ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ 238 ರನ್‌ಗಳಿಂದ ಗೆದ್ದ ಪಾಕಿಸ್ತಾನ; ಕ್ರಿಕೆಟ್ ಶಿಶು ನೇಪಾಳಕ್ಕೆ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ 238 ರನ್‌ಗಳಿಂದ ಗೆದ್ದ ಪಾಕಿಸ್ತಾನ; ಕ್ರಿಕೆಟ್ ಶಿಶು ನೇಪಾಳಕ್ಕೆ ಸೋಲು

ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ 238 ರನ್‌ಗಳಿಂದ ಗೆದ್ದ ಪಾಕಿಸ್ತಾನ; ಕ್ರಿಕೆಟ್ ಶಿಶು ನೇಪಾಳಕ್ಕೆ ಸೋಲು

Asia Cup 2023: 343 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನೇಪಾಳ, 23.4 ಓವರ್‌ಗಳಲ್ಲಿ ಕೇವಲ 104 ರನ್‌ಗಳಿಗೆ ಆಲೌಟ್‌ ಆಯ್ತು. ಹೀಗಾಗಿ ಪಾಕಿಸ್ತಾನ ತಂಡವು ಭರ್ಜರಿ ಜಯ ಸಾಧಿಸಿತು.

ಪಾಕಿಸ್ತಾನ ಆಟಗಾರರ ಸಂಭ್ರಮ
ಪಾಕಿಸ್ತಾನ ಆಟಗಾರರ ಸಂಭ್ರಮ (AFP)

ಏಷ್ಯಾಕಪ್‌ (Asia Cup) ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ (Pakistan) ತಂಡವು ಭರ್ಜರಿ ಜಯ ಸಾಧಿಸಿದೆ. ನಾಯಕ ಬಾಬರ್ ಅಜಮ್ (Babar Azam) ಮತ್ತು ಇಫ್ತಿಕರ್ ಅಹ್ಮದ್ ಸ್ಫೋಟಕ ಶತಕ ಹಾಗೂ ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ನೇಪಾಳ (Nepal) ವಿರುದ್ಧ ಭರ್ಜರಿ 238 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ, ಆರಂಭಿಕ ಆಘಾತದ ನಡುವೆಯೂ ಬಾಬರ್ ಅಜಮ್ ಮತ್ತು ಇಫ್ತಿಕರ್ ಅಹ್ಮದ್ ದ್ವಿಶತಕದ ಜೊತೆಯಾಟದ ನೆರವಿನಿಂದ 6 ವಿಕೆಟ್‌ ಕಳೆದುಕೊಂಡು 342 ರನ್‌ ಕಲೆಹಾಕಿತು. 343 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನೇಪಾಳ, ಆರಂಭದಿಂದಲೇ ಕುಂಟುತ್ತಾ ಸಾಗಿತು. ಅಂತಿಮವಾಗಿ 23.4 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್‌ ಆಯ್ತು. ಹೀಗಾಗಿ ಪಾಕಿಸ್ತಾನ ತಂಡವು ಅಮೋಘ ಜಯ ಸಾಧಿಸಿತು.

ಚೇಸಿಂಗ್‌ ವೇಳೆ ನೇಪಾಳ ತಂಡವು ಉತ್ತಮ ಆರಂಭ ಪಡೆಯುವ ಸೂಚನೆ ನೀಡಿತು. ಶಾಹೀನ್‌ ಅಫ್ರಿದಿ ಎಸೆದ ಮೊದಲ ಓವರ್‌ನ ಮೊದಲೆರಡು ಎಸೆತಗಳಿಗೆ ಕುಶಲ್‌ (8) ಸತತ ಬೌಂಡರಿ ಸಿಡಿಸಿದರು. ಆದರೆ, ಅದೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ನೇಪಾಳ ಸತತ ಎರಡು ವಿಕೆಟ್‌ ಕಳೆದುಕೊಂಡಿತು. ನಸೀಮ್‌ ಶಾ ಎಸೆದ ಎರಡನೇ ಓವರ್‌ನಲ್ಲಿ ಮತ್ತೊಂದು ವಿಕೆಟ್‌ ಪತನವಾಯ್ತು. ನಾಲ್ಕನೇ ವಿಕೆಟ್‌ಗೆ ಒಂದಾದ ಆರಿಫ್‌ ಶೇಖ್‌ ಮತ್ತು ಕಾಮಿ ಕೆಲಕಾಲ ಕ್ರೀಸ್‌ ಕಚ್ಚಿ ಆಡಿದರು. ಆದರೆ ಅವರಿಂದ ಕನಿಷ್ಠ 30 ರನ್‌ಗಳ ಗಡಿದಾಟಲು ಸಾಧ್ಯವಾಗಲಿಲ್ಲ. ಮಧ್ಯಮ ಓವರ್‌ಗಳಲ್ಲಿ ಹಾರಿಸ್‌ ರೌಫ್‌ ಎರಡು ವಿಕೆಟ್‌ ಕಬಳಿಸಿದರು. ಕೊನೆಯಲ್ಲಿ ಮ್ಯಾಜಿಕ್‌ ಮಾಡಿದ ಶದಾಬ್ ಖಾನ್ ನಾಲ್ಕು ವಿಕೆಟ್‌ ಕಬಳಿಸಿ ಅಬ್ಬರಿಸಿದರು. ಅಂತಿವಾಗಿ 104 ರನ್‌ಗಳಿಗೆ ನೇಪಾಳ ಇನ್ನಿಂಗ್ಸ್‌ ಮುಗಿಸಿತು. ಚೊಚ್ಚಲ ಏಷ್ಯಾಕಪ್‌ ಪಂದ್ಯದಲ್ಲಿ ನೇಪಾಳಕ್ಕೆ ತಕ್ಕ ಮಟ್ಟಿನ ಸ್ಪರ್ಧೆ ನೀಡುವಲ್ಲಿ ತಂಡ ಯಶಸ್ವಿಯಾಯ್ತು.

ಪಾಕಿಸ್ತಾನದ ಅಬ್ಬರ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿತು. ನಾಯಕ ಬಾಬರ್ ಅಜಮ್ 131 ಎಸೆತಗಳಿಂದ 14 ಬೌಂಡರಿ ಹಾಗೂ 4 ಅಮೋಘ ಸಿಕ್ಸರ್‌ಗಳ ನೆರವಿನಿಂದ 154 ರನ್ ಸಿಡಿಸಿದರೆ, ಇಫ್ತಿಕರ್ 71 ಎಸೆತಗಳಿಂದ 11 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸೇರಿ 109 ರನ್ ಗಳಿಸಿ ಅಜೇಯರಾಗಿ ಉಳಿದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ಬಾಬರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪಾಕಿಸ್ತಾನ ತಂಡವು ಆರಂಭಿಕ ಆಘಾತ ಅನುಭವಿಸಿತು. 6.1 ಓವರ್ ಆಗುವಷ್ಟರಲ್ಲಿ ಫಖರ್ ಜಮಾನ್ (14) ಮತ್ತು ಇಮಾಮ್-ಉಲ್-ಹಕ್ (5) ಪೆಲಿವಿಯ್ ಸೇರಿಕೊಂಡರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಾಯಕ ಬಾಬರ್ ಅಜಮ್ ಆರಂಭದಲ್ಲಿ ನಿಧಾನದ ಆಟದ ಮೊರೆ ಹೋದರು. 109 ಎಸೆತಗಳಲ್ಲಿ ಶತಕ ಪೂರೈಸಿದ ಬಳಿಕ ಸ್ಫೋಟಕ ಆಟವಾಡಿದರು. ಅಜಮ್‌ಗೆ ಸಾಥ್ ನೀಡಿದ್ದ ಮೊಹಮ್ಮದ್ ರಿಜ್ವಾನ್, 50 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 44 ರನ್ ಗಳಿಸಿ ರನೌಟ್ ಆದರು. ಬಳಿಕ ಬಂದ ಇಫ್ತಿಕರ್ ಅಹ್ಮದ್ 71 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸೇರಿದಂತೆ 109 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ನೆರವಾದರು.

Whats_app_banner