ಕನ್ನಡ ಸುದ್ದಿ  /  Cricket  /  Asian Games Cricket Quarter Final Team India Beat Nepal And Reached Semi Finals Cricket News In Kannada Rmy

India vs Nepal: ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್; ನೇಪಾಳ ಮಣಿಸಿ ಸೆಮಿ ಫೈನಲ್‌ ತಲುಪಿದ ಟೀಂ ಇಂಡಿಯಾ

ಏಷ್ಯನೇ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳವನ್ನು ಸೋಲಿಸಿದ ಟೀಂ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿದೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ. ಜೈಸ್ವಾಲ್ ಅಕರ್ಷಕ ಶತಕ ಸಿಡಿಸಿದ್ದಾರೆ.
ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ. ಜೈಸ್ವಾಲ್ ಅಕರ್ಷಕ ಶತಕ ಸಿಡಿಸಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ (Asian Games 2023) ಕ್ರಿಕೆಟ್ ಕ್ವಾರ್ಟರ್‌ ಫೈನಲ್‌ನಲ್ಲಿ ನೇಪಾಳ (Nepal) ತಂಡವನ್ನು 23 ರನ್‌ಗಳಿಂದ ಮಣಿಸಿರುವ ಟೀಂ ಇಂಡಿಯಾ (Team India) ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

ಟ್ರೆಂಡಿಂಗ್​ ಸುದ್ದಿ

ಟೀಂ ಇಂಡಿಯಾ ನೀಡಿದ್ದ 203 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ನೇಪಾಳ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ವೇಗಿ ಅವೇಶ್ ಖಾನ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದರೆ ಅರ್ಷದೀಪ್ ಸಿಂಗ್ 2 ಹಾಗೂ ರವಿಶ್ರೀನಿವಾಸನ್ ಸಾಯಿ ಕಿಶೋರ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ದೊಡ್ಡ ಮೊತ್ತ ಪೇರಿಸಲು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ನೆರವಾದರು. ಆರಂಭದಿಂದಲೇ ಅಬ್ಬರಿಸಿದ ಜೈಸ್ವಾನ್ 48 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದರು. ಇವರ ದಾಖಲೆಯ ಶತಕದಲ್ಲಿ 8 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್‌ಗಳು ಸೇರಿದ್ದವು. ಆ ಮೂಲಕ ಯಶಸ್ವಿ ಜೈಸ್ವಾಲ್ ಏಷ್ಯ್ ಗೇಮ್ಸ್‌ನಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟರ್ ಎಂಬ ದಾಖಲೆ ಬರೆದಿದರು.

ಗಾಯಕ್ವಾಡ್, ತಿಲಕ್ ವರ್ಮಾ, ಜಿತೇಶ್ ಶರ್ಮಾ ಬ್ಯಾಟಿಂಗ್‌ನಲ್ಲಿ ವಿಫಲ

ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರುತುರಾಜ್ ಗಾಯಕ್ವಾಡ್ ನಿರಾಸೆ ಮೂಡಿಸಿದರು. ಗಾಯಕ್ವಾಡ್ 23 ಎಸೆತಗಳನ್ನು ಎದುರಿಸಿ 4 ಬೌಂಡರಿ ಸೇರಿ 25 ರನ್ ಗಳಿಸಿ ದೀಪೇಂದ್ರ ಸಿಂಗ್ ಬೌಲಿಂಗ್‌ನಲ್ಲಿ ರೋಹಿತ್ ಪೌಡೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ತಿಲಕ್ ವರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹೈದರಾಬಾದ್‌ನ ತಿಲಕ್ 10 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಸೋಪಾಲ್ ಕಾಮಿ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಬ್ಯಾಟಿಂಗ್‌ನಲ್ಲಿ ವಿಫಲವಾದರು.

ವಿಕೆಟ್ ಕೀಪರ್ ಜಿತೇಶ್ ಶರ್ಮಾ ಬಂದಷ್ಟೇ ವೇಗವಾಗಿ ಪೆಲಿವಿಯನ್ ಸೇರಿಕೊಂಡರು. ಶರ್ಮಾ ನಾಲ್ಕು ಎಸೆತಗಳನ್ನು ಎದುರಿಸಿ 1 ಬೌಂಡರಿ ಸೇರಿ 5 ರನ್ ಗಳಿಸಿ ಸಂದೀಪ್ ಲಮಿಚಾನೆ ಬೌಲಿಂಗ್‌ನಲ್ಲಿ ಔಟ್ ಆದರು.

ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್

ಕೊನೆಯಲ್ಲಿ ಶಿವಂ ದುಬೆ 19 ಎಸೆತಗಳಿಂದ 2 ಬೌಂಡರಿ 1 ಸಿಕ್ಸರ್ ಸೇರಿ 25 ರನ್ ಗಳಿಸಿದರೆ ಮತ್ತು ರಿಂಕು ಸಿಂಗ್ 15 ಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್‌ಗಳಿಂದ 37 ರನ್ ಬಾರಿಸಿದರು. ಆ ಮೂಲಕ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ನೇಪಾಳದ ಪರವಾಗಿ ದೀಪೇಂದ್ರ ಸಿಂಗ್ ಎರಡು ವಿಕೆಟ್ ಪಡೆದರೆ ಸೋಂಪಾಲ್ ಕಾಮಿ ಹಾಗೂ ಸಂದೀಪ್ ಲಮಿಚಾನೆ ತಲಾ 1 ವಿಕೆಟ್ ಗಳಿಸಿದರು. ಉತ್ತಮ ಶ್ರೇಯಾಂಕದ ಆಧಾರದ ಮೇಲೆ ಟೀಂ ಇಂಡಿಯಾ ಏಷ್ಯನ್ ಗೇಮ್ಸ್‌ನಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಬಂದಿದೆ.

ಭಾರತದ ಆಡುವ 11ರ ಬಳಗ

ರುತುರಾಜ್ ಗಾಯಕ್ವಾಡ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್,

ನೇಪಾಳ ಆಡುವ 11ರ ಬಳಗ

ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಕ್ (ವಿಕೆಟ್ ಕೀಪರ್), ಸಂದೀಪ್ ಜೋರಾ, ಗುಲ್ಸನ್ ಝಾ, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸೋಂಪಾಲ್ ಕಾಮಿ, ಕರಣ್ ಕೆಸಿ, ಭಿನಾಶ್ ಬೋಹರಾ, ಸಂದೀಪ್ ಲಮಿಚಾನೆ

ಕ್ರಿಕೆಟ್ ಪ್ರೇಮಿಗಳೇ Cricket News, Live Score ಮತ್ತು Kannada News ಮತ್ತು ಸಂಬಂಧಿಸಿದ ಬರಹಗಳನ್ನು ಓದಿ.