)

17ನೇ ಆವೃತ್ತಿಯ ಐಪಿಎಲ್​ನ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 6 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೆಲುವಿನಂಚಿನಲ್ಲಿದ್ದರೂ ಗುಜರಾತ್​ ಬೌಲರ್​​ಗಳ ಖಡಕ್ ಬೌಲಿಂಗ್​​ ದಾಳಿಗೆ ಮುಂಬೈ ಮಂಕಾಯಿತು. ಇದರೊಂದಿಗೆ 2012 ರಿಂದ ಇಲ್ಲಿಯವರೆಗೂ ಮುಂಬೈ ತನ್ನ ಆರಂಭಿಕ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಮುಂಬೈ ಪರ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿ ಹಾರ್ದಿಕ್ ಸೋತು ಮುಖಭಂಗಕ್ಕೆ ಒಳಗಾದರು. ಚೊಚ್ಚಲ ಐಪಿಎಲ್ ನಾಯಕತ್ವ ಪಡೆದ ಶುಭ್ಮನ್ ಗಿಲ್ ಗೆಲುವಿನೊಂದಿಗೆ ಕ್ಯಾಪ್ಟನ್ಸಿ ಜೆರ್ನಿಯನ್ನು ಆರಂಭಿಸಿದರು.

ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ತಂಡವು, ಜಸ್ಪ್ರೀತ್ ಬುಮ್ರಾ ಮತ್ತು ಜೆರಾಲ್ಡ್ ಕೊಯೆಟ್ಜಿ ಬೌಲಿಂಗ್ ದಾಳಿಗೆ ತತ್ತರಿಸಿತು. ಪರಿಣಾಮ 20 ಓವರ್​​ಗಳಲ್ಲಿ 6 ವಿಕೆಟ್​ಗೆ 168 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಈ ಗುರಿ ಹಿಂಬಾಲಿಸಿದ ಮುಂಬೈ ತಂಡವು ರೋಹಿತ್​-ಡೆವಾಲ್ಡ್ ಬ್ರೆವಿಸ್ ಅವರ ಉತ್ತಮ ಜೊತೆಯಾಟದ ನೆರವಿನಿಂದ 20 ಓವರ್​ಗಳಲ್ಲಿ 8 ವಿಕೆಟ್​ಗೆ 162 ರನ್ ಗಳಿಸಲಷ್ಟೇ ಶಕ್ತವಾಯಿತು.

169 ರನ್​ಗಳ ಗುರಿ ಬೆನ್ನಟ್ಟಲು ಕ್ರೀಸ್​ಗೆ ಬಂದ ಇಶಾನ್ ಕಿಶನ್ ಮೊದಲ ಓವರ್​​ನಲ್ಲೇ ವಿಕೆಟ್ ಒಪ್ಪಿಸಿ ಹೊರ ನಡೆದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ನಮನ್ ಧೀರ್ 20 ರನ್​ಗಳ ಅಲ್ಪಮೊತ್ತಕ್ಕೆ ಕುಸಿದರು. ಇಬ್ಬರಿಗೂ ಅಜ್ಮತುಲ್ಲಾ ಒಮರ್ಜಾಯ್​ ಪೆವಿಲಿಯನ್ ದಾರಿ ತೋರಿಸಿದರು. 30ಕ್ಕೆ 2 ವಿಕೆಟ್ ನಷ್ಟಗೊಂಡು ಆರಂಭದಲ್ಲೇ ಒತ್ತಡಕ್ಕೆ ಒಳಗಾದ ಮುಂಬೈಗೆ ಮಾಜಿ ನಾಯಕ ರೋಹಿತ್ ಮತ್ತು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿದ ಡೇವಾಲ್ಡ್ ಬ್ರೆವಿಸ್ ಜೀವ ತುಂಬಿದರು.

ಈ ಜೋಡಿ ಮೂರನೇ ವಿಕೆಟ್​ಗೆ 77 ರನ್​ಗಳ ಪಾಲುದಾರಿಕೆ ನೀಡಿದರು. ಆ ಮೂಲಕ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ನಿಲ್ಲಿಸಿದರು. ಆದರೆ ಇಬ್ಬರು ಸಹ ಅರ್ಧಶತಕದ ಅಂಚಿನಲ್ಲಿ ಎಡವಿದರು. ರೋಹಿತ್​ 43, ಬ್ರೆವಿಸ್ 46 ರನ್ ಗಳಿಸಿ ಔಟಾದರು. ಮುಂಬೈ ಬ್ಯಾಟಿಂಗ್ ವೇಳೆ ಭರ್ಜರಿ ಫೀಲ್ಡಿಂಗ್ ನಡೆಸಿದ ಗುಜರಾತ್ ಆಟಗಾರರು ಸಾಕಷ್ಟು ರನ್​ಗಳನ್ನು ರಕ್ಷಿಸಿದರು. ಅಲ್ಲದೆ, ಈ ಇಬ್ಬರು ಔಟಾದ ನಂತರ ಗುಜರಾತ್ ಟೈಟ್ ಬೌಲಿಂಗ್ ನಡೆಸಿತು.

ಮೋಹಿತ್​ ಶರ್ಮಾ, ಸಾಯಿ ಕಿಶೋರ್​ ಮತ್ತು ರಶೀದ್ ಖಾನ್ ಅವರು ಖಡಕ್ ಬೌಲಿಂಗ್ ನಡೆಸಿದರು. ಇದರೊಂದಿಗೆ ಗೆಲುವಿನ ಅಂಚಿನಲ್ಲಿದ್ದ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಕ್ರೀಸ್​​ನಲ್ಲಿದ್ದರೂ ರನ್ ಗಳಿಸಲು ಪರದಾಟ ನಡೆಸಿದರು. ಎಂಐ ಗೆಲುವಿಗೆ ಇನ್ನೂ 13 ಎಸೆತಗಳಲ್ಲಿ 27 ರನ್ ಬೇಕಿದ್ದ ಅವಧಿಯಲ್ಲಿ ಡೇವಿಡ್ (11), ಮೋಹಿತ್​ ಶರ್ಮಾ ಬೌಲಿಂಗ್​ನಲ್ಲಿ ಔಟಾದರು. 19ನೇ ಓವರ್​​ನಲ್ಲಿ ತಿಲಕ್ (25) ಮತ್ತು ಜೆರಾಲ್ಟ್ ಕೊಯೆಟ್ಜಿ ಇಬ್ಬರನ್ನು ಸ್ಪೆನ್ಸರ್​ ಔಟ್ ಮಾಡಿದರು.

ಪರಿಣಾಮ ಅಂತಿಮ ಓವರ್​ನಲ್ಲಿ ಮುಂಬೈ ಗೆಲ್ಲಲು 19 ರನ್ ಬೇಕಾಯಿತು. ಉಮೇಶ್ ಯಾದವ್ ಎಸೆದ 20ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ಸ್ಟ್ರೈಕ್​ನಲ್ಲಿದ್ದ ನಾಯಕ ಹಾರ್ದಿಕ್ ಪಾಂಡ್ಯ ಸಿಕ್ಸ್​​​, ಬೌಂಡರಿ ಸಿಡಿಸಿ ಗೆಲುವನ್ನು ಹತ್ತಿರಕ್ಕೆ ತಂದರು. ಆದರೆ ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಹಾರ್ದಿಕ್ ಮತ್ತು ಪಿಯೂಷ್ ಚಾವ್ಲಾರನ್ನು ಔಟಾದರು. ಇದರೊಂದಿಗೆ ಮುಂಬೈ, ತನ್ನ ನೂತನ ನಾಯಕನ ಅಡಿಯಲ್ಲಿ ಸೋಲಿನೊಂದಿಗೆ 17ನೇ ಆವೃತ್ತಿಯ ಐಪಿಎಲ್ ಪ್ರಾರಂಭಿಸಿತು.

ಸಾಯಿ ಸುದರ್ಶನ್ ಹೋರಾಟ, ಬುಮ್ರಾ ಮಿಂಚು

ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ವೃದ್ಧಿಮಾನ್ ಸಾಹ 19 ರನ್​ ಗಳಿಗೆ ಆಟ ಮುಗಿಸಿದರು. ನಾಯಕ ಶುಭ್ಮನ್ ಗಿಲ್ ಬಿರುಸಿನ ಬ್ಯಾಟಿಂಗ್ ನಡೆಸದೆ, ವಿಕೆಟ್ ಕಾಪಾಡುವ ಒತ್ತಡದೊಂದಿಗೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಗಿಲ್, 31 ರನ್​​ಗಳಿಗೆ ಸುಸ್ತಾದರು. 64ಕ್ಕೆ ಆರಂಭಿಕ ಎರಡು ವಿಕೆಟ್​ಗಳನ್ನು ಕಳೆದುಕೊಂಡರು. ಈ ಇಬ್ಬರಿಗೂ ಬುಮ್ರಾ ಮತ್ತು ಪಿಯೂಷ್ ಚಾವ್ಲಾ ಗೇಟ್​ಪಾಸ್ ನೀಡಿದರು.

ಆರಂಭಿಕ ವಿಕೆಟ್​ಗಳ ಪತನದ ನಂತರ ಸಾಯಿ ಸುದರ್ಶನ್ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಅವರಿಗೆ ಯಾರೂ ಕೂಡ ಸಾಥ್ ನೀಡಲಿಲ್ಲ. ಒಮರ್ಜಾಯ್ ಅಜ್ಮತುಲ್ಲಾ 17, ಡೇವಿಡ್ ಮಿಲ್ಲರ್ 12 ರನ್ ಗಳಿಸಿ ಮಧ್ಯಮ ಕ್ರಮಾಂಕ ಕುಸಿತಕ್ಕೆ ಕಾರಣರಾದರು. ಸತತ ವಿಕೆಟ್ ಪತನದ ಒತ್ತಡದಲ್ಲೂ ಹೋರಾಡಿದ ಸುದರ್ಶನ್ 39 ಎಸೆತಗಳಲ್ಲಿ 45 ರನ್ ಗಳಿಸಿ ಔಟಾದರು. 3 ಬೌಂಡರಿ, 1 ಸಿಕ್ಸರ್ ಅವರ ಇನ್ನಿಂಗ್ಸ್​​ನಲ್ಲಿತ್ತು. ಬುಮ್ರಾ ಮತ್ತು ಕೊಯೆಟ್ಜಿ ಜೋಡಿ ಇಲ್ಲಿ ಮೇಲುಗೈ ಸಾಧಿಸಿತು.

ಕೊನೆಯಲ್ಲಿ ಕಣಕ್ಕಿಳಿದ ವಿಜಯ್ ಶಂಕರ್ ಮತ್ತು ರಾಹುಲ್ ತೆವಾಟಿಯಾ ತಂಡದ ಮೊತ್ತವನ್ನು ಹೆಚ್ಚಿಸಲು ಯತ್ನಿಸಲಿಲ್ಲ. ಡೆತ್ ಓವರ್​​​ಗಳಲ್ಲೂ ರನ್ ಗಳಿಸಲು ಪರದಾಡಿದರು. ತೆವಾಟಿಯಾ 15 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್​ ಸಹಿತ 22 ರನ್ ಗಳಿಸಿದರೆ, ವಿಜಯ್ ಶಂಕರ್ 5 ಬಾಲ್​ಗಳಲ್ಲಿ 6 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಅಂತಿಮವಾಗಿ ಗುಜರಾತ್ 20 ಓವರ್​ಗಳಲ್ಲಿ 6 ವಿಕೆಟ್​​ಗೆ 168 ರನ್ ಗಳಿಸಿತು. ಜಸ್ಪ್ರೀತ್ ಬುಮ್ರಾ 3 ವಿಕೆಟ್, ಜೆರಾಲ್ಡ್ ಕೊಯೆಟ್ಜಿ 2 ವಿಕೆಟ್ ಪಡೆದು ಮಿಂಚಿದರು.