ಆರ್‌ಸಿಬಿ ಸೇರಿಕೊಂಡ ಕ್ಯಾಮರೂನ್‌ ಗ್ರೀನ್;‌‌ ಚಿನ್ನಸ್ವಾಮಿಯಲ್ಲಿ ಆಡಲು ಕಾತರನಾಗಿದ್ದೇನೆ ಎಂದ ಆಲ್‌ರೌಂಡರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಸೇರಿಕೊಂಡ ಕ್ಯಾಮರೂನ್‌ ಗ್ರೀನ್;‌‌ ಚಿನ್ನಸ್ವಾಮಿಯಲ್ಲಿ ಆಡಲು ಕಾತರನಾಗಿದ್ದೇನೆ ಎಂದ ಆಲ್‌ರೌಂಡರ್

ಆರ್‌ಸಿಬಿ ಸೇರಿಕೊಂಡ ಕ್ಯಾಮರೂನ್‌ ಗ್ರೀನ್;‌‌ ಚಿನ್ನಸ್ವಾಮಿಯಲ್ಲಿ ಆಡಲು ಕಾತರನಾಗಿದ್ದೇನೆ ಎಂದ ಆಲ್‌ರೌಂಡರ್

Cameron Green joins RCB: ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತಂಡಕ್ಕೆ ಕರೆಸಿಕೊಂಡಿದೆ.

ಕ್ಯಾಮರೂನ್‌ ಗ್ರೀನ್‌
ಕ್ಯಾಮರೂನ್‌ ಗ್ರೀನ್‌

ಐಪಿಎಲ್‌ 2024ರ (IPL 2024) ಮಿನಿ ಹರಾಜಿಗೂ ಮುನ್ನ ಆಟಗಾರರ ರಿಟೈನ್‌ ಮತ್ತು ರಿಲೀಸ್‌ ಪಟ್ಟಿ ಹೊರಬಿದ್ದ ಬೆನ್ನಲ್ಲೇ, ವಿವಿಧ ಫ್ರಾಂಚೈಸಿಗಳು ಅಚ್ಚರಿಯ ಮೇಲೆ ಅಚ್ಚರಿಯ ಸುದ್ದಿ ಕೊಡುತ್ತಿವೆ. ಅತ್ತ, ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಟ್ರೇಡ್‌ ಆದ ಕುರಿತು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಮುಂಬೈ ತಂಡದ ದುಬಾರಿ ಖರೀದಿಯಾಗಿದ್ದ ಆಸೀಸ್‌ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌, ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಈ ಕುರಿತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಖುದ್ದು ಹೇಳಿಕೊಂಡಿದೆ.

ಹಾರ್ದಿಕ್ ಪಾಂಡ್ಯರನ್ನು ಮರಳಿ ತಂಡಕ್ಕೆ ಕರೆಸಿಕೊಂಡ ಮುಂಬೈ ಇಂಡಿಯನ್ಸ್, ಗ್ರೀನ್ ಅವರನ್ನು ಆರ್‌​ಸಿಬಿಗೆ ಬಿಟ್ಟುಕೊಟ್ಟಿದೆ. ಫ್ರಾಂಚೈಸಿಗಳ ನಡುವೆ ಟ್ರೇಡಿಂಗ್‌ ನಡೆದಿದ್ದು ಆಟಗಾರರ ವರ್ಗಾವಣೆ ನಡೆದಿದೆ.

ಇದನ್ನೂ ಓದಿ | ಮೂವರು ಬಲಿಷ್ಠ ಬೌಲರ್‌ಗಳಿಗೆ ಗೇಟ್‌ಪಾಸ್;‌ ಆರ್‌ಸಿಬಿ ಕೈಬಿಟ್ಟ, ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ

ಅತ್ತ ಪಾಂಡ್ಯ ಅವರನ್ನು ಮುಂಬೈ ತಂಡಕ್ಕೆ ಮತ್ತೆ ಕರೆಸಿಕೊಳ್ಳಲು ಗುಜರಾತ್‌ ಹಾಗೂ ಮುಂಬೈ ಫ್ರಾಂಚೈಸಿಗಳ ನಡುವೆ 15 ಕೋಟಿ ರೂಪಾಯಿ ನಗದು ಒಪ್ಪಂದ ರೂಪಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಟ್ರೇಡಿಂಗ್‌ ಕುದುರಿಸಲು ಮುಂಬೈ ತಂಡವು ಮತ್ತೊಂದು ಮಹತ್ವದ ಬದಲಾವಣೆ ಮಾಡಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ (17.5 ಕೋಟಿ ರೂಪಾಯಿ) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಿಟ್ಟುಕೊಟ್ಟಿದೆ. ಆರ್‌ಸಿಬಿ ಫ್ರಾಂಚೈಸಿಯು ಗ್ರೀನ್‌ ಅವರನ್ನು ತಂಡಕ್ಕೆ ಕರೆಸಿಕೊಂಡಿರುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

ಆರ್‌ಸಿಬಿ ಬಳಗ ಸೇರಿಕೊಂಡ ಕುರಿತಾಗಿ ಮೊದಲ ಪ್ರತಿಕ್ರಿಯೆ ನೀಡಿದ ಗ್ರೀನ್‌, ಆರ್‌ಸಿಬಿ ಅಭಿಮಾನಿಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನೋಡಲು ನನ್ನಿಂದ ಹೆಚ್ಚು ಕಾಯಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಟ್ರೇಡಿಂಗ್‌ ವಿಂಡೋ ಡಿಸೆಂಬರ್ 12ಕ್ಕೆ ಕೊನೆಯಾಗಲಿದೆ. ಈ ಅವಧಿಯಲ್ಲಿ ಐಪಿಎಲ್ ಫ್ರಾಂಚೈಸಿಗಳ ನಡುವಿನ ಎಲ್ಲಾ ವಹಿವಾಟುಗಳು ಮಾನ್ಯವಾಗಿರುತ್ತವೆ. ಹೀಗಾಗಿ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕವೂ, ಪಾಂಡ್ಯ ಅವರು ಗುಜರಾತ್‌ ತಂಡದಿಂದ ಮುಂಬೈಗೆ ಯಶಸ್ವಿಯಾಗಿ ಟ್ರೇಡಿಂಗ್‌ ಆಗಿದ್ದಾರೆ. ಅತ್ತ ಗ್ರೀನ್‌ ಮುಂಬೈ ತಂಡದಿಂದ ಬೆಂಗಳೂರಿಗೆ ಬಂದಿದ್ದಾರೆ.

ಆರ್‌ಸಿಬಿಯು ಆಟಗಾರರ ಬಿಡುಗಡೆ ಮಾಡುವಾಗ ಪ್ರಬಲ ಆಲ್‌ರೌಂಡರ್‌ ಆದ ವನಿಂದು ಹಸರಂಗ, ಹರ್ಷಲ್ ಪಟೇಲ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನು ಕೂಡಾ ರಿಲೀಸ್‌ ಮಾಡಿದೆ. ಹೀಗಾಗಿ ಐಪಿಎಲ್ 2024ರ ಹರಾಜಿಗೆ 40.75 ಕೋಟಿ ರೂಪಾಯಿ ಪರ್ಸ್‌ ಮೊತ್ತವನ್ನು ಹೊಂದಿದೆ. ಆದರೆ, ಇದೀಗ ಗ್ರೀನ್‌ ಅವರ ಖರೀದಿಗಾಗಿ ಈ ಪರ್ಸ್‌ನಿಂದ 17.50 ಕೋಟಿ ರೂಪಾಯಿ ಕೊಡಬೇಕಾಗಿದೆ. ಹೀಗಾಗಿ ತಂಡದ ಬಳಿ 23.25 ಕೋಟಿ ರೂಪಾಯಿ ಮಾತ್ರವೇ ಉಳಿದಿದೆ.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗ್ರೀನ್ ಮುಂವೈ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆಡಿದ 16 ಪಂದ್ಯಗಳಲ್ಲಿ 50.22 ಸರಾಸರಿಯಲ್ಲಿ 452 ರನ್ ಗಳಿಸಿದ್ದರು. 160.28ರ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳುವುದು ಮಾತ್ರವಲ್ಲದೆ ಒಂದು ಶತಕವನ್ನೂ ಸಿಡಿಸಿದ್ದರು. ಅಲ್ಲದೆ ಆರು ವಿಕೆಟ್‌ಗಳನ್ನು ಕಬಳಿಸಿದ್ದರು.‌

ಐಪಿಎಲ್‌ 2024ರ ಮಿನಿ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಮಿನಿ ಹರಾಜಿನಲ್ಲಿ ಖಾಲಿಯಿರುವ ಒಟ್ಟು 77 ಆಟಗಾರರ ಸ್ಥಾನಗಳಿಗೆ ಫ್ರಾಂಚೈಸಿಗಳು ಬಿಡ್‌ ನಡೆಸಲಿವೆ. ಅವುಗಳಲ್ಲಿ 30 ವಿದೇಶಿ ಆಟಗಾರರಿಗೂ ಅವಕಾಶವಿದೆ.

Whats_app_banner