ಭಾರತ-ಪಾಕ್ ಸಂಘರ್ಷದ ಮಾಹಿತಿ ನೀಡುವಾಗ ಆಶಸ್ ಉದಾಹರಣೆ ಕೊಟ್ಟ ಸೇನಾಧಿಕಾರಿ: ಆಶಸ್ ಸರಣಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು
ಭಾರತ-ಪಾಕ್ ಸಂಘರ್ಷದ ಮಾಹಿತಿ ನೀಡುವಾಗ ಭಾರತದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿಯ ಕುರಿತು ಉದಾಹರಣೆ ನೀಡಿದ್ದಾರೆ. ಆಶಸ್ ಸರಣಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು.

ಇಂಡೋ-ಪಾಕ್ ನಡುವಿನ ಸಂಘರ್ಷಕ್ಕೆ ಸಂಬಂಧಿಸಿ ಭಾರತದ ಸೇನೆ ಕುರಿತು ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿ ನಡೆಸಿ ತಮ್ಮ ಸೇನಾ ಕಾರ್ಯಾಚರಣೆ ಹೇಗಿತ್ತು ಎನ್ನುವುದರ ಕುರಿತು ವಿವರಣೆ ನೀಡಿದ್ದಾರೆ. ಭಾರತದ ಸೇನೆಯ ಹೋರಾಟಕ್ಕೆ ಸಂಬಂಧಿಸಿ ಉತ್ತಮ ಉದಾಹರಣೆ ಕೊಟ್ಟಿದ್ದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆ್ಯಶಸ್ ಸರಣಿಯ ಕುರಿತು! ಪತ್ರಿಕಾಗೋಷ್ಠಿ ಆರಂಭಿಸಿದ್ದು ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ. ನಾನಿಂದು ಕ್ರಿಕೆಟ್ ಬಗ್ಗೆ ಮಾತನಾಡಬೇಕು. ವಿರಾಟ್ ಟೆಸ್ಟ್ನಿಂದ ನಿವೃತ್ತರಾಗಿದ್ದಾರೆ. ನನಗೆ ಅವರು ನೆಚ್ಚಿನ ಕ್ರಿಕೆಟಿಗನೂ ಹೌದು ಎಂದಿದ್ದಾರೆ.
ವಾಯು ರಕ್ಷಣಾ ವ್ಯವಸ್ಥೆಯ ಶಕ್ತಿ ಮತ್ತು ನಿಖರತೆ ವಿವರಿಸುವಾಗ, ಘಾಯ್ ಅದನ್ನು ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಜೆಫ್ ಥಾಮ್ಸನ್ ಮತ್ತು ಡೆನ್ನಿಸ್ ಲಿಲ್ಲೀ ಮಾರಕ ಜೋಡಿಗೆ ಹೋಲಿಸಿದ್ದಾರೆ. ಇದೇ ವೇಳೆ ಈ ಇಬ್ಬರು ಬೌಲರ್‌ಗಳು ನಡೆಸಿದ ಮಾರಕ ದಾಳಿಯ ಘಟನೆಯೊಂದನ್ನೂ ನೆನಪಿಸಿಕೊಂಡಿದ್ದಾರೆ. 70ರ ದಶಕದಲ್ಲಿ ನಾನು ಶಾಲೆಯಲ್ಲಿದ್ದಾಗ ನಡೆದ ಒಂದು ಘಟನೆ ನನಗೆ ನೆನಪಿದೆ. ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಆ್ಯಶಸ್ ಪಂದ್ಯವಿತ್ತು. ಆ ವೇಳೆ ಆಸ್ಟ್ರೇಲಿಯಾದ ಇಬ್ಬರು ಏಸ್ ಬೌಲರ್‌ಗಳಾದ ಜೆಫ್ ಥಾಮ್ಸನ್-ಡೆನ್ನಿಸ್ ಲಿಲ್ಲಿ ಇಂಗ್ಲಿಷ್ ಬ್ಯಾಟಿಂಗ್ ಲೈನ್‌ಅಪ್ ನಾಶಪಡಿಸಿದ್ದು. ಅದೇ ರೀತಿ ನಮ್ಮ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ದಾಳಿ ಮಾಡಿದೆ ಎಂದು ಆಶಸ್ ಸರಣಿಯನ್ನು ಮೆಲುಕು ಹಾಕುತ್ತಾ ಹೇಳಿದ್ದಾರೆ. ಆದರೆ ಆಶಸ್ ಸರಣಿಯ ಇತಿಹಾಸ ಸೇರಿದಂತೆ ಆಶಸ್ ಸರಣಿ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು.
- ಆಶಸ್ ಎಂದರೆ ಬೂದಿ. ಶವದಹನ ಮಾಡಿದಾಗ ಉಳಿಯುವ ಅವಶೇಷ. ಕ್ರಿಕೆಟ್ ಆಟಕ್ಕೂ ಆ್ಯಶಸ್ಗೂ ಇರುವ ಸಂಬಂಧವನ್ನೂ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ಬಿನವರು ಪ್ರಕಟಿಸಿರುವ ಎಂಸಿಸಿ 1787-1937 ಎಂಬ ಗ್ರಂಥದಲ್ಲಿ ವಿವರಿಸಲಾಗಿದೆ.
- 1882ರ ಆಗಸ್ಟ್ 29ರಂದು ದಿ ಓವಲ್ನಲ್ಲಿ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ ಮಣಿಸಿದ ನಂತರ ಮೊದಲ ಬಾರಿಗೆ 'ಆಶಸ್' ಎಂಬ ಪದವು ಮೊದಲು ಜಾರಿಗೆ ಬಂದಿತು. ಅಂದಿನಿಂದ, ಕ್ರಿಕೆಟ್‌ನ ಅತ್ಯುನ್ನತ ಟ್ರೋಫಿಗಳಲ್ಲಿ ಒಂದಾದ 'ದಿ ಆಶಸ್'ಗಾಗಿ ಎರಡೂ ತಂಡಗಳು ಪೈಪೋಟಿ ನಡೆಸುತ್ತವೆ.
- ಆಶಸ್ ಸರಣಿಯು ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ನಡೆಯುವ ದ್ವೈವಾರ್ಷಿಕ ಟೆಸ್ಟ್ ಕ್ರಿಕೆಟ್ ಸರಣಿಯಾಗಿದ್ದು, 1882 ರಿಂದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಈ ಸರಣಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸಾಂಪ್ರದಾಯಿಕ ಮತ್ತು ಸ್ಪರ್ಧಾತ್ಮಕ ಸರಣಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
- 1882-83ರಲ್ಲಿ ನಡೆದ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವೇ ಜಯ ಗಳಿಸಿತ್ತು. ಅಂದು ಮೂರು ಪಂದ್ಯಗಳ ಸರಣಿಯಲ್ಲಿ 2-1 ರಿಂದ ಸರಣಿಯನ್ನು ವಶಪಡಿಸಿಕೊಂಡಿತ್ತು. ಆದರೆ ಮೊದಲ ಪಂದ್ಯ ಗೆದ್ದಿದ್ದ ಆಸೀಸ್ ನಿರಾಸೆ ಅನುಭವಿಸಿತ್ತು.
- ಇಲ್ಲಿಯವರೆಗೆ, ಐತಿಹಾಸಿಕ ಸರಣಿಯಲ್ಲಿ 345 ಟೆಸ್ಟ್ ಪಂದ್ಯಗಳು ನಡೆದಿವೆ. ಆಸ್ಟ್ರೇಲಿಯಾ 142 ಗೆಲುವುಗಳೊಂದಿಗೆ ತಮ್ಮ ಇಂಗ್ಲಿಷ್ ಪ್ರತಿಸ್ಪರ್ಧಿಗಿಂತ ಮುಂದಿದೆ. ಇಂಗ್ಲೆಂಡ್ 110 ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಎರಡೂ ತಂಡಗಳ ನಡುವಿನ 93 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
- ಸರಣಿವಾರು ದಾಖಲೆ ನೋಡುವುದಾದರೆ ಆಶಸ್ನಲ್ಲಿ 72 ಸರಣಿಗಳು ನಡೆದಿವೆ. ಈ ಪೈಕಿ ಆಸ್ಟ್ರೇಲಿಯಾ 34, ಇಂಗ್ಲೆಂಡ್ 32 ಸರಣಿಗಳನ್ನು ಗೆದ್ದಿವೆ. ಅಲ್ಲದೆ, 6 ಸರಣಿಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
- ಆಸ್ಟ್ರೇಲಿಯಾ ತವರಿನಲ್ಲಿ 99 ಪಂದ್ಯಗಳನ್ನು ಮತ್ತು ವಿದೇಶದಲ್ಲಿ 51 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್ ತವರಿನಲ್ಲಿ 53 ಪಂದ್ಯಗಳನ್ನು ಮತ್ತು ವಿದೇಶದಲ್ಲಿ 57 ಪಂದ್ಯಗಳನ್ನು ಗೆದ್ದಿದೆ.
- 2023ರಲ್ಲಿ ನಡೆದ ಕೊನೆಯ ಟೆಸ್ಟ್ ಸರಣಿಯಲ್ಲಿ ಐದು ಪಂದ್ಯಗಳು ನಡೆದಿದ್ದವು. ಆದರೆ 2-2ರಲ್ಲಿ ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ.
- ಬಾಡಿಲೈನ್ ಸರಣಿ (1932-33): ಹೆರಾಲ್ಡ್ ಲಾರ್ವುಡ್ ನೇತೃತ್ವದ ಇಂಗ್ಲೆಂಡ್‌ನ ವೇಗದ ಬೌಲರ್‌ಗಳು ಬೆದರಿಸುವ ಬೌಲಿಂಗ್ ತಂತ್ರ ಬಳಸಿದ್ದರು. ಇದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ವಿವಾದ ಮತ್ತು ರಾಜತಾಂತ್ರಿಕ ಉದ್ವಿಗ್ನತೆಯನ್ನು ಹುಟ್ಟುಹಾಕಿತ್ತು.
- ದಿ ಇನ್ವಿನ್ಸಿಬಲ್ಸ್ ಟೂರ್ (1948): ಸರ್ ಡೊನಾಲ್ಡ್ ಬ್ರಾಡ್ಮನ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಅಜೇಯವಾಗಿ ಸಾಗಿ ಆಶಸ್ ಅನ್ನು 4-0 ಅಂತರದಿಂದ ಗೆದ್ದಿತು.
- ಜಿಮ್ ಲೇಕರ್ 19 ವಿಕೆಟ್ (1956): ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಒಂದೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲಿಷ್ ಸ್ಪಿನ್ ಬೌಲರ್ ಜಿಮ್ ಲೇಕರ್ ಆಸ್ಟ್ರೇಲಿಯಾದ 20 ಸಂಭಾವ್ಯ ವಿಕೆಟ್ಗಳ ಪೈಕಿ 19 ವಿಕೆಟ್ ಪಡೆದಿದ್ದರು.
- ಆಶಸ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ದಂತಕಥೆ ಸರ್ ಡೊನಾಲ್ಡ್ ಬ್ರಾಡ್ಮನ್ ಹೊಂದಿದ್ದಾರೆ. ಇವರು ಒಟ್ಟು 37 ಆಶಸ್ ಟೆಸ್ಟ್‌ಗಳಲ್ಲಿ 29 ಶತಕ ಸಹಿತ 89.78ರ ಸರಾಸರಿಯಲ್ಲಿ 5,028 ರನ್ ಗಳಿಸಿದ್ದಾರೆ.
- ಆಶಸ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಶೇನ್ ವಾರ್ನ್ ಅವರ ಹೆಸರಿನಲ್ಲಿದೆ, ಅವರು 36 ಟೆಸ್ಟ್‌ಗಳಲ್ಲಿ 23.25 ಸರಾಸರಿಯಲ್ಲಿ 195 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 11 ಐದು ವಿಕೆಟ್ ಗೊಂಚಲು ಮತ್ತು 4 ಹತ್ತು ವಿಕೆಟ್ ಗೊಂಚಲು ಸೇರಿವೆ.