KL Rahul: ಕನ್ನಡಿಗ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ಪಾಸ್; ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಲು ರೆಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  Kl Rahul: ಕನ್ನಡಿಗ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ಪಾಸ್; ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಲು ರೆಡಿ

KL Rahul: ಕನ್ನಡಿಗ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ಪಾಸ್; ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಲು ರೆಡಿ

ಕನ್ನಡಿಗ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದು, ಶೀಘ್ರದಲ್ಲೇ ಏಷ್ಯಾಕಪ್‌ಗೆ ಶ್ರೀಲಂಕಾದಲ್ಲಿರುವ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡಿಗ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ಪಾಸಾಗಿದ್ದು, ಟೀಂ ಇಂಡಿಯಾ ಸೇರಿಕೊಳ್ಳಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. (Twitter)
ಕನ್ನಡಿಗ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ಪಾಸಾಗಿದ್ದು, ಟೀಂ ಇಂಡಿಯಾ ಸೇರಿಕೊಳ್ಳಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದಾರೆ. (Twitter)

ಬೆಂಗಳೂರು: ವಿಕೆಟ್ ಕೀಪರ್ ಕಂ ಬ್ಯಾಟರ್ ಕೆಎಲ್ ರಾಹುಲ್ (KL Rahul) ಅತಿ ಶೀಘ್ರದಲ್ಲೇ ಶ್ರೀಲಂಕಾದ (Sri Lanka) ಕ್ಯಾಂಡಿಯಲ್ಲಿರುವ ಟೀಂ ಇಂಡಿಯಾವನ್ನು (Team India) ಸೇರಿಕೊಳ್ಳಲಿದ್ದಾರೆ. ಕನ್ನಡಿಗ ರಾಹುಲ್ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಈ ಮೂಲಕ ಅವರು ಸೂಪರ್-4ರ ಸುತ್ತಿಗೆ ತಂಡದಲ್ಲಿ ತಾನು ಆಯ್ಕೆಗೆ ಲಭ್ಯ ಇರಲಿದ್ದೇನೆ ಎಂಬ ಸಂದೇಶವನ್ನು ಆಯ್ಕೆ ಸಮಿತಿಗೆ ರವಾನಿಸಿದ್ದಾರೆ. ಪಲ್ಲೆಕೆಲೆಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಟಾಪ್ ಆರ್ಡರ್ ಬ್ಯಾಟಿಂಗ್‌ನಲ್ಲಿ ವೈಫಲ್ಯವಾಗಿದ್ದ ಬೆನ್ನಲ್ಲೇ ರಾಹುಲ್ ತಾವು ಸೂಪರ್-4 ಸುತ್ತಿಗೆ ಸಿದ್ಧನಾಗಿದ್ದೇನೆ ಎಂದು ಸಂದೇಶವನ್ನು ರವಾನಿಸಿದ್ದಾರೆ.

ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ರಾಹುಲ್

ಐಪಿಎಲ್ ವೇಳೆ ಗಾಯಗೊಂಡಿದ್ದ ಗಾಯಗೊಂಡಿದ್ದ ಕೆಎಲ್ ರಾಹುಲ್, ಈ ವರ್ಷದ ಮೇ ತಿಂಗಳಿನಿಂದ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಆಟದಿಂದ ದೂರವಿದ್ದರು. ತಮ್ಮ ಆಯ್ಕೆಗೆ ಕೆಲವೇ ದಿನಗಳ ಮುನ್ನ ಹೊಸದಾಗಿ ಗಾಯದ ಸಮಸ್ಯೆಯನ್ನು ಎದುರಿಸಿದ್ದರು. ಹೀಗಾಗಿ ಫಿಟ್ನೆಸ್ ಪರೀಕ್ಷೆಗಾಗಿ ಬೆಂಗಳೂರಿನ ಎನ್‌ಸಿಎನಲ್ಲಿ ಅಭ್ಯಾಸ ಆರಂಭಿಸಿದ್ದರು.

ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕಳೆದ ವಾರ ದೆಹಲಿಯಲ್ಲಿ ನಡೆದ ಏಷ್ಯಾಕಪ್‌ಗೆ ತಂಡವನ್ನು ಪ್ರಕರಿಸಿದ ಬಳಿಕ ಮಾತನಾಡಿದ್ದರು. ರಾಹುಲ್ ಗುಂಪು ಹಂತದ ಪಂದ್ಯಗಳನ್ನು ಮಾತ್ರ ತಪ್ಪಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಬ್ಯಾಟಿಂಗ್, ಕೀಪಿಂಗ್ ಅಭ್ಯಾಸ ಶಿಬಿರಗಳಲ್ಲಿ ಭಾಗಿ

ಟೀಂ ಇಂಡಿಯಾ ಶ್ರೀಲಂಕಾಗೆ ತೆರಳುವ ಮುನ್ನ ಬೆಂಗಳೂರು ಸಮೀಪದ ಆಲೂರ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿತ್ತು. ಅಲ್ಲಿ ತಂಡದ ಎಲ್ಲಾ ಆಟಗಾರರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಅಭ್ಯಾಸ ನಡೆಸಿತ್ತು. ಕೆಎಲ್ ರಾಹುಲ್ ಕೂಡ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಸೆಷನ್‌ಗಳಲ್ಲಿ ಪಾಲ್ಗೊಂಡಿದ್ದರು.

ರಾಹುಲ್ ಎನ್‌ಸಿಎಯಲ್ಲಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಶೀಘ್ರವೇ ಅವರು ಕ್ಯಾಂಡಿಯಲ್ಲಿ ಇರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ರೆವ್ ಸ್ಪೋರ್ಟ್ಸ್ ವರದಿ ಮಾಡಿದೆ. ರಾಹುಲ್ ಸೂಪರ್ 4 ಸುತ್ತಿನ ಆಯ್ಕೆಗೆ ಲಭ್ಯವಿರುತ್ತಾರೆ ಅಂತಲೂ ವರದಿಯಲ್ಲಿ ಹೇಳಲಾಗಿದೆ.

ಕೆಎಲ್ ರಾಹುಲ್ vs ಇಶಾನ್ ಕಿಶನ್

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೆ, ಟೀಂ ಇಂಡಿಯಾ ಗೌರವಯುತ ಸ್ಕೋರ್ ದಾಖಲಿಸಲು ಉಪಯುಕ್ತ ಕಾಣಿಕೆ ನೀಡಿದ್ದರು. 81 ಎಸೆತಗಳಿಂದ 9 ಬೌಂಡರಿ ಹಾಗೂ 2 ಅಮೋಘ ಸಿಕ್ಸರ್‌ಗಳೊಂದಿಗೆ 82 ರನ್ ಗಳಿಸಿ ಗಮನ ಸೆಳೆದಿದ್ದರು.

ಇದೀಗ ಮುಂದಿನ ಹಂತದ ಪಂದ್ಯಗಳಿಗೆ ರಾಹುಲ್ ಲಭ್ಯ ಇರುವುದರಿಂದ ಕೆಎಲ್ ಮತ್ತು ಕಿಶನ್ ನಡುವೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಕಳೆದ ಶನಿವಾರ ಸತತ ನಾಲ್ಕನೇ ಅರ್ಧ ಶತಕ ಬಾರಿಸಿದ ಇನ್‌-ಫಾರ್ಮ್ ಇಶಾನ್‌ ಅವರನ್ನೇ ಮುಂದುವರಿಸಬೇಕೇ ಅಥವಾ ಕೆಲ್ ರಾಹುಲ್‌ಗೆ ಅವಕಾಶ ನೀಡಬೇಕೇ ಎಂಬುದು ಚರ್ಚೆಯನ್ನು ಹುಟ್ಟುಹಾಕಿದೆ.

Whats_app_banner