ವಿಶ್ವಕಪ್ ಗೆದ್ದ 6 ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟ ಆಸೀಸ್; ಉಳಿದ 3 ಪಂದ್ಯಗಳಿಗೆ ನೂತನ ತಂಡ ಪ್ರಕಟ-australia name updated team for remaining three t20i against india after release 6 world cup winning squad members jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವಕಪ್ ಗೆದ್ದ 6 ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟ ಆಸೀಸ್; ಉಳಿದ 3 ಪಂದ್ಯಗಳಿಗೆ ನೂತನ ತಂಡ ಪ್ರಕಟ

ವಿಶ್ವಕಪ್ ಗೆದ್ದ 6 ಆಟಗಾರರನ್ನು ಟಿ20 ಸರಣಿಯಿಂದ ಹೊರಗಿಟ್ಟ ಆಸೀಸ್; ಉಳಿದ 3 ಪಂದ್ಯಗಳಿಗೆ ನೂತನ ತಂಡ ಪ್ರಕಟ

India vs Australia T20I: ಭಾರತ ವಿರುದ್ಧದ ಉಳಿದ ಮೂರು ಪಂದ್ಯಗಳಿಗೆ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮತ್ತು ಜೋಶ್ ಇಂಗ್ಲಿಸ್
ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮತ್ತು ಜೋಶ್ ಇಂಗ್ಲಿಸ್ (PTI)

ಏಕದಿನ ವಿಶ್ವಕಪ್‌ ಪಂದ್ಯಾವಳಿ ಮುಕ್ತಾಯಗೊಂಡ ಬೆನ್ನಲ್ಲೇ, ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಟಿ20 ಸರಣಿ (India vs Australia) ಆರಂಭವಾಗಿದೆ. ವಿಶ್ವಕಪ್‌ ಪಂದ್ಯವಾಳಿಯುದ್ದಕ್ಕೂ ಆಡಿದ ಭಾರತದ ಬಹುತೇಕ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆದರೆ, ಆಸ್ಟ್ರೇಲಿಯಾ ತಂಡದ ಹಲವು ಆಟಗಾರರು ಚುಟುಕು ಸರಣಿಯಲ್ಲಿ ಆಡುತ್ತಿದ್ದಾರೆ. ಈ ನಡುವೆ ತಿಂಗಳಿಂದ ಭಾರತದಲ್ಲಿ ನೆಲೆಯೂರಿ ನಿರಂತರ ಪಂದ್ಯಗಳನ್ನು ಆಡುತ್ತಿರುವ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಲು ಆಸ್ಟ್ರೇಲಿಯಾ ಮುಂದಾಗಿದೆ.

ಐದು ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯಗಳು ಮುಗಿದ ಬೆನ್ನಲ್ಲೇ, ವಿಶ್ವಕಪ್ ವಿಜೇತ ತಂಡದಲ್ಲಿದ್ದ ಏಳು ಸದಸ್ಯರಲ್ಲಿ ಆರು ಆಟಗಾರರನ್ನು ಮರಳಿ ತವರಿಗೆ ಕರೆಸಿಕೊಳ್ಳಲು ಆಸ್ಟ್ರೇಲಿಯಾ ನಿರ್ಧರಿಸಿದೆ. ‌

ಇದನ್ನೂ ಓದಿ | ಭಾರತ ಆಸ್ಟ್ರೇಲಿಯಾ 3ನೇ ಟಿ20; ಮಳೆಯಿಂದ ಪಂದ್ಯ ರದ್ದಾಗುವ ಆತಂಕ ಇದೆಯಾ? ಗುವಾಹಟಿ ಹವಾಮಾನ ಹೀಗಿದೆ

ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಜೋಶ್ ಇಂಗ್ಲಿಸ್ ಮತ್ತು ಸೀನ್ ಅಬಾಟ್ ಅವರು ಮಂಗಳವಾರ ಗುವಾಹಟಿಯಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯದ ನಂತರ ಬುಧವಾರ ಆಸ್ಟ್ರೇಲಿಯಾಗೆ ಮರಳಲಿದ್ದಾರೆ. ಅತ್ತ ಸ್ಟೀವ್ ಸ್ಮಿತ್ ಮತ್ತು ಆಡಮ್ ಜಂಪಾ ಈಗಾಗಲೇ ಮನೆಗೆ ಮರಳಿದ್ದಾರೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ವರದಿ ಮಾಡಿದೆ.

ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಭಾರತಕ್ಕೆ ಬಂದಿರುವ ಆಸೀಸ್‌ ಆಟಗಾರರು ಸುಮಾರು ಎರಡು ತಿಂಗಳಿಗೂ ಹೆಚ್ಚು ಕಾಲ ಭಾರತದಲ್ಲೇ ಇದ್ದಾರೆ. ಈ ನಡುವೆ ನಿರಂತರ ಪಂದ್ಯಗಳಿಂದ ವಿಶ್ರಾಂತಿ ಸಿಕ್ಕಿಲ್ಲ. ಅಲ್ಲದೆ, ಇವರಲ್ಲಿ ಹೆಚ್ಚಿನ ಆಟಗಾರರು ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ನಡೆದ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಆಡಿದ್ದರು. ಹೀಗಾಗಿ ಆಟಗಾರರಿಗೆ ವಿಶ್ರಾಂತಿ ನೀಡುವ ಸಲುವಾಗಿ ಕ್ರಿಕೆಟ್‌ ಆಸ್ಟ್ರೇಲಿಯಾ ತಮ್ಮ ಆಟಗಾರರನ್ನು ಮರಳಿ ತವರಿಗೆ ಕರೆಸಿಕೊಂಡಿದೆ.

ಸದ್ಯ ಆಸ್ಟ್ರೇಲಿಯಾ ವಿಶ್ವಕಪ್ ತಂಡದಲ್ಲಿ ಆಡಿದ್ದ ಟ್ರಾವಿಸ್ ಹೆಡ್ ಮಾತ್ರ ಭಾರತದಲ್ಲೇ ಉಳಿದಿದ್ದು, ಟಿ20 ಸರಣಿಯ ಉಳಿದ ಪಂದ್ಯಗಳಲ್ಲಿ ಆಡಲಿದ್ದಾರೆ. ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸಿ ಭಾರತವನ್ನು ಕಾಡಿದ್ದ ಹೆಡ್‌, ಈ ಸರಣಿಯಲ್ಲಿ ಇನ್ನೂ ಆಡಿಲ್ಲ. ಸದ್ಯ ಮೂರನೇ ಟಿ20 ಪಂದ್ಯದಲ್ಲಿ ಹೆಡ್‌ ಇನ್ನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ | ಸುಂದರ್‌ಗೆ ಅವಕಾಶಕ್ಕೆ ಚಿಂತನೆ; ಇಂಡೋ-ಆಸೀಸ್‌ 3ನೇ ಟಿ20ಗೆ ಭಾರತ ಸಂಭಾವ್ಯ ತಂಡ ಹೀಗಿದೆ

ವಿಕೆಟ್‌ ಕೀಪರ್ ಹಾಗೂ ಬ್ಯಾಟರ್ ಆಗಿ ಜೋಶ್ ಫಿಲಿಪ್ ಮತ್ತು ಪವರ್‌ ಹಿಟ್ಟರ್ ಬೆನ್ ಮೆಕ್‌ಡರ್ಮಾಟ್ ಈಗಾಗಲೇ ಗುವಾಹಟಿಯಲ್ಲಿ ತಂಡ ಸೇರಿಕೊಂಡಿದ್ದಾರೆ. ಅತ್ತ ರಾಯ್‌ಪುರದಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೆ ಮುಂಚಿತವಾಗಿ ಬೆನ್ ದ್ವಾರ್‌ಶುಯಿಸ್ ಮತ್ತು ಆಫ್ ಸ್ಪಿನ್ನರ್ ಕ್ರಿಸ್ ಗ್ರೀನ್ ಬುಧವಾರ ತಂಡ ಸೇರಿಕೊಳ್ಳುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ನೂತನ ಟಿ20 ತಂಡ

ಮ್ಯಾಥ್ಯೂ ವೇಡ್ (ನಾಯಕ), ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ಬೆನ್ ಡ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ರಿಸ್ ಗ್ರೀನ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಕೇನ್ ರಿಚರ್ಡ್‌ಸನ್.