ಕನ್ನಡ ಸುದ್ದಿ  /  Cricket  /  Arjun Tendulkar Mohammad Nabi In 3 Players Out Mumbai Indians Likely Xi Against Rajasthan Royals Tim David Maphaka Prs

ಅರ್ಜುನ್ ತೆಂಡೂಲ್ಕರ್, ಮೊಹಮ್ಮದ್ ನಬಿ ಇನ್-ಡೇವಿಡ್, ಮಫಕಾ ಔಟ್; ರಾಜಸ್ಥಾನ್ ಕದನಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್​ XI

Mumbai Indians Playing XI : ಐಪಿಎಲ್​ನ 14ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್​ ಪ್ರಮುಖ ಮೂರು ಬದಲಾವಣೆ ಮಾಡಲು ನಿರ್ಧರಿಸಿದೆ.

ರಾಜಸ್ಥಾನ್ ಕದನಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್​ XI
ರಾಜಸ್ಥಾನ್ ಕದನಕ್ಕೆ ಮುಂಬೈ ಇಂಡಿಯನ್ಸ್ ಪ್ಲೇಯಿಂಗ್​ XI

17ನೇ ಆವೃತ್ತಿಯ ಐಪಿಎಲ್​ನಲ್ಲಿ ಸತತ 2 ಪಂದ್ಯಗಳಲ್ಲಿ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ (Mumbai Indians) ಗೆಲುವಿನ ಖಾತೆ ತೆರೆಯಲು ಸಜ್ಜಾಗಿದೆ. ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿರುವ ರಾಜಸ್ಥಾನ್ ರಾಯಲ್ಸ್ (Rajasthan Royals) ಸವಾಲಿಗೆ ಮುಂಬೈ ಸಿದ್ಧವಾಗಿದೆ. ಬ್ಯಾಟಿಂಗ್​-ಬೌಲಿಂಗ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಎಂಐ ವಿರುದ್ಧ ಸಂಜು ಸ್ಯಾಮ್ಸನ್ (Sanju Samson)​ ಸಾರಥ್ಯದ ತಂಡ ಲಯ ಮುಂದುವರೆಸಲು ರೆಡಿಯಾಗಿದೆ.

ಏಪ್ರಿಲ್ 1ರ ಸೋಮವಾರ ಎರಡು ಮಾಜಿ ಚಾಂಪಿಯನ್‌ಗಳ ನಡುವಿನ ಐಪಿಎಲ್​ನ 14ನೇ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಉಭಯ ತಂಡಗಳಿಗೂ ಇದು 3ನೇ ಪಂದ್ಯವಾಗಿದೆ. ಪ್ರಸ್ತುತ ಐಪಿಎಲ್​ನಲ್ಲಿ ತವರಿನ ತಂಡಗಳೇ ಬಹುತೇಕ ಗೆದ್ದಿದ್ದು, ಮುಂಬೈ ಕೂಡ ಅದೇ ವಿಶ್ವಾಸದಲ್ಲಿ ಜಯದ ಖಾತೆ ತೆರೆಯಲು ಹೊರಟಿದೆ. ಗುಜರಾತ್ ಟೈಟಾನ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮಾಡಿದ್ದ ತಪ್ಪುಗಳಿಂದ ತಿದ್ದಿಕೊಂಡು ಕಣಕ್ಕಿಳಿಯಲು ಎಂಐ ಸನ್ನದ್ಧಗೊಂಡಿದೆ.

ಮುಂಬೈ ತಂಡದಲ್ಲಿ ಮೂರು ಬದಲಾವಣೆ ಸಾಧ್ಯತೆ

ಮಹತ್ವದ ಪಂದ್ಯಕ್ಕಾಗಿ ತನ್ನ ತಂಡದಲ್ಲಿ ಹಲವು ಬದಲಾವಣೆ ಮಾಡಲು ಎಂಐ ನಿರ್ಧರಿಸಿದೆ. ತನ್ನ ಮೊದಲ ಹೋಮ್ ಪಂದ್ಯದಲ್ಲಿ ಮುಂಬೈ ಹೆಚ್ಚು ಸುಧಾರಿತ ಪ್ರದರ್ಶನ ನೀಡಲು ಎದುರು ನೋಡುತ್ತಿದೆ. ತನ್ನ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ 66 ರನ್‌ ಬಿಟ್ಟುಕೊಟ್ಟ ದಕ್ಷಿಣ ಆಫ್ರಿಕಾದ 17 ವರ್ಷದ ಯುವ ಆಟಗಾರ ಕ್ವೆನಾ ಮಫಕಾ, ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ರೊಮಾರಿಯೋ ಶೆಫರ್ಡ್ ಆತನ ಸ್ಥಾನ ತುಂಬುವ ಸಾಧ್ಯತೆ ಇದೆ.

ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಅಲಭ್ಯತೆ ತಂಡಕ್ಕೆ ಕಾಡುತ್ತಿದ್ದು, ಆತನ ಜಾಗದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ನಮನ್ ಧೀರ್​, ದೊಡ್ಡ ಇನ್ನಿಂಗ್ಸ್​ ಕಟ್ಟುವ ಅಗತ್ಯ ಇದೆ. ಅತ್ತ ನಾಯಕ ಹಾರ್ದಿಕ್ ಪಾಂಡ್ಯ ಸಹ ಸ್ಕೋರ್​ ಮಾಡುವುದು ಅನಿವಾರ್ಯ. ಸ್ಪಿನ್ನರ್ ಶಮ್ಸ್ ಮುಲಾನಿ ಅವರಿಗೆ ಮೊದಲ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ XIನಲ್ಲಿ ಆಡುವ ಅವಕಾಶ ನೀಡಲಾಗಿತ್ತು. ಆದರೆ, ಅವರು ಸಿಕ್ಕ ಅವಕಾಶ ಕೈಚೆಲ್ಲಿರುವ ಕಾರಣ ಅರ್ಜುನ್ ತೆಂಡೂಲ್ಕರ್ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಭಾರತದ ಲೆಜೆಂಡರಿ ಆಟಗಾರ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ 4 ಪಂದ್ಯಗಳನ್ನು ಮಾತ್ರ ಆಡಿದ ಅನುಭವ ಹೊಂದಿದ್ದು, ತನ್ನ ಸಾಮರ್ಥ್ಯ ಸಾಬೀತುಪಡಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅಫ್ಘಾನಿಸ್ತಾನ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರನ್ನು ಸಹ ಪರಿಗಣಿಸುವ ಸಾಧ್ಯತೆ ಇದೆ. ನಬಿ ಸೇರ್ಪಡೆಯಿಂದ ಸ್ಪಿನ್ ಬೌಲಿಂಗ್ ದಾಳಿ ಮತ್ತಷ್ಟು ಬಲಪಡಿಸಲು ಮುಂಬೈ ಮುಂದಾಗಿದೆ. ಆದರೆ ಟಿಮ್ ಡೇವಿಡ್ ಅವರನ್ನು 11ರ ಬಳಗದಿಂದ ಕೈಬಿಡಲು ಮ್ಯಾನೇಜ್​ಮೆಂಟ್ ಚಿಂತಿಸಿದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ಸಂಭಾವ್ಯ XI: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್​), ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಮೊಹಮ್ಮದ್ ನಬಿ, ರೊಮಾರಿಯೊ ಶೆಫರ್ಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ , ಅರ್ಜುನ್ ತೆಂಡೂಲ್ಕರ್.

ಇಂಪ್ಯಾಕ್ಟ್ ಪ್ಲೇಯರ್ಸ್: ನುವಾನ್ ತುಷಾರ, ಡೆವಾಲ್ಡ್ ಬ್ರೆವಿಸ್, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಆಕಾಶ್ ಮಧ್ವಲ್.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ನಾಯಕ), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ಸಂದೀಪ್ ಶರ್ಮಾ, ಅವೇಶ್ ಖಾನ್.