ಕನ್ನಡ ಸುದ್ದಿ  /  ಕ್ರಿಕೆಟ್  /  Angkrish Raghuvanshi: ಯಾರಿವನು ಆಂಗ್ಕ್ರಿಶ್ ರಘುವಂಶಿ? ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ ಯುವ ರಾಜಕುಮಾರ

Angkrish Raghuvanshi: ಯಾರಿವನು ಆಂಗ್ಕ್ರಿಶ್ ರಘುವಂಶಿ? ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ ಯುವ ರಾಜಕುಮಾರ

Who is Angkrish Raghuvanshi: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿ ಅಬ್ಬರಿಸಿದ ಆಂಗ್ಕ್ರಿಶ್ ರಘುವಂಶಿ, ಬೆಳೆದಿದ್ದು ಭಾರತದ ಮಾಜಿ ಕ್ರಿಕೆಟಿಗನ ಗರಡಿಯಲ್ಲಿ.

ಕೋಲ್ಕತ್ತಾ ನೈಟ್​ ರೈಡರ್ಸ್ ಸಹ ಮಾಲೀಕ ಶಾರೂಖ್ ಖಾನ್ ಜೊತೆ ಆಂಗ್ಕ್ರಿಶ್ ರಘುವಂಶಿ.
ಕೋಲ್ಕತ್ತಾ ನೈಟ್​ ರೈಡರ್ಸ್ ಸಹ ಮಾಲೀಕ ಶಾರೂಖ್ ಖಾನ್ ಜೊತೆ ಆಂಗ್ಕ್ರಿಶ್ ರಘುವಂಶಿ.

ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡದ ಯುವ ಆಟಗಾರ ಈಗ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ನಿರಾಯಾಸವಾಗಿ ಬ್ಯಾಟಿಂಗ್ ನಡೆಸಿ ಸಂಚಲನ ಸೃಷ್ಟಿಸಿದ ಆಟಗಾರನ ಹೆಸರು ಆಂಗ್ಕ್ರಿಶ್ ರಘುವಂಶಿ (Angkrish Raghuvanshi). ಡೆಲ್ಲಿ ವಿರುದ್ಧ ಅಬ್ಬರಿಸಿದ ರಘುವಂಶಿ 54 ರನ್ (5 ಬೌಂಡರಿ, 3 ಸಿಕ್ಸರ್) ಸಿಡಿಸಿ ಕಿಚ್ಚು ಹಚ್ಚಿದ್ದಾರೆ. ಆರ್​ಸಿಬಿ ವಿರುದ್ಧ ಪದಾರ್ಪಣೆ ಮಾಡಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಎದುರು ತನ್ನ ಮೊದಲ ಪಂದ್ಯದಲ್ಲೇ ಸಿಕ್ಕ ಅವಕಾಶ ಎರಡೂ ಕೈಗಳಿಂದ ಅಪ್ಪಿಕೊಂಡ ಬಲಗೈ ಬ್ಯಾಟರ್, 18 ವರ್ಷ 303 ದಿನದಲ್ಲೇ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಶುಭ್ಮನ್ ಗಿಲ್ ಅವರ ಸಾಲಿಗೂ ಸೇರಿದ್ದಾರೆ. ಅಲ್ಲದೆ, ಒಂದೇ ಒಂದು ಇನ್ನಿಂಗ್ಸ್​ ಮೂಲಕವೇ ಭಾರತ ತಂಡವನ್ನು ಪ್ರವೇಶಿಸುವ ಭರವಸೆ ಹುಟ್ಟು ಹಾಕಿದ್ದಾರೆ. ಹಾಲಿ ಮತ್ತು ಮಾಜಿ ಕ್ರಿಕೆಟರ್​​ಗಳಿಂದ ಹೆಚ್ಚು ಪ್ರಶಂಸೆಗೂ ಒಳಗಾಗಿದ್ದಾರೆ. ಹಾಗಾದರೆ ಈತ ಯಾರು?

ಆಂಗ್ಕ್ರಿಶ್ ರಘುವಂಶಿ ಯಾರು?

2005ರ ಜೂನ್​ 5ರಂದು ದೆಹಲಿಯಲ್ಲಿ ಜನಿಸಿದ ಆಂಗ್ಕ್ರಿಶ್ ರಘುವಂಶಿ, ತನ್ನ 11ನೇ ವಯಸ್ಸಲ್ಲಿ ಅವರ ಕುಟುಂಬ ಮುಂಬೈಗೆ ಸ್ಥಳಾಂತರವಾಗುತ್ತದೆ. ಅಲ್ಲಿ ಕ್ರಿಕೆಟ್ ಅಕಾಡೆಮಿಗೆ ಸೇರಿದ್ದ ರಘುವಂಶಿ ಅಭ್ಯಾಸ ಪ್ರಾರಂಭಿಸಿದ್ದರು. ಅಲ್ಲದೆ, ಇಲ್ಲಿ ಭಾರತೀಯ ಕ್ರಿಕೆಟಿಗನ ಗರಡಿಯಲ್ಲಿ ಬೆಳೆಯುತ್ತಾರೆ. ಮಾಜಿ ಆಟಗಾರ ಅಭಿಷೇಕ್ ನಾಯರ್ ಅವರ ಜತೆಯಲ್ಲೇ ವಾಸಿಸುತ್ತಾ, ಅವರ ಮನೆಯಲ್ಲಿ ಮನೆ ಮಗನಾಗಿ ಬೆಳೆದನು. ರಿಂಕು ಸಿಂಗ್ ಸೇರಿದಂತೆ ಪ್ರಮುಖ ಆಟಗಾರರು ಬೆಳೆದಿದ್ದು ಕೂಡ ಅಭಿಷೇಕ್ ಗರಡಿಯಲ್ಲೇ ಎಂಬುದು ವಿಶೇಷ.

ದೇಶೀಯ ಕ್ರಿಕೆಟ್​​ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುವ ರಘುವಂಶಿ, ಒಬ್ಬ ಆಲ್​​ರೌಂಡರ್ ಕೂಡ ಹೌದು. ಎಡಗೈ ಸಾಂಪ್ರದಾಯಿಕ ಬೌಲರ್ ಕೂಡ ಆಗಿರುವ ಆಂಗ್ಕ್ರಿಶ್, 2022ರ ಅಂಡರ್​-19 ವಿಶ್ವಕಪ್​ನಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು. ಟೂರ್ನಿಯಲ್ಲಿ ಬರೋಬ್ಬರಿ 278 ರನ್ ಬಾರಿಸಿದ್ದರು. ಯಶ್ ಧುಲ್ ನಾಯಕತ್ವದಲ್ಲಿ ಚಾಂಪಿಯನ್ ಆದ ಭಾರತ ತಂಡದ ಆಟಗಾರನಾಗಿದ್ದ ರಘುವಂಶಿ 2023ರಲ್ಲಿ ಲಿಸ್ಟ್ ಎ, ಟಿ20ಗೂ ಡೆಬ್ಯು ಮಾಡಿದರು.

ಸಿಕೆ ನಾಯುಡು ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಈ ಯುವ ಆಟಗಾರ 9 ಪಂದ್ಯಗಳಲ್ಲಿ 765 ರನ್ ಸಿಡಿಸಿದ್ದರು. ಅಂಡರ್-19 ಮತ್ತು ದೇಶೀ ಕ್ರಿಕೆಟ್​ನಲ್ಲಿ ಭರವಸೆ ಮೂಡಿಸಿದ್ದ ಆಟಗಾರ ಮೇಲೆ ಕಣ್ಣಿಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಹರಾಜಿನಲ್ಲಿ 20 ಲಕ್ಷ ರೂಪಾಯಿ ಮೂಲಬೆಲೆಗೆ ತೆಕ್ಕೆಗೆ ಹಾಕಿಕೊಂಡಿತು. ಮತ್ತೊಂದು ವಿಶೇಷ ಏನೆಂದರೆ ಈತನ ಪೋಷಕರು ಸಹ ಕ್ರೀಡಾಪಟುಗಳು.

ರಘುವಂಶಿ ಅವರ ತಂದೆ ಅವನೀಶ್ ರಘುವಂಶಿ ಅವರು ಟೆನಿಸ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ತಾಯಿ ಮಲ್ಲಿಕಾ ಅವರು ಸಹ ದೇಶಕ್ಕಾಗಿ ಬಾಸ್ಕೆಟ್‌ಬಾಲ್ ಆಡಿದ್ದಾರೆ. ಸಹೋದರ ಕ್ರಿಶ್​ ಕೂಡ ಕ್ರೀಡೆಯ ಮೇಲೆ ಒಲವು ಬೆಳೆಸಿಕೊಂಡಿದ್ದು ತಂದೆಯಂತೆಯೇ ಟೆನಿಸ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಂದೆ-ತಾಯಿ ಕ್ರೀಡಾಪಟುಗಳೇ ಆದ ಕಾರಣ ರಘುವಂಶಿಗೆ ಕ್ರಿಕೆಟ್ ಆಡಲು ಹೆಚ್ಚು ಪ್ರೋತ್ಸಾಹ ಸಿಕ್ಕಿತ್ತು. ಮುಂದೆಯೂ ಅದ್ಭುತ ಪ್ರದರ್ಶನ ತೋರಲಿ, ಭಾರತ ತಂಡದಲ್ಲೂ ಅವಕಾಶ ಪಡೆಯಲಿ ಎಂದು ಹಾರೈಸೋಣ.

ಐಪಿಎಲ್‌ 2024ರ ಸಮಗ್ರ ಲೇಖನಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

IPL_Entry_Point