Asian Games: ಭಾರತ ಕ್ರಿಕೆಟ್ ತಂಡದ ಮೊದಲ ಎದುರಾಳಿ ನೇಪಾಳ; ಪಂದ್ಯ ಯಾವಾಗ, ವೀಕ್ಷಣೆ ಹೇಗೆ
India vs Nepal: ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 3ರಂದು ನಡೆಯಲಿರುವ ಏಷ್ಯನ್ ಗೇಮ್ಸ್ 2023 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ.

ರುತುರಾಜ್ ಗಾಯಕ್ವಾಡ್ (Ruturaj Gaikwad) ನೇತೃತ್ವದ ಭಾರತ ಕ್ರಿಕೆಟ್ ತಂಡವು, ಅಕ್ಟೋಬರ್ 3ರಂದು (ಮಂಗಳವಾರ) ಏಷ್ಯನ್ ಗೇಮ್ಸ್ 2023ರಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ತಂಡವು ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದ್ದು, ಯಾವ ತಂಡ ಎದುರಾಳಿ ಎಂಬುದು ಖಚಿತವಾಗಿದೆ. ಭಾರತವು ಕ್ವಾರ್ಟರ್ ಫೈನಲ್‌ನಲ್ಲಿ ನೆರೆಯ ನೇಪಾಳ ತಂಡವನ್ನು ಎದುರಿಸಲಿದೆ.
ಟ್ರೆಂಡಿಂಗ್ ಸುದ್ದಿ
ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಯುವ ಕ್ರಿಕೆಟ್ ತಂಡವು ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಈಗಾಗಲೇ ಭಾರತ ವನಿತೆಯರ ತಂಡವು ಬಂಗಾರ ಗೆದ್ದು ತವರಿಗೆ ಮರಳಿದೆ. ಇದೀಗೆ ಪುರುಚರ ತಂಡ ಕೂಡಾ ಅದೇ ಚಿತ್ತದಲ್ಲಿದೆ.
2023ರ ಏಕದಿನ ವಿಶ್ವಕಪ್ ಆವೃತ್ತಿಯ ಹಿನ್ನೆಲೆಯಲ್ಲಿ ಭಾರತದ ಮುಖ್ಯ ತಂಡವು ಭಾರತದಲ್ಲೇ ಇದೆ. ಹೀಗಾಗಿ ಎರಡನೇ ದರ್ಜೆಯ ತಂಡವನ್ನು ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್ ಮತ್ತು ರವಿ ಬಿಷ್ಣೋಯ್ ಅವರಂಥಾ ಬಲಿಷ್ಠ ಆಟಗಾರರಿದ್ದಾರೆ. ಭಾರತೀಯ ತಂಡದ ಆಟಗಾರರಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಇಲ್ಲದಿದ್ದರೂ, ಬಲಿಷ್ಠ ಆಟಗಾರರೇ ಇದ್ದಾರೆ. ಹೀಗಾಗಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.
ಭಾರತ ತಂಡವು ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿದೆ. ಅದರಂತೆಯೇ ಕ್ವಾಲಿಫಿಕೇಶನ್ ಸುತ್ತು ಯಶಸ್ವಿಯಾಗಿ ಮುಗಿಸಿರುವ ನೇಪಾಳ ತಂಡವು ಅಕ್ಟೋಬರ್ 3ರಂದು ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ. ಪಂದ್ಯವು ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 6:30ಕ್ಕೆ ಪಂದ್ಯ ಆರಂಭವಾಗುತ್ತದೆ. ಇತ್ತೀಚೆಗಷ್ಟೇ ಏಷ್ಯಾಕಪ್‌ನಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಿದ್ದವು. ಆಗ ಭಾರತವು 10 ವಿಕೆಟ್‌ಗಳಿಂದ ಸಮಗ್ರ ಜಯ ಸಾಧಿಸಿತ್ತು.
ಅತ್ತ ಏಷ್ಯನ್ ಗೇಮ್ಸ್ ಗುಂಪು ಹಂತ ಪಂದ್ಯದಲ್ಲಿ ನೇಪಾಳ ತಂಡವು ಮಂಗೋಲಿಯಾ ವಿರುದ್ಧ ಬರೋಬ್ಬರಿ 314 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿತ್ತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದು ವಿಶ್ವ ದಾಖಲೆಗಳನ್ನು ನೇಪಾಳ ಮಾಡಿತ್ತು.
ಭಾರತ ಮತ್ತು ನೇಪಾಳ ಪಂದ್ಯವನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ನೇಪಾಳ ನಡುವಿನ ಏಷ್ಯನ್ ಗೇಮ್ಸ್ ಪಂದ್ಯವು ಮಂಗಳವಾರ ಹ್ಯಾಂಗ್‌ಝೌನಲ್ಲಿರುವ ZJUT ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಪಂದ್ಯವು ಅಕ್ಟೋಬರ್ 3ರ ಮಂಗಳವಾರ ಬೆಳಗ್ಗೆ 6:30 ಗಂಟೆಗೆ ಪ್ರಾರಂಭವಾಗುತ್ತದೆ.
ಲೈವ್ ಸ್ಟ್ರೀಮಿಂಗ್ ವಿವರ
ಪಂದ್ಯವನ್ನು ಮೊಬೈಲ್ ಮೂಲಕ SonyLIV ಅಪ್ಲಿಕೇಶನ್ ಮೂಲಕ ಲೈವ್ ಸ್ಟ್ರೀಮ್ ವೀಕ್ಷಿಸಬಹುದು. ಟಿವಿ ಮೂಲಕ ಸೋನಿ ಸ್ಪೋರ್ಟ್ಸ್ (Sony Sports Ten 2 SD & HD) ಮತ್ತು Sony Sports Ten 3 SD & HD (ಹಿಂದಿ) ಟಿವಿ ಚಾನೆಲ್‌ಗಳ ಮೂಲಕ ನೇರ ಪ್ರಸಾರ ನೋಡಬಹುದು.
ಏಷ್ಯನ್ ಗೇಮ್ಸ್ 2023ರ ಭಾರತ ಕ್ರಿಕೆಟ್ ತಂಡ
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್)
ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.