Yashasvi Jaiswal: ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್; ನೇಪಾಳ ವಿರುದ್ಧ ಶತಕ ಸಿಡಿಸಿ ಶುಭ್ಮನ್ ಗಿಲ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್
ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿರುವ ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಶುಭ್ಮನ್ ಗಿಲ್ ಅವರ ಹೆಸರನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್‌ನಲ್ಲಿ (Asian Games T20 Cricket) ರುತುರಾಜ್ ಗಾಯಕ್ವಾಡ್ ನೇತೃತ್ವದ ಟೀಂ ಇಂಡಿಯಾ (Team India) ಗೆಲುವುನೊಂದಿಗೆ ಶುಭಾರಂಭ ಮಾಡಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ನೇಪಾಳ ತಂಡವನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದೆ.
ಟ್ರೆಂಡಿಂಗ್ ಸುದ್ದಿ
ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಮಾಡಿದ ಆರಂಭಿಕ ಯಶಸ್ವಿ ಜೈಸ್ವಾಲ್ ಶತಕ ಬಾರಿಸಿ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೆ, ಟೀಂ ಇಂಡಿಯಾದ ಅಗ್ರ ಶ್ರೇಯಾಂಕದ ಬ್ಯಾಟರ್ ಶುಭ್ಮನ್ ಗಿಲ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
ರೈನಾ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದ ಗಿಲ್; ಇದೀಗ ಜೈಸ್ವಾಲ್ ಪಾಲು
ಟಿ20 ಕ್ರಿಕೆಟ್ ಇತಿಹಾಸದಲ್ಲಿ ರೈನಾ ಹೆಸರಿನಲ್ಲಿದ್ದ ದಾಖಲೆಯನ್ನು ಶುಭ್ಮನ್ ಗಿಲ್ ಮುರಿದಿದ್ದರು. ಇದೀಗ ಗಿಲ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಜೈಸ್ವಾಲ್ ಬ್ರೇಕ್ ಮಾಡಿದ್ದಾರೆ.
2010ರಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಸುರೇಶ್ ರೈನಾ 23 ವರ್ಷ 156 ದಿನಗಳ ವಯಸ್ಸಿನವರಾಗಿದ್ದಾಗ ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದರು. ಶುಭ್ಮನ್ ಗಿಲ್ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 23 ವರ್ಷ 146 ದಿನಗಳ ವಯಸ್ಸಿನಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದರು. ಇದೀಗ ಶುಭ್ಮನ್ ಗಿಲ್ ಏಷ್ಯನ್ ಗೇಮ್ಸ್ ಟಿ20 ಕ್ರಿಕೆಟ್‌ನಲ್ಲಿ ನೇಪಾಳ ವಿರುದ್ಧ 21 ವರ್ಷ 279 ವಯಸ್ಸಿಗೆ ಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್‌ರಿಂದಲೂ ಸಾಧನೆ
ಶುಭ್ಮನ್ ಗಿಲ್ ಅವರು ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಅಜೇಯರಾಗಿ 126 ರನ್ ಬಾರಿಸಿದ ಸಾಧನೆ ಮಾಡಿದ್ದರು. ಇದೀಗ 21 ವರ್ಷದ ಎಡಗೈ ಬ್ಯಾಟರ್ ಜೈಸ್ವಾಲ್ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಈ ಸಾಧನೆ ಮಾಡಿದ ಇತರೆ ಭಾರತೀಯ ಬ್ಯಾಟರ್‌ಗಳಾಗಿದ್ದಾರೆ.
ಇದೇ ವರ್ಷದಲ್ಲಿ ಡೊಮಿನಿಕಾದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೈಸ್ವಾಲ್ ದಾಖಲೆಯ 171 ರನ್ ಬಾರಿಸಿದ್ದರು. ಸದ್ಯ ಜೈಸ್ವಾಲ್ ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಶಕತ ಬಾರಿಸಿದ ಮೊದಲ ಆಟಗಾರ ಎನಿಸಿದ್ದಾರೆ. ಅದು ಕೂಡ ಕೇವಲ 48 ಎಸೆತಗಳಲ್ಲಿ 100 ರನ್ ಪೂರೈಸಿದರರು. ಇದರಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸೇರಿದ್ದವು.
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್‌ನಲ್ಲಿ (Asian Games Cricket 2023) ಟೀಂ ಇಂಡಿಯಾದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202ರನ್ ಗಳಿಸಿತು. ಆರಂಭಿಕ ಬ್ಯಾಟರ್ ಜೈಸ್ವಾಲ್ 8 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್‌ಗಳೊಂದಿಗೆ 100 ರನ್ ಬಾರಿಸಿದರು.
ಕೊನೆಯಲ್ಲಿ ಅಬ್ಬರಿಸಿದ ರಿಂಕು ಸಿಂಗ್
ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರುತುರಾಜ್ ಗಾಯಕ್ವಾಡ್ ನಿರಾಸೆ ಮೂಡಿಸಿದರು. ಗಾಯಕ್ವಾಡ್ 23 ಎಸೆತಗಳನ್ನು ಎದುರಿಸಿ 4 ಬೌಂಡರಿ ಸೇರಿ 25 ರನ್ ಗಳಿಸಿ ದೀಪೇಂದ್ರ ಸಿಂಗ್ ಬೌಲಿಂಗ್‌ನಲ್ಲಿ ರೋಹಿತ್ ಪೌಡೆಲ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ತಿಲಕ್ ವರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹೈದರಾಬಾದ್‌ನ ತಿಲಕ್ 10 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಸೋಪಾಲ್ ಕಾಮಿ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ಬ್ಯಾಟಿಂಗ್‌ನಲ್ಲಿ ವಿಫಲವಾದರು.
ವಿಕೆಟ್ ಕೀಪರ್ ಜಿತೇಶ್ ಶರ್ಮಾ ಬಂದಷ್ಟೇ ವೇಗವಾಗಿ ಪೆಲಿವಿಯನ್ ಸೇರಿಕೊಂಡರು. ಶರ್ಮಾ ನಾಲ್ಕು ಎಸೆತಗಳನ್ನು ಎದುರಿಸಿ 1 ಬೌಂಡರಿ ಸೇರಿ 5 ರನ್ ಗಳಿಸಿ ಸಂದೀಪ್ ಲಮಿಚಾನೆ ಬೌಲಿಂಗ್‌ನಲ್ಲಿ ಔಟ್ ಆದರು.
ಕೊನೆಯಲ್ಲಿ ಶಿವಂ ದುಬೆ 19 ಎಸೆತಗಳಿಂದ 2 ಬೌಂಡರಿ 1 ಸಿಕ್ಸರ್ ಸೇರಿ 25 ರನ್ ಗಳಿಸಿದರೆ ಮತ್ತು ರಿಂಕು ಸಿಂಗ್ 15 ಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್‌ಗಳಿಂದ 37 ರನ್ ಬಾರಿಸಿದರು. ಆ ಮೂಲಕ ತಂಡದ ಮೊತ್ತ 200ರ ಗಡಿ ದಾಟುವಂತೆ ಮಾಡಿದರು. ನೇಪಾಳದ ಪರವಾಗಿ ದೀಪೇಂದ್ರ ಸಿಂಗ್ ಎರಡು ವಿಕೆಟ್ ಪಡೆದರೆ ಸೋಂಪಾಲ್ ಕಾಮಿ ಹಾಗೂ ಸಂದೀಪ್ ಲಮಿಚಾನೆ ತಲಾ 1 ವಿಕೆಟ್ ಗಳಿಸಿದರು. ಉತ್ತಮ ಶ್ರೇಯಾಂಕದ ಆಧಾರದ ಮೇಲೆ ಟೀಂ ಇಂಡಿಯಾ ಏಷ್ಯನ್ ಗೇಮ್ಸ್‌ನಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಬಂದಿದೆ.
ಸಂಬಂಧಿತ ಲೇಖನ