Asia Cup 2023: ಏಷ್ಯಾಕಪ್ ಜೆರ್ಸಿಯಲ್ಲಿ ಪಾಕ್ ಹೆಸರೇ ಮಾಯ; ಪಿಸಿಬಿಗೆ ಭಾರಿ ಮುಖಭಂಗ, ಟ್ರೋಲ್
ಕನ್ನಡ ಸುದ್ದಿ  /  ಕ್ರಿಕೆಟ್  /  Asia Cup 2023: ಏಷ್ಯಾಕಪ್ ಜೆರ್ಸಿಯಲ್ಲಿ ಪಾಕ್ ಹೆಸರೇ ಮಾಯ; ಪಿಸಿಬಿಗೆ ಭಾರಿ ಮುಖಭಂಗ, ಟ್ರೋಲ್

Asia Cup 2023: ಏಷ್ಯಾಕಪ್ ಜೆರ್ಸಿಯಲ್ಲಿ ಪಾಕ್ ಹೆಸರೇ ಮಾಯ; ಪಿಸಿಬಿಗೆ ಭಾರಿ ಮುಖಭಂಗ, ಟ್ರೋಲ್

ಏಷ್ಯಾಕಪ್ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನದ ಹೆಸರು ಜೆರ್ಸಿಯಲ್ಲಿ ಕಾಣೆಯಾಗಿದ್ದು, ಆಕ್ರೋಶಕ್ಕೆ ಗುರಿಯಾಗಿದೆ. ಅಚ್ಚರಿ ಸಂಗತಿ ಅಂದರೆ ಆತಿಥ್ಯದ ಹಕ್ಕು ಹೊಂದಿ ರುವ ಪಾಕಿಸ್ತಾನ ತಂಡದ ಜೆರ್ಸಿಯಲ್ಲೇ ತಮ್ಮ ದೇಶದ ಹೆಸರು ಕಾಣೆಯಾಗಿದೆ.

ಆತಿಥ್ಯ ವಹಿಸಿದ ಪಾಕ್ ಜೆರ್ಸಿಯಲ್ಲೇ ತನ್ನ ಹೆಸರು ಮಾಯ.
ಆತಿಥ್ಯ ವಹಿಸಿದ ಪಾಕ್ ಜೆರ್ಸಿಯಲ್ಲೇ ತನ್ನ ಹೆಸರು ಮಾಯ.

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿಗೆ (Asia Cup 2023) 2 ದಿನಗಳ ಹಿಂದಷ್ಟೇ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ. ಎರಡನೇ ಪಂದ್ಯದಲ್ಲಿ ಶ್ರೀಲಂಕಾ ದಿಗ್ವಿಜಯ ಸಾಧಿಸಿದೆ. ಇದೀಗ ಹೈವೋಲ್ಟೇಜ್ ಭಾರತ-ಪಾಕಿಸ್ತಾನ ಪಂದ್ಯಕ್ಕೆ (India vs Pakistan) ವೇದಿಕೆ ಸಿದ್ಧವಾಗಿದೆ. ಇದರ ನಡುವೆ ವಿವಾದವೊಂದು ಬೆಳಕಿಗೆ ಬಂದಿದೆ.

ಏಷ್ಯಾಕಪ್ ಟೂರ್ನಿಯ ಆತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನದ ಹೆಸರೇ ಜೆರ್ಸಿಯಲ್ಲಿ ಕಾಣೆಯಾದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಇದು ಆಕ್ರೋಶಕ್ಕೆ ಗುರಿಯಾಗಿದ್ದು, ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ (Pakistan Cricket Borad) ಭಾರಿ​​ ಮುಖಭಂಗಕ್ಕೆ ಒಳಗಾಗಿದೆ. ಅಲ್ಲದೆ, ಉಳಿದ ತಂಡಗಳ ಜೆರ್ಸಿಯಲ್ಲೂ ಪಾಕಿಸ್ತಾನದ ಹೆಸರಿಲ್ಲ.

ಪಾಕಿಸ್ತಾನದ ಅಭಿಮಾನಿಗಳು ನಿರಾಸೆ

ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಜೆರ್ಸಿಗಳ ಚಿತ್ರಗಳು ವೈರಲ್ ಆಗುತ್ತಿದ್ದು, ಪಾಕ್​ ಅಭಿಮಾನಿಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಯುಎಇಯಲ್ಲಿ ಟೂರ್ನಿ ನಡೆದರೂ ಏಷ್ಯಾಕಪ್‌ ಲೋಗೋ ಕೆಳಗೆ ಆತಿಥ್ಯ ವಹಿಸಿದ್ದ ಶ್ರೀಲಂಕಾದ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೀಗ ಪಾಕಿಸ್ತಾನದ ಹೆಸರು ಏಕಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಆತಿಥ್ಯ ವಹಿಸಿದ ಕಾರಣ, ಪಾಕಿಸ್ತಾನದ ಹೆಸರು ಜೆರ್ಸಿಯಲ್ಲಿ ಇರಬೇಕು. ಪಾಲ್ಗೊಳ್ಳುವ ಎಲ್ಲಾ ದೇಶಗಳ ತಂಡಗಳ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಇರುವುದು ಅಗತ್ಯ. ಇದು ಏಷ್ಯಾಕಪ್​ ಟೂರ್ನಿಗೆ ಮಾತ್ರವಲ್ಲ, ಯಾವುದೇ ಪ್ರಮುಖ ಟೂರ್ನಿ ನಡೆದರೂ ಆತಿಥ್ಯ ವಹಿಸುವ ದೇಶದ ಹೆಸರು, ಟೂರ್ನಮೆಂಟ್​ನಲ್ಲಿ ಪಾಲ್ಗೊಳ್ಳುವ ಎಲ್ಲಾ ದೇಶಗಳ ಜೆರ್ಸಿ ಮೇಲೂ ಆ ದೇಶದ ಹೆಸರು ಇರಬೇಕು.

ಪಿಸಿಬಿ ಸ್ಪಷ್ಟನೆ ನೀಡಿತ್ತು!

ಏಷ್ಯಾಕಪ್ ಲೋಗೋದಲ್ಲಿ ಪಾಕಿಸ್ತಾನದ ಹೆಸರು ಹಾಕಲ್ಲ ಎಂದು ಎಸಿಸಿ ಹೇಳಿರುವುದಾಗಿ ಪಿಸಿಬಿ ಸ್ಪಷ್ಟನೆ ನೀಡಿತ್ತು. ಯಾಕೆಂದರೆ ಉಭಯ ದೇಶಗಳಲ್ಲಿ ಟೂರ್ನಿ ಆಯೋಜನೆಯಾಗುವ ಕಾರಣ, ಹೆಸರು ಹಾಕುವುದು ಕಷ್ಟ ಎಂದು ಹೇಳಿತ್ತು. ಪಿಸಿಬಿಯ ಹಾರಿಕೆಯ ಉತ್ತರಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​​ಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಮನಬಂದಂತೆ ಟೀಕಿಸುತ್ತಿದ್ದಾರೆ.

ಪಾಕ್ ಕ್ರಿಕೆಟ್ ಮಂಡಳಿ ಎಡವಟ್ಟು

ಪ್ರಸಕ್ತ ಸಾಲಿನ ಏಷ್ಯಾಕಪ್​​ನಲ್ಲಿ ತಂಡಗಳ ಜೆರ್ಸಿಗಳ ಮೇಲೆ ಕೇವಲ ಏಷ್ಯಾಕಪ್ ಎಂದು ಪ್ರಕಟವಾಗಿದೆ. ಇದು ಪಿಸಿಬಿಯ ಪ್ರಮುಖ ಎಡವಟ್ಟಿಗೆ ಕಾರಣವಾಗಿದ್ದು, ಮುಜುಗರಕ್ಕೂ ಒಳಗಾಗಿದೆ. ಅಚ್ಚರಿ ಸಂಗತಿ ಅಂದರೆ ಟೂರ್ನಿ ಆರಂಭಗೊಂಡು 2 ಪಂದ್ಯಗಳ ನಂತರ ಈ ಎಡವಟ್ಟು ಬೆಳಕಿಗೆ ಬಂದಿದೆ. ಈಗ ಆಗಿರುವ ಪ್ರಮಾದವನ್ನು ತಿದ್ದಿಕೊಳ್ಳುವುದು ಕಷ್ಟ. ಹಾಗಾಗಿ ಪ್ರಸಕ್ತ ಜೆರ್ಸಿಯಲ್ಲೇ ಟೂರ್ನಿಯಲ್ಲಿ ಕಣಕ್ಕಿಳಿಯಬೇಕಿದೆ.

ಪಾಕ್ ಮಾಜಿ ಕ್ರಿಕೆಟಿಗರು ಕಿಡಿ

ರಶೀದ್ ಲತೀಫ್, ಮೊಹ್ಸಿನ್ ಖಾನ್ ಸೇರಿದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಪಿಸಿಬಿ ಮತ್ತು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶೀಘ್ರವೇ ಏಷ್ಯಾಕಪ್ ಲೋಗೋ ಜೊತೆಗೆ ಎಲ್ಲಾ ಜೆರ್ಸಿಗಳಲ್ಲಿ ಆತಿಥ್ಯ ವಹಿಸಿರುವ ಪಾಕಿಸ್ತಾನದ ಹೆಸರು ಬರುವಂತೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಆತಿಥ್ಯ ವಹಿಸಿರುವ ತಂಡದ ಹೆಸರು ಇಲ್ಲದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಕೂಡಲೇ ಮೇಲ್ವಿಚಾರಣೆ ನಡೆಸಬೇಕು ಎಂದು ಹೇಳಿದ್ದಾರೆ.

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ

ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಸಂಪೂರ್ಣ ಟೂರ್ನಿಯನ್ನು ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಪಟ್ಟು ಹಿಡಿದಿತ್ತು. ಒಂದು ಟೂರ್ನಿ ಬೇರೆಡೆ ಸ್ಥಳಾಂತರಗೊಂಡರೆ, ಪಾಕ್ ಬಿಟ್ಟು ಬೇರೆ ಎಲ್ಲಿಯಾದರೂ ಟೂರ್ನಿ ನಡೆದರೆ ಏಷ್ಯಾಕಪ್ ಟೂರ್ನಿಯಿಂದ ಹಿಂದೆ ಸರಿಯುತ್ತೇವೆ ಎಂದು ಎಚ್ಚರಿಸಿತ್ತು. ಪಾಕ್ ಪ್ರಯಾಣಿಸಲು ಭಾರತ ಒಪ್ಪದ ಕಾರಣ, ಹಲವು ತಿಂಗಳ ಹಗ್ಗಜಗ್ಗಾಟ ನಡೆಸಿತ್ತು. ಕೊನೆಗೆ ಹೈಬ್ರಿಡ್ ಮಾದರಿಗೆ ಒಪ್ಪಿಗೆ ಸೂಚಿಸಿತ್ತು. ಅದರಂತೆ ಪಾಕ್​ನಲ್ಲಿ 4 ಪಂದ್ಯಗಳು, ಶ್ರೀಲಂಕಾದಲ್ಲಿ ಫೈನಲ್ ಸೇರಿ 9 ಪಂದ್ಯಗಳು ನಡೆಯಲು ಎಸಿಸಿ ಒಪ್ಪಿಗೆ ನೀಡಿತ್ತು.

Whats_app_banner