ಕನ್ನಡ ಸುದ್ದಿ  /  Cricket  /  Andhra Pradesh Batter Vamshhi Krrishna His Smashes Six Sixes In An Over Joins Yuvraj Singh Ravi Shastri Ruturaj Prs

ಓವರ್​​ನಲ್ಲಿ 6 ಸಿಕ್ಸರ್ ಚಚ್ಚಿದ ಆಂಧ್ರದ ಬ್ಯಾಟರ್; ಯುವರಾಜ್, ರವಿ ಶಾಸ್ತ್ರಿ, ಋತುರಾಜ್ ಕ್ಲಬ್ ಸೇರಿದ ಯುವ ಆಟಗಾರ

Vamshhi Krrishna : ಆಂಧ್ರ ಪ್ರದೇಶದ ವಂಶಿ ಕೃಷ್ಣ ಅವರು ಸಿಕೆ ನಾಯುಡು ಟ್ರೋಫಿಯಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್​​ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ.

ಓವರ್​​ನಲ್ಲಿ 6 ಸಿಕ್ಸರ್ ಚಚ್ಚಿದ ಆಂಧ್ರದ ಬ್ಯಾಟರ್
ಓವರ್​​ನಲ್ಲಿ 6 ಸಿಕ್ಸರ್ ಚಚ್ಚಿದ ಆಂಧ್ರದ ಬ್ಯಾಟರ್

ಕಡಪಾದ ವೈಎಸ್ ರಾಜಾ ರೆಡ್ಡಿ ಎಸಿಪಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿಕೆ ನಾಯುಡು ಟ್ರೋಫಿಯಲ್ಲಿ ರೈಲ್ವೇಸ್ ವಿರುದ್ಧ ಪಂದ್ಯದಲ್ಲಿ ಆಂಧ್ರಪ್ರದೇಶದ ಆರಂಭಿಕ ಬ್ಯಾಟರ್ ವಂಶಿ ಕೃಷ್ಣ​ 6 ಎಸೆತಗಳಿಗೆ 6 ಸಿಕ್ಸರ್​ ಸಿಡಿಸಿ ಭಾರತೀಯ ಕ್ರಿಕೆಟ್ ಇತಿಹಾಸ ಪುಸ್ತಕದಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. ರೈಲ್ವೇಸ್ ಸ್ಪಿನ್ನರ್ ದಮನ್‌ದೀಪ್ ಸಿಂಗ್​ ಬೌಲಿಂಗ್​​ನ ಓವರ್‌ನಲ್ಲಿ 6 ಸಿಕ್ಸರ್‌ ಸಿಡಿಸಿದ ವಂಶಿ ಕೃಷ್ಣ, ದಿಗ್ಗಜರ ದಾಖಲೆ ಪಟ್ಟಿಗೆ ಸೇರಿದ್ದಾರೆ.

ಈಗಾಗಲೇ ಆರು ಸಿಕ್ಸರ್​ ಸಿಡಿಸಿದ ರವಿಶಾಸ್ತ್ರಿ (1985), ಯುವರಾಜ್ ಸಿಂಗ್ (2007) ಮತ್ತು ಋತುರಾಜ್ ಗಾಯಕ್ವಾಡ್ (2022)​ ಅವರ ಪಟ್ಟಿಗೆ ಕೃಷ್ಣ ಸೇರಿಕೊಂಡಿದ್ದಾರೆ. ಈ ದಿಗ್ಗಜರ ಪಟ್ಟಿಗೆ ವಂಶಿ ಕೃಷ್ಣ ಕೂಡ ಸೇರ್ಪಡೆಗೊಂಡಿದ್ದಾರೆ. ಯುವ ಆಟಗಾರ ಆರು​ ಸಿಕ್ಸರ್​ ಚಚ್ಚಿರುವ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

2007ರ ಟಿ20 ವಿಶ್ವಕಪ್​​​ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್​ನಲ್ಲಿ ಯುವರಾಜ್ ಸಿಂಗ್, 6 ಎಸೆತಗಳಿಗೆ ಆರು ಸಿಕ್ಸರ್​ ಸಿಡಿಸಿದ್ದರು. ಆ ಮೂಲಕ ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಈ ಸಾಧನೆಗೈದ ಮೊದಲ ಆಟಗಾರ. 1985ರಲ್ಲಿ ಮುಂಬೈನ ಪ್ರಸಿದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಸ್ಪಿನ್ನರ್ ತಿಲಕ್ ರಾಜ್ ಅವರ ಬೌಲಿಂಗ್​​ನಲ್ಲಿ ಮುಂಬೈ ಪರ ಆಡಿದ್ದ ಶಾಸ್ತ್ರಿ, ಬರೋಡಾ ವಿರುದ್ಧದ ರಣಜಿ ಪಂದ್ಯದಲ್ಲಿ ಶಾಸ್ತ್ರಿ, ಈ ಸಾಧನೆಗೈದ ಮೊದಲ ಭಾರತೀಯ.

ಆ ಅವಧಿಯಲ್ಲಿ ವೆಸ್ಟ್ ಇಂಡೀಸ್‌ನ ಪ್ರಸಿದ್ಧ ಆಲ್‌ರೌಂಡರ್ ಗ್ಯಾರಿ ಸೋಬರ್ಸ್ ನಂತರ ಗಮನಾರ್ಹ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಶಾಸ್ತ್ರಿ ಭಾಜನರಾಗಿದ್ದರು. ಭಾರತದ ಏಷ್ಯನ್ ಗೇಮ್ಸ್ 2023ರ ಚಿನ್ನದ ಪದಕ ವಿಜೇತ ನಾಯಕ ಋತುರಾಜ್ ಗಾಯಕ್ವಾಡ್ ಇತ್ತೀಚೆಗೆ ಈ ಸಾಧನೆ ಮಾಡಿದರು. 2022-23ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ಪರ ಕಣಕ್ಕಿಳಿದ ಋತುರಾಜ್, ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಶಿವ ಸಿಂಗ್ ಬೌಲಿಂಗ್‌ನಲ್ಲಿ ಒಂದು ಓವರ್‌ನಲ್ಲಿ ಏಳು ಸಿಕ್ಸರ್‌ ಸಿಡಿಸಿ ದಾಖಲೆ ಬರೆದಿದ್ದರು.

ಸಿಕೆ ನಾಯುಡು ಟ್ರೋಫಿಯ ಆಂಧ್ರ ಮತ್ತು ರೈಲ್ವೇಸ್ ನಡುವಿನ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು. ಕೃಷ್ಣ ಕೇವಲ 64 ಎಸೆತಗಳಲ್ಲಿ 110 ರನ್ ಗಳಿಸಿ ಗಮನ ಸೆಳೆದರು. ಆಂಧ್ರ 378 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ರೈಲ್ವೇಸ್, 865/9 ಸ್ಕೋರ್ ಮಾಡಿತು. ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಅಂಕ ಪಡೆಯಿತು. ಆತಿಥೇಯ ತಂಡಕ್ಕೆ ಎರಡನೇ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ.

ಇನ್ನು ವಂಶಿ ಕೃಷ್ಣ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ಅವರು ತಮ್ಮ ತಂಡದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಅವರ ಈ ಆಟದಲ್ಲಿ 10 ಸಿಕ್ಸರ್​​ಗಳು ಮತ್ತು 9 ಬೌಂಡರಿ ಸಿಡಿಸಿದ್ದಾರೆ. ಕೃಷ್ಣನ ವೀರಾವೇಶದ ಹೊರತಾಗಿಯೂ ಆಂಧ್ರ ಪ್ರದೇಶ ನಾಕೌಟ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. ರೈಲ್ವೇಸ್ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ತಂಡವನ್ನು ಎದುರಿಸಲಿದೆ.