ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ; ಕನ್ನಡಿಗನ ಮನೆಗೆ ಮಹಾಲಕ್ಷ್ಮಿ ಆಗಮನ
ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಸೋಮವಾರ (ಮಾರ್ಚ್ 24) ಇನ್ಸ್ಟಾಗ್ರಾಂನಲ್ಲಿ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಭಾರತದ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿಗಳು ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ತಮ್ಮ ಮನೆಗೆ ಮಹಾಲಕ್ಷ್ಮಿ ಆಗಮಿಸಿರುವ ಕುರಿತು ಸೆಲೆಬ್ರಿಟಿ ಕಪಲ್ಸ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಆ ಮೂಲಕ ಅಭಿಮಾನಿಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಮಾರ್ಚ್ 24ರ ಸೋಮವಾರ ದಂಪತಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಜಂಟಿ ಪೋಸ್ಟ್ ಅನ್ನು ಹಂಚಿಕೊಂಡು ಸುದ್ದಿಯನ್ನು ಪ್ರಕಟಿಸಿದರು. ಈ ಸುದ್ದಿಯನ್ನು ಹಂಚಿಕೊಂಡ ದಂಪತಿಗಳು ಎರಡು ಹಂಸಗಳ ವರ್ಣಚಿತ್ರವನ್ನು ಪೋಸ್ಟ್ ಮಾಡಿ, "ಹೆಣ್ಣು ಮಗುವಿನ ಆಶೀರ್ವಾದ ಪಡೆದಿದ್ದೇವೆ ಎಂಬ ಸಂದೇಶವನ್ನು ಬರೆದಿದ್ದಾರೆ.
ಹೆಸರು ಇನ್ನೂ ಬಹಿರಂಗಪಡಿಸಿಲ್ಲ
ರಾಹುಲ್ ಮತ್ತು ಅಥಿಯಾ ತಮ್ಮ ಮಗಳು ಜನಿಸಿದ ಸಿಹಿ ಸುದ್ದಿ ಹಂಚಿಕೊಂಡಿದ್ದರೂ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು, ಸೆಲೆಬ್ರಿಟಿಗಳು, ಮಾಜಿ ಕ್ರಿಕೆಟಿಗರು ಇಬ್ಬರನ್ನೂ ಅಭಿನಂದಿಸುತ್ತಿದ್ದಾರೆ. ಸೂರ್ಯಕುಮಾರ್, ಶಿಖರ್ ಧವನ್, ಮಯಾಂಕ್ ಅಗರ್ವಾಲ್, ನಟಿ ಮೃಣಾಲ್ ಠಾಕೂರ್, ಆರ್ಸಿಬಿ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳು ಅಭಿನಂದನೆ ಸಲ್ಲಿಸಿವೆ.
ಇದೇ ಕಾರಣಕ್ಕೆ ಡೆಲ್ಲಿ ತೊರೆದ ರಾಹುಲ್
ಐಪಿಎಲ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಬೇಕಿದ್ದ ಕೆಎಲ್ ರಾಹುಲ್ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾದರು. ಪಂದ್ಯಕ್ಕೂ ಮುನ್ನಾ ತಂಡವನ್ನು ಕೂಡಿಕೊಂಡಿದ್ದರು. ಆದರೆ ಹೆರಿಗೆಯ ಸಂದರ್ಭದಲ್ಲಿ ತಮ್ಮ ಪತ್ನಿಯ ಜೊತೆಗಿದ್ದು, ಅತ್ಯುತ್ತಮ ಕ್ಷಣಗಳನ್ನು ಎಂಜಾಯ್ ಮಾಡುವ ನಿಟ್ಟಿನಲ್ಲಿ ಕೊನೆಯ ಕ್ಷಣದಲ್ಲಿ ತಂಡದ ಶಿಬಿರವನ್ನು ತೊರೆದಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿಯ ಅನುಮತಿಯ ಮೇರೆಗೆ ಮನೆಗೆ ಹೋಗಿದ್ದ ಕೆಎಲ್ ರಾಹುಲ್ ಶೀಘ್ರವೇ ತಂಡಕ್ಕೆ ಮರಳಬಹುದು. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಪಂದ್ಯವನ್ನು ಮಾರ್ಚ್ 30ರಂದು ಆಡಲಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಈ ಪಂದ್ಯ ಆಡಲಿದ್ದು, ಈ ಪಂದ್ಯಕ್ಕೆ ತಂಡವನ್ನು ಕೂಡಿಕೊಳ್ಳಬಹುದು. ಇದು ಸಾಧ್ಯವಾಗದಿದ್ದರೆ ಏಪ್ರಿಲ್ 5ರಂದು ತಂಡಕ್ಕೆ ಮರಳಬಹುದು.
14 ಕೋಟಿಗೆ ಡೆಲ್ಲಿ ಸೇರಿರುವ ರಾಹುಲ್
2024ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದ ರಾಹುಲ್, ಮೆಗಾ ಹರಾಜಿಗೂ ಮುನ್ನ ಫ್ರಾಂಚೈಸಿ ತೊರೆದರು. ಬಳಿಕ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆ ಹೊಂದಿದ್ದ ಕನ್ನಡಿಗ, 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಆದರೆ ಅವರಿಗೆ ತಂಡದಲ್ಲಿ ನಾಯಕತ್ವ ಮತ್ತು ಉಪನಾಯಕತ್ವ ಎರಡೂ ಸಿಗಲಿಲ್ಲ. ಇದರೊಂದಿಗೆ ಅವರು ತೀವ್ರ ನಿರಾಸೆ ಅನುಭವಿಸಿದ್ದಾರೆ.
ಕೆಎಲ್ ರಾಹುಲ್, ಅಥಿಯಾ ಮದುವೆ
2023ರ ಜನವರಿ 23ರಂದು ಅಥಿಯಾ ಅವರ ತಂದೆ, ಹಿರಿಯ ನಟ ಸುನೀಲ್ ಶೆಟ್ಟಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರು ವಿವಾಹವಾಗಿದ್ದರು. ಈ ಮದುವೆಗೆ ಕೇವಲ ಆಪ್ತರಷ್ಟೇ ಆಗಮಿಸಿದ್ದರು.
