ಟ್ರಾವಿಸ್ ಹೆಡ್ 'ಇನ್ ದಿ ಹೋಲ್' ಸಂಭ್ರಮಾಚರಣೆ ಕುರಿತು ಪ್ಯಾಟ್ ಕಮಿನ್ಸ್ ಸ್ಪಷ್ಟನೆ; ಆಸೀಸ್‌ ನಾಯಕ ಏನಂದ್ರು?
ಕನ್ನಡ ಸುದ್ದಿ  /  ಕ್ರಿಕೆಟ್  /  ಟ್ರಾವಿಸ್ ಹೆಡ್ 'ಇನ್ ದಿ ಹೋಲ್' ಸಂಭ್ರಮಾಚರಣೆ ಕುರಿತು ಪ್ಯಾಟ್ ಕಮಿನ್ಸ್ ಸ್ಪಷ್ಟನೆ; ಆಸೀಸ್‌ ನಾಯಕ ಏನಂದ್ರು?

ಟ್ರಾವಿಸ್ ಹೆಡ್ 'ಇನ್ ದಿ ಹೋಲ್' ಸಂಭ್ರಮಾಚರಣೆ ಕುರಿತು ಪ್ಯಾಟ್ ಕಮಿನ್ಸ್ ಸ್ಪಷ್ಟನೆ; ಆಸೀಸ್‌ ನಾಯಕ ಏನಂದ್ರು?

ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ವಿಕೆಟ್ ಪಡೆದ ಟ್ರಾವಿಸ್ ಹೆಡ್, ವಿಲಕ್ಷಣ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಆಸ್ಟ್ರೇಲಿಯಾ ಆಟಗಾರನ ವರ್ತನೆ ನೋಡಿ ವೀಕ್ಷಕರಿಗೆ ಒಂದು ಕ್ಷಣಕ್ಕೆ ಮುಜುಗರವಾಗುವಂತಿತ್ತು. ಇದರ ಹಿಂದಿನ ಅರ್ಥದ ಬಗ್ಗೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ವಿವರಿಸಿದ್ದಾರೆ.

ಟ್ರಾವಿಸ್ ಹೆಡ್ 'ಇನ್ ದಿ ಹೋಲ್' ಸಂಭ್ರಮಾಚರಣೆ ಕುರಿತು ಪ್ಯಾಟ್ ಕಮಿನ್ಸ್ ಸ್ಪಷ್ಟನೆ
ಟ್ರಾವಿಸ್ ಹೆಡ್ 'ಇನ್ ದಿ ಹೋಲ್' ಸಂಭ್ರಮಾಚರಣೆ ಕುರಿತು ಪ್ಯಾಟ್ ಕಮಿನ್ಸ್ ಸ್ಪಷ್ಟನೆ

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಗೆದ್ದ ಆಸ್ಟ್ರೇಲಿಯಾ ತಂಡ, 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಬಾಕ್ಸಿಂಗ್‌ ಡೇ ಟೆಸ್ಟ್‌ನ ಅಂತಿಮ ದಿನದಾಟದಲ್ಲಿ ಸ್ಪರ್ಧಾತ್ಮಕ ಗುರಿ ಬೆನ್ನಟ್ಟುವಲ್ಲಿ ಟೀಮ್‌ ಇಂಡಿಯಾ ವಿಫಲವಾಯಿತು. ಇದಕ್ಕೆ ಮುಖ್ಯ ಕಾರಣವಾಗಿದ್ದು ತಂಡದ ಬ್ಯಾಟಿಂಗ್‌ ವೈಫಲ್ಯ. ಎಂದಿನಂತೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿರಾಟ್ ಕೊಹ್ಲಿ, ಮತ್ತೆ ವಿಫಲರಾದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕ್ರೀಸ್‌ಕಚ್ಚಿ ಆಡುವ ಅವಕಾಶವನ್ನೂ ಮಿಸ್‌ ಮಾಡಿಕೊಂಡರು. ಟೀಮ್‌ ಇಂಡಿಯಾ ಪರ ಎರಡಂಕಿ ಮೊತ್ತ ದಾಟಿದ್ದು ಜೈಸ್ವಾಲ್‌ ಮತ್ತು ರಿಷಭ್ ಪಂತ್ (30) ಮಾತ್ರ. ಏಕಾಂಗಿ ಹೋರಾಟ ನಡೆಸಿದ ಜೈಸ್ವಾಲ್ ಔಟಾಗುವುದರೊಂದಿಗೆ ಭಾರತದ ಸೋಲು ಅಧಿಕೃತವಾಯ್ತು.

208 ಎಸೆತಗಳಲ್ಲಿ 84 ರನ್ ಗಳಿಸಿದ ಜೈಸ್ವಾಲ್‌, ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ವಿವಾದಾತ್ಮಕ ರೀತಿಯಲ್ಲಿ ವಿಕೆಟ್‌ ಒಪ್ಪಿಸಿದರು. 155 ರನ್‌ಗಳಿಗೆ ಆಲೌಟ್ ಆಗುವ ಮೂಲಕ, ಭಾರತ 184 ರನ್‌ಗಳ ಸೋಲನುಭವಿಸಿತು.

ಚಹಾ ವಿರಾಮದ ನಂತರ ಆಸೀಸ್‌ ನಾಯಕ ಕಮಿನ್ಸ್ ಚೆಂಡನ್ನು ಟ್ರಾವಿಸ್ ಹೆಡ್‌ಗೆ ನೀಡಿದರು. ಅವರು ಪಂದ್ಯದಲ್ಲಿ ದೊಡ್ಡ ತಿರುವು ತಂದರು. ಶಾರ್ಟ್ ಪಿಚ್ ಚೆಂಡನ್ನು ಎದುರಿಸಿದ ಪಂತ್ ಪುಲ್ ಶಾಟ್‌ ಹೊಡೆಯಲು ಮುಂದಾದರು. ಅದನ್ನು ಮಾರ್ಷ್ ಕ್ಯಾಚ್‌ ಹಿಡಿದರು. ಅಂತಿಮ ಸೆಷನ್‌ನಲ್ಲಿ ಕೇವಲ 34 ರನ್ ಒಳಗೆ ಭಾರತ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡು ಸಂಪೂರ್ಣ ಪತನವಾಯ್ತು. ಈ ನಡುವೆ ಟ್ರಾವಿಸ್‌ ಹೆಡ್ ವಿಚಿತ್ರ ಸಂಭ್ರಮಾಚರಣೆ ಪ್ರೇಕ್ಷಕರ ಗಮನವನ್ನು ಸೆಳೆಯಿತು. ಇದು ಹಲವರ ಅಪಾರ್ಥಕ್ಕೂ ಕಾರಣವಾಯ್ತು. ಏಕೆಂದರೆ, ಒಂದು ಕೈಯಲ್ಲಿ ರಂಧ್ರದ ಆಕಾರ ಮಾಡಿ, ಇನ್ನೊಂದು ಕೈಬೆರಳನ್ನು ಅದಕ್ಕೆ ತೂರಿಸುವಂತೆ ಸನ್ನೆ ಮಾಡಿದರು.

ಈ ಸನ್ನೆ ಏನೆಂಬುದು ಬಹುತೇಕರಿಗೆ ತಿಳಿಯಲಿಲ್ಲ. ಈ ಕುರಿತು ಪಂದ್ಯದ ನಂತರ, ಆಸೀಸ್ ನಾಯಕ ಕಮಿನ್ಸ್ ಅವರನ್ನು ಕೇಳಲಾಯ್ತು. ಹೆಡ್ ಅವರ ವಿಲಕ್ಷಣ ಸಂಭ್ರಚರಣೆಯ ಹಿಂದೆ ಏನಾದರೂ ಅರ್ಥವಿದೆಯೇ ಎಂದು ಕೇಳಲಾಯಿತು. ಇದಕ್ಕೆ ಕಮಿನ್ಸ್ ಕಾರಣವನ್ನು ವಿವರಿಸಿದರು.

ಇದೊಂದು ಜೋಕ್‌ ಅಷ್ಟೇ

"ಓಹ್, ನಾನು ಅದನ್ನು ವಿವರಿಸುತ್ತೇನೆ. ಅವರ ಬೆರಳು ತುಂಬಾ ಬಿಸಿಯಾಗಿತ್ತು. ಹೀಗಾಗಿ ಅದನ್ನು ಐಸ್‌ ತುಂಬಿದ ಕಪ್‌ಗೆ ಅದ್ದಿದ್ದಾರೆ. ಅದರ ಅರ್ಥ ಅಷ್ಟೇ. ಇದು ನಮ್ಮಲ್ಲಿ ಸಾಮಾನ್ಯವಾಗಿ ನಡೆಯುತ್ತಿರುವ ಜೋಕ್. ಈ ಹಿಂದೆ ಗಬ್ಬಾದಲ್ಲಿ ಆಗಿರಲಿ ಅಥವಾ ಎಲ್ಲೇ ಆದರೂ, ಅವರು ವಿಕೆಟ್ ಪಡೆದ ನಂತರ ನೇರವಾಗಿ ಫ್ರಿಡ್ಜ್ ಬಳಿ ಹೋಗಿ, ಐಸ್ ತೆಗೆದು ಬೆರಳನ್ನು ಅದರೊಳಗೆ ಹಾಕಿ ಲಿಯಾನ್ ಮುಂದೆ ನಡೆಯುತ್ತಾರೆ. ಇದು ತುಂಬಾ ತಮಾಷೆಯ ವಿಷಯ, ಬೇರೆ ಏನೂ ಇಲ್ಲ," ಎಂದು ಕಮಿನ್ಸ್‌ ಹೇಳಿದ್ದಾರೆ.

ಮುಂದೆ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 3ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ. ಭಾರತವು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಒಂದು ವೇಳೆ ತಂಡ ಸಿಡ್ನಿ ಟೆಸ್ಟ್‌ ಗೆದ್ದರೆ, ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಉಳಿಸಿಕೊಳ್ಳಲಿದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. https://kannada.hindustantimes.com/astrology/yearly-horoscope

Whats_app_banner