ಟ್ರಾವಿಸ್ ಹೆಡ್ ಫಿಟ್; ಕಾನ್ಸ್ಟಾಸ್- ಬೋಲ್ಯಾಂಡ್ ಇನ್; ಭಾರತ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಆಡುವ ಬಳಗ ಪ್ರಕಟ
ಎಂಸಿಜಿಯಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಆಸೀಸ್ ಪ್ರಬಲ ಆಡುವ ಬಳಗವನ್ನು ಅಂತಿಮಗೊಳಿಸಿದೆ. ಡೇಂಜರಸ್ ಬ್ಯಾಟರ್ ಟ್ರಾವಿಸ್ ಹೆಡ್ ಫಿಟ್ ಆಗಿದ್ದು, ಅವರೊಂದಿಗೆ ಸ್ಯಾಮ್ ಕಾನ್ಸ್ಟಾಸ್ ಹಾಗೂ ಸ್ಕಾಟ್ ಬೋಲ್ಯಾಂಡ್ ಕಣಕ್ಕಿಳಿಯಲಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದು, ಡಿಸೆಂಬರ್ 26ರ ಗುರುವಾರ ಆರಂಭವಾಗುವ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡವು ಒಂದು ದಿನ ಮುಂಚಿತವಾಗಿ ಬಲಿಷ್ಠ ಆಡುವ ಬಳಗವನ್ನು ಅಂತಿಮಗೊಳಿಸಿದೆ. ಆತಿಥೇಯರು ತಂಡದಲ್ಲಿ ಎರಡು ಬೃಹತ್ ಬದಲಾವಣೆಗಳನ್ನು ಮಾಡಿದ್ದಾರೆ. ಇದೇ ವೇಳೆ ಗಾಯಾಳು ಟ್ರಾವಿಸ್ ಹೆಡ್ ಚೇತರಿಸಿಕೊಂಡಿದ್ದು ಆಡುವ ಬಳಗದಲ್ಲೇ ಉಳಿದ್ದಿದ್ದಾರೆ. ಇದು ಭಾರತ ತಂಡ ಹಾಗೂ ಅಭಿಮಾನಿಗಳ ಚಿಂತೆ ಹೆಚ್ಚಿಸಿದೆ. ಅತ್ತ ಗಾಯಗೊಂಡ ಜೋಶ್ ಹೇಜಲ್‌ವುಡ್ ಬದಲಿಗೆ ಸ್ಕಾಟ್ ಬೋಲ್ಯಾಂಡ್ ಆಡುವ ಬಳಗ ಸೇರಿಕೊಂಡರೆ, ನಾಥನ್ ಮೆಕ್‌ಸ್ವೀನಿ ಬದಲಿಗೆ ಯುವ ಆರಂಭಿಕ ಆಟಗಾರ ಸ್ಯಾಮ್ ಕಾನ್ಸ್ಟಾಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಮೆಲ್ಬೋರ್ನ್‌ನ ಐತಿಹಾಸಿಕ ಎಂಸಿಜಿ ಮೈದಾನಲ್ಲಿ ಇಂಡೋ-ಆಸೀಸ್ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಕಾಂಗರೂಗಳು ಬಲಿಷ್ಠ ಆಡುವ ಬಳಗವನ್ನೇ ಕಣಕ್ಕಿಳಿಸುತ್ತಿದ್ದಾರೆ. ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಪದಾರ್ಪಣೆಗೆ ಸಜ್ಜಾಗಿದ್ದು, 2011ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಯಕ ಪ್ಯಾಟ್ ಕಮ್ಮಿನ್ಸ್ ಮೈದಾನಕ್ಕಿಳಿದ ನಂತರ, ಆಸ್ಟ್ರೇಲಿಯಾ ಪರ ಟೆಸ್ಟ್ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನಾಗಲು ಸಿದ್ಧರಾಗಿದ್ದಾರೆ.
ಆದರೆ, ಮೊದಲ ಎರಡು ಪಂದ್ಯಗಳಲ್ಲಿ ಭಾರತದ ನಿದ್ದೆಗೆಡಿಸಿದ್ದ ಟ್ರಾವಿಸ್ ಹೆಡ್ ಫಿಟ್ ಆಗಿದ್ದಾರೆ. ಪ್ರಸಕ್ತ ಆವೃತ್ತಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಕ್ರಮಣಕಾರಿ ಫಾರ್ಮ್‌ನಲ್ಲಿರುವ ಅವರು, ಸರಣಿಯಲ್ಲಿ ಈಗಾಗಲೇ ಎರಡು ಶತಕ ಸಿಡಿಸಿದ್ದಾರೆ. ಅಡಿಲೇಡ್ ಹಾಗೂ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಶತಕ ಸಿಡಿಸಿರುವ ಅವರು, ಭಾರತೀಯ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಗಾಯಾಳುವಾಗಿದ್ದ ಹೆಟ್ ಮತ್ತೆ ಫಿಟ್ ಆಗಿರುವುದು ಆಸೀಸ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ನಾಯಕ ಪ್ಯಾಟ್ ಕಮಿನ್ಸ್ ಏನಂದ್ರು?
ಗಬ್ಬಾ ಟೆಸ್ಟ್ ವೇಳೆ ತೊಡೆಯ ಸೆಳೆತ ಅನುಭವಿಸಿದ್ದ ಹೆಡ್ ಫಿಟ್ನೆಸ್ ಬಗ್ಗೆ ಕಳವಳಗಳು ಇದ್ದವು. ಆದರೆ ನಾಯಕ ಪ್ಯಾಟ್ ಕಮ್ಮಿನ್ಸ್ ಎಡಗೈ ಆಟಗಾರ ಫಿಟ್ ಆಗಿದ್ದಾರೆ ಎಂದು ಹೇಳಿದ್ದಾರೆ. “ಟ್ರಾವಿಸ್ ಆಡಲು ಸಜ್ಜಾಗಿದ್ದಾರೆ. ನಮಗೆ ಯಾವುದೇ ಒತ್ತಡವಿಲ್ಲ. ಹೆಡ್‌ಗೆ ಗಾಯದ ಬಗ್ಗೆ ಚಿಂತೆ ಇಲ್ಲ. ಆದ್ದರಿಂದ ಅವರು ಸಂಪೂರ್ಣವಾಗಿ ಫಿಟ್ ಆಗಿ ಆಡುತ್ತಾರೆ,” ಎಂದಿದ್ದಾರೆ.
ಹೆಡ್ ಮೊದಲ ಮೂರು ಟೆಸ್ಟ್‌ಗಳಲ್ಲಿ ಭರ್ಜರಿ 81.80ರ ಸರಾಸರಿಯಲ್ಲಿ 409 ರನ್ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಇತರ ಬ್ಯಾಟರ್‌ಗಳು ಭಾರತದ ವೇಗದ ಬೌಲರ್‌ಗಳ ಮುಂದೆ ಬ್ಯಾಟ್ ಬೀಸಲು ಹೆಣಗಾಡುತ್ತಿರುವಾಗ, ಹೆಡ್ ಸರಾಗವಾಗಿ ಪ್ರಾಬಲ್ಯ ಸಾಧಿಸಿದ್ದಾರೆ.
ಸರಣಿ ಸಮಬಲ
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 295 ರನ್‌ಗಳಿಂದ ಗೆದ್ದಿತ್ತು. ಆ ನಂತರ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ 10 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತು. ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಯ್ತು. ಹೀಗಾಗಿ ಮೂರನೇ ಟೆಸ್ಟ್ ಡ್ರಾಗೊಂಡ ನಂತರ ಐದು ಪಂದ್ಯಗಳ ಸರಣಿಯು 1-1 ಅಂತರದಲ್ಲಿ ಸಮಬಲಗೊಂಡಿದೆ. ಸದ್ಯ ಮೆಲ್ಬೋರ್ನ್ ಟೆಸ್ಟ್ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.
ನಾಲ್ಕನೇ ಟೆಸ್ಟ್‌ಗೆ ಆಸ್ಟ್ರೇಲಿಯಾ ಆಡುವ ಬಳಗ
ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.