India vs Sri Lanka: ಸಿರಾಜ್ ಬೆಂಕಿಯ ದಾಳಿಗೆ ಲಂಕಾ ತತ್ತರ; ಏಷ್ಯಾಕಪ್ ಮುಡಿಗೇರಿಸಿಕೊಳ್ಳಲು ಟೀಂ ಇಂಡಿಯಾಗೆ ಬೇಕು 51 ರನ್‌
ಕನ್ನಡ ಸುದ್ದಿ  /  ಕ್ರಿಕೆಟ್  /  India Vs Sri Lanka: ಸಿರಾಜ್ ಬೆಂಕಿಯ ದಾಳಿಗೆ ಲಂಕಾ ತತ್ತರ; ಏಷ್ಯಾಕಪ್ ಮುಡಿಗೇರಿಸಿಕೊಳ್ಳಲು ಟೀಂ ಇಂಡಿಯಾಗೆ ಬೇಕು 51 ರನ್‌

India vs Sri Lanka: ಸಿರಾಜ್ ಬೆಂಕಿಯ ದಾಳಿಗೆ ಲಂಕಾ ತತ್ತರ; ಏಷ್ಯಾಕಪ್ ಮುಡಿಗೇರಿಸಿಕೊಳ್ಳಲು ಟೀಂ ಇಂಡಿಯಾಗೆ ಬೇಕು 51 ರನ್‌

ಕೊಲಂಬೊದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ದಾಳಿಗೆ ಶ್ರೀಲಂಕಾ ತತ್ತರಿಸಿದ್ದು, ಟೀಂ ಇಂಡಿಯಾ ಗೆಲುವಿಗೆ ಕೇವಲ 51 ರನ್‌ಗಳ ಸಾಧಾರಣ ಗುರಿ ನೀಡಿದೆ.

ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ (AFP)
ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ (AFP)

ಕೊಲಂಬೊ: 2, 0, 0, 0, 4, 0, 8, 1, 0 ಇದು ಯಾವುದೋ ಫೋನ್ ನಂಬರ್ ಅಲ್ಲ. ಬದಲಾಗಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ (Asia Cup Final 2023) ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ (India vs Sri Lanka) ಬ್ಯಾಟ್ಸಮನ್‌ಗಳು ಗಳಿಸಿರುವ ರನ್‌ ಇದು.

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ( ಅವರ ಬೆಂಕಿಯ ದಾಳಿಗೆ ತತ್ತರಿಸಿದ ಲಂಕಾ ತಂಡ ಕೇವಲ 15.2 ಓವರ್‌ಗಳಲ್ಲಿ ಕೇವಲ 50 ರನ್ ಗಳಿಸಿ ಸರ್ವ ಪತನ ಕಂಡಿದೆ. ಆ ಮೂಲಕ ಟೀಂ ಇಂಡಿಯಾ ಏಷ್ಯಾ ಕಪ್ ಚಾಂಪಿಯನ್ ಆಗಲು ಕೇವಲ 51 ರನ್ ಗಳ ಅಸಾಧಾರಣ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಸುನ್ ಶನಕ ಪ್ಲಾನ್‌ ಟೀಂ ಇಂಡಿಯಾದ ಮೊಹಮ್ಮದ್ ಸಿರಾಜ್ ಮುಂದೆ ತಲೆಕೆಳಗಾದವು. ಮೊದಲ ಓವರ್‌ನ ಮೂರನೇ ಎಸೆತದಲ್ಲೇ ಲಂಕಾದ ಮೊದಲ ವಿಕೆಟ್ ಪತನವಾಯ್ತು. ಜಸ್ಪ್ರೀತ್ ಬುಮ್ರಾ ಎಸೆದ ಮೂರನೇ ಎಸೆತದಲ್ಲೇ ಕುಸಾಲ್ ಪೆರೇರ (0) ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ನಡೆದಿದ್ದೇ ಮೊಹಮ್ಮದ್ ಸಿರಾಜ್ ಅವರ ಬೆಂಕಿಯಂತಹ ದಾಳಿ.

ಏಕದಿನ ಕ್ರಿಕೆಟ್‌ನಲ್ಲಿ ಮೊಹಮ್ಮದ್ ಸಿರಾಜ್ ಶ್ರೇಷ್ಠ ಸಾಧನೆ

ಇನ್ನಿಂಗ್ಸ್‌ನ ಎರಡನೇ ಓವರ್‌ ಎಸೆಯಲು ಬಂದ ಮೊಹಮ್ಮದ್ ಸಿರಾಜ್ ಲಂಕಾದ ಬ್ಯಾಟರ್‌ಗಳನ್ನು ಅಕ್ಷರಶಃ ಕಾಡಿದರು. ಸಿರಾಜ್ ಅವರ ಬೆಂಕಿಯಂತಹ ಎಸೆತಗಳನ್ನು ಮುಟ್ಟಲು ಹಿಂದೇಟು ಹಾಕಿದರು. ಧೈರ್ಯ ಮಾಡಿ ಸಿರಾಜ್ ಎಸೆತಗಳನ್ನು ಮುಟ್ಟಿದರೆ ಸಾಕು ವಿಕೆಟ್ ಖಚಿತ ಆ ಮಟ್ಟಿಗೆ ಮಾರಕ ಬೌಲಿಂಗ್ ನಡೆಸಿದರು.

ಪಾತುಮ್ ನಿಸ್ಸಾಂಕ (2), ಕುಸಾಲ್ ಮೆಂಡಿಸ್ (17), ಸದೀರ ಸಮರವಿಕ್ರಮ (0), ಚರಿತ್ ಅಸಲಂಕಾ (0), ಧನಂಜಯ ಡಿ ಸಿಲ್ವ (4), ನಾಯಕ ಶನಕ (0) ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಸಿರಾಜ್ 7 ಓವರ್‌ಗಳಲ್ಲಿ 1 ಮೆಡಿನ್ ಸೇರಿ 21 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದರು.

ಆ ಬಳಿಕ ದಾಳಿಗೆ ಇಳಿದ ಉಪ ನಾಯಕ ಹಾರ್ದಿಕ್ ಪಾಂಡ್ಯ, ದುನಿತ್ ವೆಲ್ಲಲಾಗೆ (8), ಪ್ರಮೋದ್ ಮದುಶನ್ (1) ಹಾಗೂ ಮಥೀಶ ಪತಿರಣ (0) ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ 15.2 ಓವರ್‌ಗಳಲ್ಲಿ ಶ್ರೀಲಂಕಾ ಇನ್ನಿಂಗ್ಸ್ ಮುಗಿಸುವಂತೆ ನೋಡಿಕೊಂಡರು.

ಭಾರತದ ಆಡುವ 11ರ ಬಳಗ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್,

ಶ್ರೀಲಂಕಾದ ಆಡುವ 11ರ ಬಳಗ

ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮಥೀಶ ಪತಿರಣ

ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ವೇಳಾಪಟ್ಟಿ

Whats_app_banner