ಐಸಿಸಿ ಚಾಂಪಿಯನ್ಸ್ ಟ್ರೋಫಿ: ನ್ಯೂಜಿಲೆಂಡ್, ಬಾಂಗ್ಲಾದೇಶ ಬಳಿಕ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ
Champions Trophy 2025: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ನ್ಯೂಜಿಲೆಂಡ್, ಬಾಂಗ್ಲಾದೇಶ ಬಳಿಕ ಆಸ್ಟ್ರೇಲಿಯಾ ತನ್ನ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದೆ.

ನವದೆಹಲಿ: ಫೆಬ್ರವರಿ 19ರಿಂದ ಪ್ರಾರಂಭವಾಗುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 15 ಸದಸ್ಯರ ಬಲಿಷ್ಠ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಜನವರಿ 29ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ತಪ್ಪಿಸಿಕೊಂಡ ಪ್ಯಾಟ್ ಕಮಿನ್ಸ್ ಮಹತ್ವದ ಟೂರ್ನಿಗೆ ಮರಳಿದ್ದು, ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತೀಚೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಗಾಯಗೊಂಡ ವೇಗಿ ಜೋಶ್ ಹೇಜಲ್ವುಡ್ ಸಹ ಪ್ರಕಟಿಸಲಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ನಾಯಕ ಕಮಿನ್ಸ್ ತಮ್ಮ 2ನೇ ಮಗುವಿನ ಜನನದ ಕಾರಣ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ. ಅಲ್ಲದೆ, ಅವರು ಮೊಣಕಾಲು ಗಾಯದಿಂದಲೂ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಅದೇ ವರ್ಷ ಏಕದಿನ ವಿಶ್ವಕಪ್ ಗೆದ್ದಿದ್ದ ಪ್ಯಾಟ್ ತನ್ನ ನಾಯಕತ್ವದಲ್ಲಿ ಮತ್ತೊಂದು ಟ್ರೋಫಿ ಗೆಲ್ಲಲು ಎದುರು ನೋಡುತ್ತಿದ್ದಾರೆ. ಬಿಜಿಟಿ ಸರಣಿಯಲ್ಲಿ 2 ಪಂದ್ಯವಾಡಿದ್ದ ಜೋಶ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ಜೇಕ್ ಫ್ರೇಸರ್-ಮೆಕ್ಗುರ್ಕ್ಗಿಲ್ಲ ಅವಕಾಶ
ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಆಡುವ ಅವಕಾಶ ಪಡೆದಿದ್ದ ಜೇಕ್ ಫ್ರೇಸರ್-ಮೆಕ್ಗುರ್ಕ್ ತಮ್ಮ ಕಳಪೆ ಫಾರ್ಮ್ಗೆ ಬೆಲೆ ತೆತ್ತಿದ್ದು, ಐಸಿಸಿ ಟೂರ್ನಿಗೆ ಅವಕಾಶ ಪಡೆಯಲು ವಿಫಲರಾಗಿದ್ದಾರೆ. ತಂಡದಲ್ಲಿ ಅನುಭವಿಗಳೇ ತುಂಬಿರುವುದು ಮತ್ತೊಂದು ವಿಶೇಷ. ತಂಡ ಪ್ರಕಟಿಸಿದ ನಂತರ ಮಾತನಾಡಿದ ಚೀಫ್ ಸೆಲೆಕ್ಟರ್ ಜಾರ್ಜ್ ಬೈಲಿ, ‘ಇದು ಸಮತೋಲಿತ ಮತ್ತು ಅನುಭವಿ ತಂಡವಾಗಿದೆ. ಪಾಕ್ ಪರಿಸ್ಥಿತಿಗಳನ್ನು ಅವಲಂಬಿಸಿ ತಂಡವನ್ನು ಆಯ್ಕೆ ಮಾಡಲಾಗಿದೆ’ ಎಂದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಫೆಬ್ರವರಿ 19 ರಿಂದ ಮಾರ್ಚ್ 9ರ ತನಕ 8 ದೇಶಗಳ ನಡುವೆ ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಆ್ಯರೋನ್ ಹಾರ್ಡಿ, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್. ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.
ಚಾಂಪಿಯನ್ಸ್ ಟ್ರೋಫಿಗೆ ಬಾಂಗ್ಲಾದೇಶ ತಂಡ
ನಜ್ಮುಲ್ ಹೊಸೈನ್ (ನಾಯಕ), ತಂಜಿದ್ ಹಸನ್ ತಮೀಮ್, ಸೌಮ್ಯ ಸರ್ಕಾರ್, ಪರ್ವೇಜ್ ಹೊಸೈನ್ ಎಮನ್, ಮುಷ್ಫಿಕರ್ ರಹೀಮ್, ತೌಹಿದ್ ಹೃದಯ್, ಮಹ್ಮದುಲ್ಲಾ, ಮೆಹಿದಿ ಹಸನ್, ಜಾಕರ್ ಅಲಿ ಅನಿಕ್, ರಿಷದ್ ಹೊಸೈನ್, ನಸುಮ್ ಅಹ್ಮದ್, ತಂಜಿಮ್ ಹಸನ್ ಸಕಿಬ್, ನಹಿದ್ ರಾಣಾ, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್.
ಚಾಂಪಿಯನ್ಸ್ ಟ್ರೋಫಿಗೆ ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್, ಡ್ಯಾರಿಲ್ ಮಿಚೆಲ್, ವಿಲ್ ಒ'ರೂರ್ಕ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಬೆನ್ ಸಿಯರ್ಸ್, ನಾಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್.
ಚಾಂಪಿಯನ್ಸ್ ಟ್ರೋಫಿಗೆ ಅಫ್ಘಾನಿಸ್ತಾನ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಷಾ (ಉಪನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ರಶೀದ್ ಖಾನ್, ಎಎಮ್ ಗಜಾನ್‌ಫರ್, ನೊರಾಲ್ ಎ ಹಜಾನ್‌ಫರ್, ಫಾರೂಕಿ, ನವೀದ್ ಜದ್ರಾನ್ ಮತ್ತು ಫರೀದ್ ಅಹ್ಮದ್ ಮಲಿಕ್.
ಮೀಸಲು ಆಟಗಾರರು: ದರ್ವಿಶ್ ರಸೂಲಿ, ನಂಗ್ಯಾಲ್ ಖರೋಟಿ, ಬಿಲಾಲ್ ಸಾಮಿ.
