ಅಶುತೋಷ್ ಆರ್ಭಟಕ್ಕೆ ಬೆಚ್ಚಿದ ಲಕ್ನೋ, ಸೋಲುವ ಪಂದ್ಯದಲ್ಲಿ ಡೆಲ್ಲಿಗೆ 1 ವಿಕೆಟ್ ರೋಚಕ ಗೆಲುವು
Delhi Capitals vs Lucknow Super Giants: ಇಂಡಿಯನ್ ಪ್ರೀಮಿಯರ್ ಲೀಗ್ನ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.

ರೋಚಕ ಕ್ಷಣಕ್ಕೆ ಸಾಕ್ಷಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ. ಸೋಲುವ ಪಂದ್ಯದಲ್ಲಿ 1 ವಿಕೆಟ್ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಅಭಿಯಾನ ಆರಂಭಿಸಿದೆ. ಅಶುತೋಷ್ ಶರ್ಮಾ (66) ಆರ್ಭಟಕ್ಕೆ ಬೆಚ್ಚಿದ ಲಕ್ನೋ ಸೂಪರ್ ಜೈಂಟ್ಸ್, ತಾನು ಮಾಡಿದ ತಪ್ಪುಗಳಿಂದಲೇ ಗೆಲ್ಲುವ ಪಂದ್ಯ ಕೈ ಚೆಲ್ಲುವ ಮೂಲಕ ತೀವ್ರ ಮುಖಭಂಗಕ್ಕೆ ಗುರಿಯಾಯಿತು.
ಮಿಚೆಲ್ ಮಾರ್ಷ್ (72) ಮತ್ತು ನಿಕೋಲಸ್ ಪೂರನ್ (75) ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ದೊಟ್ಟ ಮೊತ್ತ ಪೇರಿಸಿದ ಹೊರತಾಗಿ ಲಕ್ನೋ ಶುಭಾರಂಭ ಮಾಡುವಲ್ಲಿ ವಿಫಲವಾಯಿತು. ನೂತನ ನಾಯಕನೊಂದಿಗೆ ಕಣಕ್ಕಿಳಿದ ಉಭಯ ತಂಡಗಳ ಪೈಕಿ ಅಕ್ಷರ್ ಪಟೇಲ್ ನೇತೃತ್ವದಲ್ಲಿ ಡೆಲ್ಲಿ ಜಯದ ಸಿಹಿ ಕಂಡಿದೆ. ವಿಶಾಖಪಟ್ಟಣದ ವೈಎಸ್ ರಾಜಶೇಖರರೆಡ್ಡಿ ಕ್ರಿಕೆಟ್ ಮೈದಾನವು ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.
ಟಾಸ್ ಗೆದ್ದ ಡೆಲ್ಲಿ, ಲಕ್ನೋ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಲಕ್ನೋ ತಂಡವು ಮಾರ್ಷ್ ಮತ್ತು ಪೂರನ್ ಅಬ್ಬರಕ್ಕೆ ಬೃಹತ್ ಮೊತ್ತ ಪೇರಿಸಿತು. ಈ ಸುನಾಮಿ ಬ್ಯಾಟಿಂಗ್ಗೆ ಬೆದರಿದ ಡೆಲ್ಲಿ ಬೌಲರ್ಗಳು ರನ್ ಲೀಕ್ ಮಾಡಿದರು. ಪರಿಣಾಮ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಪೇರಿಸಿತು. ಇದರ ನಡುವೆಯೂ ಮಿಚೆಲ್ ಸ್ಟಾರ್ಕ್ 3, ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು.
ಅಶುತೋಷ್ ಶರ್ಮಾ ಆರ್ಟಭ
210 ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭಿಕ ಓವರ್ನಿಂದಲೇ ಸಂಕಷ್ಟಕ್ಕೆ ಸಿಲುಕಿತು. ಅನ್ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಮೊದಲ ಓವರ್ನಲ್ಲೇ 2 ವಿಕೆಟ್ ಕಿತ್ತರು. ಬಳಿಕ ಉಳಿದ ಬೌಲರ್ಗಳು ಕೂಡ ಸಾಥ್ ಕೊಟ್ಟರು. ಪರಿಣಾಮ 113 ರನ್ಗೆ 6 ವಿಕೆಟ್ ಕಳೆದುಕೊಂಡು ಸೋಲಿನಂಚಿಗೆ ಸಿಲುಕಿತ್ತು. ಆದರೆ, ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ಅಬ್ಬರಿಸಿ 7ನೇ ವಿಕೆಟ್ಗೆ 55 ರನ್ ಗಳಿಸಿ ಪಂದ್ಯದ ಗತಿ ಬದಲಿಸಿದರು.
ಗೆಲುವಿಗೆ ಇನ್ನೂ 23 ಎಸೆತಗಳಲ್ಲಿ 42 ರನ್ ಬೇಕಿದ್ದಾಗ ವೀರಾವೇಶದ 39 ರನ್ ಗಳಿಸಿದ್ದ ವಿಪ್ರಜ್ ಔಟಾದರು. ಇದು ಡೆಲ್ಲಿ ಕ್ಯಾಂಪ್ನಲ್ಲಿ ಕೊಂಚ ನಿರಾಸೆ ಉಂಟು ಮಾಡಿತು. ಆದರೆ ಕ್ರೀಸ್ನಲ್ಲಿ ಅಶುತೋಷ್ ಅಬ್ಬರ ನಿಲ್ಲಲಿಲ್ಲ. 19ಕ್ಕೆ 19 ರನ್ ಗಳಿಸಿದ್ದ ಶರ್ಮಾ ಮುಂದಿನ 12 ಎಸೆತಗಳಲ್ಲಿ 47 ರನ್ ಚಚ್ಚಿದರು. ಏಕಾಂಗಿಯಾಗಿ ಕೊನೆಯ ತನಕ ಕ್ರೀಸ್ನಲ್ಲೇ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೊನೆಯ 4 ಓವರ್ಗಳಲ್ಲಿ 42 ರನ್ ಬೇಕಿತ್ತು. ಆದರೆ ವಿಕೆಟ್ಗಳು ಕೈಯಲ್ಲಿ ಇರಲಿಲ್ಲ. ವಿಪ್ರಜ್ 15 ಎಸೆತಗಳಲ್ಲಿ 35 ರನ್ ಗಳಿಸಿ ತನ್ನ ಸಾಮರ್ಥ್ಯ ಜಗತ್ತಿಗೆ ತೋರಿಸಿದರು. ಬಳಿಕ ಮಿಚೆಲ್ ಸ್ಟಾರ್ಕ್ 2 ರನ್, ಕುಲ್ದೀಪ್ 5 ರನ್ ಗಳಿಸಿ ಔಟಾದರು. ಇದು ಸೋಲನ್ನು ಇನ್ನಷ್ಟು ಹತ್ತಿರಕ್ಕೆ ತಂದಿತು. ಆದರೆ ಅಶುತೋಷ್ ಅದಕ್ಕೆ ಅವಕಾಶ ನೀಡಲಿಲ್ಲ. ಇದರ ನಡುವೆಯೂ ಕೊನೆಯ ಓವರ್ನಲ್ಲಿ 6 ಬಾಲ್ಗೆ 6 ರನ್ ಬೇಕಿತ್ತು.
ಆಗ ಕ್ರೀಸ್ನಲ್ಲಿ ಇದ್ದದ್ದು ಮೋಹಿತ್ ಶರ್ಮಾ. ಇವರನ್ನು ಸ್ಟಂಪ್ಔಟ್ ಮಾಡುವ ಉತ್ತಮ ಅವಕಾಶ ತನ್ನ ಮುಂದಿದ್ದರೂ ರಿಷಭ್ ಪಂತ್ ಕೈಚೆಲ್ಲಿದರು. ಇದು ಸ್ಟಂಪ್ ಮಾಡಿದ್ದರೆ ಗೆಲುವು ಲಕ್ನೋ ಪಾಲಾಗುತ್ತಿತ್ತು. ಅದರ ಮರು ಎಸೆತವೇ ಆಯುಷ್ ಬದೋನಿ ರನೌಟ್ ಮಿಸ್ ಮಾಡಿದರು. ಬಳಿಕ ಆಗ ಗೆಲುವಿಗೆ 5 ರನ್ ಬೇಕಿತ್ತು. ಕ್ರೀಸ್ಗೆ ಬಂದ ಅಶುತೋಷ್ ಸಿಕ್ಸರ್ ಸಿಡಿಸಿ ಗೆಲುವಿನ ಕೇಕೆ ಹಾಕಿದರು.
31 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ ಅಶುತೋಷ್ 66 ರನ್ ಗಳಿಸಿದರು. ವಿಪ್ರಜ್ 35 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ (1), ಫಾಫ್ (29), ಪೊರೆಲ್ (0), ಅಕ್ಷರ್ (22) ನಿರಾಸೆ ಮೂಡಿಸಿದರು. ಆದರೆ ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ 34 ರನ್ ಸಿಡಿಸಿ ಮಿಂಚಿದರು. ಶಾರ್ದೂಲ್ ಠಾಕೂರ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಥಿ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಕಿತ್ತರು.
ರನ್ ಮಳೆ ಹರಿಸಿದ ಮಾರ್ಷ್-ಪೂರನ್
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಉತ್ತಮ ಆರಂಭ ಪಡೆದರೂ ಏಡನ್ ಮಾರ್ಕ್ರಮ್ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಜೊತೆಯಾದ ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಡೆಲ್ಲಿ ಬೌಲಿಂಗ್ ಘಟಕವನ್ನು ಪುಡಿಗಟ್ಟಿದರು. ತಂಡವು 10 ಓವರ್ಗಳಲ್ಲಿ 108 ರನ್ ಪೇರಿಸಿ ಬೃಹತ್ ಮೊತ್ತ ಪೇರಿಸುವ ಮುನ್ಸೂಚನೆ ನೀಡಿದರು. ಇದೇ ವೇಳೆ ಇಬ್ಬರು ತಲಾ ಅರ್ಧಶತಕ ಪೂರ್ಣಗೊಳಿಸಿದರು.
ಮುಕೇಶ್ ಬೌಲಿಂಗ್ನಲ್ಲಿ 12ನೇ ಓವರ್ನ 4ನೇ ಎಸೆತವನ್ನು ಜಡ್ಜ್ ಮಾಡುವಲ್ಲಿ ಎಡವಿದ ಮಾರ್ಷ್ 36 ಎಸೆತಗಳಲ್ಲಿ 6 ಸಿಕ್ಸರ್, 6 ಬೌಂಡರಿ ಸಹಿತ 72 ರನ್ ಬಾರಿಸಿ ಔಟಾದರು. ಕಣಕ್ಕಿಳಿದ ಐಪಿಎಲ್ನ ದುಬಾರಿ ಆಟಗಾರ ರಿಷಭ್ ಪಂತ್, 6 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ 30 ಎಸೆತಗಳಲ್ಲಿ 7 ಸಿಕ್ಸರ್, 6 ಸಿಕ್ಸರ್ ಸಹಿತ 75 ರನ್ ಗಳಿಸಿ ಪೂರನ್ ಕ್ಲೀನ್ ಬೋಲ್ಡ್ ಆದರು. ಡೇವಿಡ್ ಮಿಲ್ಲರ್ 27 ರನ್ ಸಿಡಿಸಿದರು.
