ರಿಷಭ್ ಪಂತ್ ಕಳಪೆ ಪ್ರದರ್ಶನ, ಚರ್ಚಿಸುತ್ತಿದ್ದ ಲೈವ್ನಲ್ಲೇ ಟಿವಿ ಒಡೆದು ಹಾಕಿದ ನಿರೂಪಕ; ವಿಡಿಯೋ ವೈರಲ್
Rishabh Pant: ರಿಷಭ್ ಪಂತ್ ಅವರ ಐಪಿಎಲ್ ಬ್ಯಾಟಿಂಗ್ ಬಗ್ಗೆ ಚರ್ಚಿಸುತ್ತಿದ್ದ ಸ್ಪೋರ್ಟ್ಸ್ಟ್ಯಾಕ್ನ ನಿರೂಪಕರೊಬ್ಬರು ಲೈವ್ನಲ್ಲೇ ಆಕ್ರೋಶ ಹೊರಹಾಕಿ ಟಿವಿ ಒಡೆದು ಹಾಕಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಅವರು ಮತ್ತೆ ವೈಫಲ್ಯ ಅನುಭವಿಸಿದ ಹಿನ್ನೆಲೆ ಅತೃಪ್ತರಾದ ನಿರೂಪಕನೊಬ್ಬ ಲೈವ್ ಕಾರ್ಯಕ್ರಮದಲ್ಲೇ ಟಿವಿ ಒಡೆದು ಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್ ಆಗಿದ್ದ ವಿಕೆಟ್ ಕೀಪರ್ ಬ್ಯಾಟರ್, 2ನೇ ಪಂದ್ಯದಲ್ಲಿ ಕೇವಲ 16 ರನ್ ಸಿಡಿಸಿದರು. ಎಸ್ಆರ್ಹೆಚ್ ಎದುರಿನ ಪಂದ್ಯದಲ್ಲಿ ಪಂತ್ ಔಟಾದ ಬೆನ್ನಲ್ಲೇ ಹತಾಶೆ ಹೊರಹಾಕಿದ ನಿರೂಪಕ ಟಿವಿ ಒಡೆದು ಹಾಕಿದ್ದರ ಜೊತೆಗೆ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಪಂತ್ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದಾರೆ. ಪಂತ್ರನ್ನು ಎಲ್‌ಎಸ್‌ಜಿ 27 ಕೋಟಿ ರೂ.ಗೆ ಖರೀದಿಸಿತು. ಆದರೆ ಇಲ್ಲಿಯವರೆಗೆ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂತ್ ಅವರ ಕಳಪೆ ಪ್ರದರ್ಶನ ಮತ್ತೊಮ್ಮೆ ಕಂಡುಬಂದಿತು. ಈ ಕಳಪೆ ಪ್ರದರ್ಶನದ ಹಿನ್ನೆಲೆ ಪಂತ್ ಮೇಲೆ ಆಕ್ರೋಶ ಹೊರಹಾಕಿದ ನಿರೂಪಕ, ಲೈವ್ ಕಾರ್ಯಕ್ರಮದಲ್ಲಿ ರಿಮೋಟ್ ಎಸೆದು ಒಡೆದು ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್ಆರ್ಹೆಚ್, ತನ್ನ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಎಲ್‌ಎಸ್‌ಜಿ 16.1 ಓವರ್ಗಳಲ್ಲೇ 5 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿ 5 ವಿಕೆಟ್ಗಳ ಗೆಲುವಿನ ಕೇಕೆ ಹಾಕಿತು. ಲಕ್ನೋ ಪರ ಬೌಲಿಂಗ್ನಲ್ಲಿ ಶಾರ್ದೂಲ್ ಠಾಕೂರ್ 4 ವಿಕೆಟ್ ಉರುಳಿಸಿ ಮಿಂಚಿದರೆ, ಬ್ಯಾಟಿಂಗ್‌ನಲ್ಲಿ ನಿಕೋಲಸ್ ಪೂರನ್ (70) ಮತ್ತು ಮಿಚೆಲ್ ಮಾರ್ಷ್ (52) ಅಬ್ಬರಿಸಿದರು. ಇಬ್ಬರು ತಲಾ ಅರ್ಧಶತಕ ಸಿಡಿಸಿ ಗಮನ ಸೆಳೆದರು.
ಎಲ್‌ಎಸ್‌ಜಿ ನಾಯಕನ ಪ್ರದರ್ಶನದ ಬಗ್ಗೆ ಸ್ಪೋರ್ಟ್ಸ್ಟ್ಯಾಕ್ನಲ್ಲಿ ಒಟ್ಟು ಐವರು ಚರ್ಚೆ ನಡೆಸುತ್ತಿದ್ದರು. ಆದರೆ ಅತಿಯಾದ ಕೋಪದಲ್ಲಿ ಅವರು ಟಿವಿ ಪರದೆಯನ್ನು ಒಡೆದು ಗಾಜಿನ ಮೇಜನ್ನು ಉರುಳಿಸಲು ಪ್ರಯತ್ನಿಸಿದರು. ಐಪಿಎಲ್ ನಡೆಯುತ್ತಿದೆ. ಅವನಿಗೆ (ರಿಷಭ್ ಪಂತ್) ಅವಕಾಶ ಸಿಕ್ಕಿದೆ. ಅವನು ಊಹಿಸಬಹುದಾದವನಾಗಿದ್ದಾನೆ. ನೀವು ಅವನನ್ನು ನಂಬಲು ಸಾಧ್ಯವಿಲ್ಲ. ಅವನು ಯಾವ ರೀತಿಯ ನಾಯಕ? ನಮಗೆ ಅವನಂತಹ ನಾಯಕ ಅಗತ್ಯವಿಲ್ಲ ಎಂದು ಟಿವಿ ಪರದೆಯ ಮೇಲೆ ವಸ್ತು ಎಸೆದರು. ರಿಷಭ್ ಪಂತ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಆ ನಿರೂಪಕನ ನಡೆಗೆ ತೀವ್ರ ಆಕ್ರೋಶ ಕೇಳಿ ಬರುತ್ತಿದೆ.
ಪಂತ್ ಐಪಿಎಲ್ ವೃತ್ತಿಜೀವನ
ಐಪಿಎಲ್ ಇತಿಹಾಸದಲ್ಲಿ ರಿಷಭ್ ಪಂತ್, 113 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಆದರೆ 2226 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 34.73. ಸ್ಟ್ರೈಕ್ರೇಟ್ 148.21 ಇದೆ. ಅವರ ಐಪಿಎಲ್ ವೃತ್ತಿಜೀವನದಲ್ಲಿ 18 ಅರ್ಧಶತಕ, 1 ಶತಕ ಇದೆ. ಗರಿಷ್ಠ ಸ್ಕೋರ್ 128. 2016ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಪಂತ್, 2024ರ ತನಕ ಡೆಲ್ಲಿ ತಂಡದ ಪರವೇ ಆಡಿದ್ದರು. ಇದೀಗ ಲಕ್ನೋ ಪರ ಆಡುತ್ತಿದ್ದಾರೆ.
