Asia Cup: ಸಮರವಿಕ್ರಮ, ಅಸಲಂಕಾ ಅರ್ಧಶತಕ; ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ಸುಲಭ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  Asia Cup: ಸಮರವಿಕ್ರಮ, ಅಸಲಂಕಾ ಅರ್ಧಶತಕ; ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ಸುಲಭ ಜಯ

Asia Cup: ಸಮರವಿಕ್ರಮ, ಅಸಲಂಕಾ ಅರ್ಧಶತಕ; ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ಸುಲಭ ಜಯ

Bangladesh vs Sri Lanka: ಚೇಸಿಂಗ್‌ನಲ್ಲಿ ಸಮರವಿಕ್ರಮ ಮತ್ತು ಅಸಲಂಕಾ ಲಂಕಾಗೆ ನೆರವಾದರು. ತಲಾ ಅರ್ಧಶತಕ ಸಿಡಿಸುವ ಮೂಲಕ ಸಂಕಷ್ಟದಲ್ಲಿದ್ದ ತಂಡವನ್ನು ಗೆಲ್ಲಿಸಿದರು. ಲಂಕಾ ಗೆಲುವಿಗೆ ಕಾರಣರಾದ ಪತಿರಾನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ಸುಲಭ ಜಯ
ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ಸುಲಭ ಜಯ (AP)

ಏಷ್ಯಾಕಪ್‌ 2023ರ (Asia Cup 2023) 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (Bangladesh vs Sri Lanka) 5 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ನಜ್ಮುಲ್ ಹೊಸೈನ್ ಶಾಂಟೊ ಆಕರ್ಷಕ ಅರ್ಧಶತಕದ ಹೊರತಾಗಿಯೂ 42.4 ಓವರ್‌ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಯ್ತು. ಗುರಿ ಬೆನ್ನಟ್ಟಿದ ಶ್ರೀಲಂಕಾ ಕೇವಲ 39 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಿ ಗೆಲುವಿನ ನಗೆ ಬೀರಿದೆ.

ಚೇಸಿಂಗ್‌ ಆರಂಭಿಸಿದ ಲಂಕಾಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 15 ಆಗುವಷ್ಟರಲ್ಲಿ ಆರಂಭಿಕರಿಬ್ಬರೂ ಔಟಾದರು. ಪಾತುಮ್‌ ನಿಸ್ಸಂಕಾ (14) ಹಾಗೂ ಕರುಣರತ್ನೆ (1) ನಿರಾಸೆ ಮೂಡಿಸಿದರು. ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಕುಸಲ್‌ ಮೆಂಡೀಸ್‌ ಕೂಡಾ ಒಂದಂಕಿ ಮೊತ್ತಕ್ಕೆ ಸುಸ್ತಾದರು. ಈ ವೇಳೆ ಕ್ರೀಸ್‌ಕಚ್ಚಿ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಸಮರವಿಕ್ರಮ ಅರ್ಧಶತಕ ಸಿಡಿಸಿದರು. 77 ಎಸೆತ ಎದುರಿಸಿದ ಅವರು 54 ರನ್‌ ಗಳಿಸಿ ಮೆಹೆದಿ ಹಸನ್‌ಗೆ ವಿಕೆಟ್‌ ಒಪ್ಪಿಸಿದರು.

ಉತ್ತಮ ಬ್ಯಾಟಿಂಗ್‌ ಪ್ರದರರ್ಶಿಸಿದ ಚರಿತ್‌ ಅಸಲಂಕಾ 9ನೇ ಏಕದಿನ ಶತಕ ಸಿಡಿಸಿದರು. 92 ಎಸೆತಗಳಿಂದ 62 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇನ್ನಿಂಗ್ಸ್‌ ಕೊನೆಗೆ ಅಸಲಂಕಾ ಜೊತೆಗೂಡಿದ ನಾಯಕ ಶನಕ 14 ರನ್‌ ಕಲೆ ಹಾಕಿದರು.‌

ಬಾಂಗ್ಲಾ ಅಲ್ಪ ಮೊತ್ತ

ಬಾಂಗ್ಲಾ ತಂಡದ ಆರಂಭಿಕ ಬ್ಯಾಟ್ಸಮನ್ ತಂಜಿದ್ ಹಸನ್ ಶೂನ್ಯಕ್ಕೆ ಔಟಾದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸಮನ್ ಮೊಹಮ್ಮದ್ ನಯಿಮ್ 26 ಎಸೆತಗಳಿಂದ 4 ಬೌಂಡರಿ ಸೇರಿ 16 ರನ್ ಗಳಿಸಿ ಧನಂಜಯ ಡಿ ಸಿಲ್ವ ಬೌಲಿಂಗ್‌ನಲ್ಲಿ ಔಟಾದರು. ನಾಯಕ ಹಾಗೂ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೇವಲ 5 ರನ್ ಗಳಿಸಿ ಮತೀಶ ಪತಿರಣ ಅವರಿಗೆ ವಿಕೆಟ್ ಒಪ್ಪಿಸಿದ್ದರು. ವಿಕೆಟ್ ಕೀಪರ್ ಹಾಗೂ ಅನುಭವಿ ಬ್ಯಾಟರ್ ಮುಶ್ಫಿಕರ್ ರಹೀಮ್ 13 ರನ್‌ ಗಳಿಸಲಷ್ಟೇ ಶಕ್ತವಾದರು.

ಬಾಂಗ್ಲಾ ಪರ ಉತ್ತಮ ಪ್ರದರ್ಶನ ನೀಡಿದ ನಜ್ಮುಲ್ ಹೊಸೈನ್ 122 ಎಸೆತಗಳಿಂದ 7 ಬೌಂಡರಿ ಸೇರಿದಂತೆ 89 ರನ್‌ ಕಲೆ ಹಾಕಿದರು. ಇದು ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತ. ಉಳಿದಂತೆ ತೌಹಿದ್ 20, ಮೆಹದಿ ಹಸನ್ ಮಿರಾಜ್ 5, ಮೆಹದಿ ಹಸನ್ 6, ತಸ್ಕಿನ್ ಅಹ್ಮದ್ 0, ಮುಸ್ತಫಿಜುರ್ ರೆಹಮಾನ್ 0 ಹಾಗೂ ಶೋರಿಫುಲ್ ಇಸ್ಲಾಂ ಅಜೇಯ 2 ರನ್ ಗಳಿಸಿದರು.

ಪತಿರಣ ಪಂದ್ಯಶ್ರೇಷ್ಠ

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಪರ ಆಡಿ, ಎಂಎಸ್‌ ಧೋನಿ ಸಲಹೆಯಿಂದ ಬೆಳೆದ ಮತೀಶ ಪತಿರಣ ಶ್ರೀಲಂಕಾ ಪರ 4 ವಿಕೆಟ್ ಪಡೆದರು. ಉಳಿದಂತೆ ಮಹೀಶ್ ತೀಕ್ಷಣ 2, ಧನಂಜಯ ಡಿ ಸಿಲ್ವ, ಮತೀಶ ಪತಿರಣ, ದುನಿತ್ ವೆಲ್ಲಲಾ ಹಾಗೂ ದಸುನ್ ಶನಕ ತಲಾ 1 ವಿಕೆಟ್ ಪಡೆದರು.

ಬಿ ಗುಂಪಿನಲ್ಲಿರುವ ಶ್ರೀಲಂಕಾ ತಂಡವು, ಬಾಂಗ್ಲಾದೇಶ ವಿರುದ್ಧ ತವರು ಮೈದಾನದಲ್ಲಿ ಸುಲಭ ಜಯ ಒಲಿಸಿಕೊಂಡಿದೆ. ಬಾಂಗ್ಲಾದೇಶವು ಬೌಲಿಂಗ್‌ ವೇಳೆ ಉತ್ತಮ ಆರಂಭ ಪಡೆದರೂ, ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅತ್ತ ಬ್ಯಾಟಿಂಗ್‌ನಲ್ಲಿ ತಂಡದಿಂದ ಉತ್ತಮ ಪ್ರದರ್ಶನ ಹೊರಬರಲಿಲ್ಲ. ಶಾಂಟೊ 89 ರನ್‌ ಗಳಿಸಿರುವುದರ ಹೊರತಾಗಿ ಯಾವೊಬ್ಬ ಬ್ಯಾಟರ್‌ ಕೂಡಾ ಲಂಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ. ಅತ್ತ ಬಾಂಗ್ಲಾಗೆ ಯುವ ಬೌಲರ್‌ ಪತಿರಾನ ಮತ್ತು ತೀಕ್ಷಣ ಕಂಟಕರಾದರು. ಹೀಗಾಗಿ ಅಲ್ಪ ಮೊತ್ತಕ್ಕೆ ತನ್ನ ಪಾಳಿ ಮುಗಿಸಿದ ಬಾಂಗ್ಲಾ, ಬೌಲಿಂಗ್‌ನಲ್ಲಿ ಮೋಡಿ ಮಾಡಲು ಸಾಧ್ಯವಾಗಲಿಲ್ಲ. ಚೇಸಿಂಗ್‌ನಲ್ಲಿ ಸಮರವಿಕ್ರಮ ಮತ್ತು ಅಸಲಂಕಾ ಲಂಕಾಗೆ ನೆರವಾದರು. ತಲಾ ಅರ್ಧಶತಕ ಸಿಡಿಸುವ ಮೂಲಕ ಸಂಕಷ್ಟದಲ್ಲಿದ್ದ ತಂಡವನ್ನು ಗೆಲ್ಲಿಸಿದರು. ಲಂಕಾ ಗೆಲುವಿಗೆ ಕಾರಣರಾದ ಪತಿರಾನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Whats_app_banner