ಸರ್ಫರಾಜ್ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ; ನೌಶದ್ಗೆ ಥಾರ್ ಕಾರು ಗಿಫ್ಟ್ ಕೊಡ್ತೇನೆ ಎಂದ ಆನಂದ್ ಮಹೀಂದ್ರಾ
Anand Mahindra : ಸರ್ಫರಾಜ್ ಖಾನ್ ಅವರ ತಂದೆ ನೌಶಾದ್ ಖಾನ್ಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಹೊಸ ಥಾರ್ ಕಾರು ಉಡುಗೊರೆ ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಹಾಗೂ ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ. ರಾಜ್ಕೋಟ್ನ ನಿರಂಜನ್ ಶಾ ಕ್ರಿಕೆಟ್ ಮೈದಾನದಲ್ಲಿ ಜರುಗುತ್ತಿರುವ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ದದ 3ನೇ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಹಾಗೂ ಅವರ ತಂದೆ ನೌಶದ್ ಖಾನ್ ಅವರಿಗೆ ಥಾರ್ ಕಾರು ಉಡುಗೊರೆ ನೀಡಲು ಉದ್ಯಮಿ ನಿರ್ಧರಿಸಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ ಬೀಸಿದ ಸರ್ಫರಾಜ್ ಖಾನ್ ಗಮನಾರ್ಹ ಪ್ರದರ್ಶನ ನೀಡಿದರು. ಆಡಿದ 75 ನಿಮಿಷಗಳ ಆಟದಲ್ಲಿ 66 ಎಸೆತಗಳನ್ನು ಎದುರಿಸಿದ ಯುವ ಆಟಗಾರ 9 ಬೌಂಡರಿ, 1 ಸಿಕ್ಸರ್ ಸಹಿತ 62 ರನ್ ಚಚ್ಚಿದರು. ಆದರೆ 81.5ನೇ ಓವರ್ನಲ್ಲಿ ದುರದೃಷ್ಟಕರ ರನೌಟ್ಗೆ ಬಲಿಯಾದರು. ಇದು ಅವರಿಗೆ ಭಾರಿ ನಿರಾಸೆ ಮೂಡಿಸಿತು. ರವೀಂದ್ರ ಜಡೇಜಾ ಅವರು ಸಿಂಗಲ್ಗಾಗಿ ಕರೆ ನೀಡಿದ ಕಾರಣ ಮುಂಬೈ ಆಟಗಾರ ಓಡಿದರು. ಜಡ್ಡು ರನ್ ನಿರಾಕರಿಸಿ ರನೌಟ್ ಮಾಡಿದರು.
ಮಗನಿಗೆ ಬೆನ್ನುಲುಬಾಗಿ ನಿಂತ ನೌಶದ್
ಕಳೆದ 15 ವರ್ಷಗಳಿಂದ ಸರ್ಫರಾಜ್ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ತಂದೆ ನೌಶಾದ್ ಖಾನ್ ಮಹತ್ವದ ಪಾತ್ರ ವಹಿಸಿದ್ದಾರೆ. ಸರ್ಫರಾಜ್ಗೆ 6 ವರ್ಷವಿದ್ದಾಗಲೇ ಕ್ರಿಕೆಟ್ ಆಡುವುದನ್ನು ಕಲಿಸಲು ಪ್ರಾರಂಭಿಸಿದ ತಂದೆ, ದೊಡ್ಡ ಕೋಚ್ ಕೂಡ ಆಗಿದ್ದಾರೆ. ಮಗನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದರು. ಸರ್ಫರಾಜ್ಗೆ ಕಷ್ಟವೇ ಗೊತ್ತಾಗದಂತೆ ಬೆಳೆಸಿದರು. ಸರ್ಫರಾಜ್ ದೇಶೀಯ ಕ್ರಿಕೆಟ್ನಲ್ಲಿ ಧೂಳೆಬ್ಬಿಸಲು ಅವರ ತಂದೆಯ ಮಾರ್ಗದರ್ಶನವೇ ಕಾರಣ.
ಪಶ್ಚಿಮ ರೈಲ್ವೆಯಲ್ಲಿ ಉದ್ಯೋಗಿಯಾಗಿರುವ ನೌಶಾದ್ ಅಷ್ಟೇನೂ ಶ್ರೀಮಂತ ಕುಟುಂಬ ಹಿನ್ನೆಲೆಯಿಂದ ಬಂದವರಲ್ಲ. ಚಲಿಸುವ ರೈಲುಗಳಲ್ಲಿ ಮಿಠಾಯಿ ಮತ್ತು ಸೌತೆಕಾಯಿಗಳನ್ನು ಮಾರಾಟ ಮಾಡುವುದರಿಂದ ಹಿಡಿದು ಟ್ರ್ಯಾಕ್ ಪ್ಯಾಂಟ್ಗಳನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯವನ್ನು ಪೂರೈಸುವವರೆಗೆ, ನೌಶಾದ್ ಜೀವನ ಸುಲಭವಾಗಿರಲಿಲ್ಲ. ಆದರೆ ತನ್ನ ಮಗ ತನ್ನದೇ ಆದ ಹೆಸರನ್ನು ಗಳಿಸುವಂತೆ ನೋಡಿಕೊಂಡರು. ನೌಶಾದ್ ಅವರು ಸರ್ಫರಾಜ್ ಅವರ ಉತ್ಸಾಹವನ್ನು ಕುಗ್ಗದಂತೆ ನೋಡಿಕೊಂಡರು.
ಆನಂದ್ ಮಹೀಂದ್ರಾ ಹೇಳಿದ್ದೇನು?
ಸರ್ಫರಾಜ್ ಖಾನ್ ಅವರ ತಂದೆ ನೌಶಾದ್ ಖಾನ್ಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಹೊಸ ಥಾರ್ ಕಾರು ಉಡುಗೊರೆ ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ. ರಣಜಿಯಲ್ಲಿ ಟನ್ಗಟ್ಟಲೆ ರನ್ ಗಳಿಸಿದರೂ ಭಾರತ ತಂಡದ ಬಾಗಿಲು ತೆರೆದಿರಲಿಲ್ಲ. ಕೊನೆಗೂ ಅವಕಾಶದ ಬಾಗಿಲು ತೆರೆದಿದೆ. ಇಷ್ಟು ವರ್ಷ ಮಗನ ಬೆಂಗಾವಲಾಗಿ ನಿಂತಿದ್ದ ನೌಶಾದ್ ಅವರು ಸ್ವೀಕರಿಸಲು ಬಯಸಿದರೆ ಥಾರ್ ಕಾರನ್ನು ಗಿಫ್ಟ್ ನೀಡುವುದು ಗೌರವ ಎಂದು ಉದ್ಯಮಿ ಟ್ವೀಟ್ ಮಾಡಿದ್ದಾರೆ.
ಧೈರ್ಯ, ತಾಳ್ಮೆ, ಕಠಿಣ ಪರಿಶ್ರಮ. ಮಗನಿಗೆ ಪ್ರೋತ್ಸಾಹ ನೀಡಲು ತಂದೆಗೆ ಇದಕ್ಕಿಂತ ಉತ್ತಮ ಯಾವ ಗುಣಗಳು ಇರಲು ಸಾಧ್ಯ ಹೇಳಿ? ಸ್ಪೂರ್ತಿದಾಯಕ ಪೋಷಕರಾದ ನೌಶಾದ್ ಖಾನ್ ಅವರಿಗೆ ಥಾರ್ ಕಾರು ಗಿಫ್ಟ್ ಕೊಡುವುದು ಗೌರವ ಎಂದು ಭಾವಿಸುತ್ತೇನೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ಸರ್ಫರಾಜ್ ಖಾನ್ ಪ್ರಾಕ್ಟೀಸ್ ಮತ್ತು ಟೆಸ್ಟ್ ಕ್ಯಾಪ್ ಪಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಅನಿಲ್ ಕುಂಬ್ಳೆ ಅವರಿಂದ ಸರ್ಫರಾಜ್ ಖಾನ್ ಟೆಸ್ಟ್ ಕ್ಯಾಪ್ ಪಡೆದರು. ಅವಿಸ್ಮರಣೀಯ ಕ್ಷಣವನ್ನು ಅವರ ಪತ್ನಿ, ತಂದೆ ಕಣ್ತುಂಬಿಕೊಂಡರು. ಮಗ ಟೆಸ್ಟ್ ಕ್ಯಾಪ್ ಪಡೆದ ಸಂದರ್ಭದಲ್ಲಿ ತಂದೆ ಆನಂದಭಾಷ್ಪ ಸುರಿಸಿದರು. ಸರ್ಫರಾಜ್ ಫಸ್ಟ್ ಕ್ರಿಕೆಟ್ನಲ್ಲಿ 45 ಪಂದ್ಯಗಳಲ್ಲಿ 3912 ರನ್ ಗಳಿಸಿದ್ದಾರೆ. ಅವರು 14 ಶತಕ ಮತ್ತು 11 ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಖಾತೆಯಲ್ಲಿ ತ್ರಿಶತಕವೂ ಇದೆ.