ಪಿಂಕ್ ಬಾಲ್ ಟೆಸ್ಟ್: ಆಸ್ಟ್ರೇಲಿಯಾ ತಂಡಕ್ಕೆ ದಾಖಲೆಯ 10 ವಿಕೆಟ್ ಜಯ, ಟೀಮ್ ಇಂಡಿಯಾಗೆ ಹೀನಾಯ ಸೋಲು
India vs Australia 2nd test: ಅಡಿಲೇಡ್ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ 10 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ನಲ್ಲಿ 295 ರನ್ಗಳ ಭರ್ಜರಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, 2ನೇ ಅಥವಾ ಪಿಂಕ್ ಬಾಲ್ ಟೆಸ್ಟ್ನಲ್ಲಿ ಹೀನಾಯ ಸೋಲು ಕಂಡಿದೆ. ಪರ್ತ್ನಲ್ಲಿ ಘೋರ ಪರಾಭವಗೊಂಡಿದ್ದ ಆಸ್ಟ್ರೇಲಿಯಾ, ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ನಲ್ಲಿ ಅಮೋಘವಾಗಿ ಲಯಕ್ಕೆ ಮರಳಿದ್ದಲ್ಲದೆ, 10 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ. ಆ ಮೂಲಕ ಸರಣಿಯನ್ನು ಸಮಬಲಗೊಳಿಸಿದೆ. ಆಸೀಸ್ ವಿರುದ್ಧ ಆಡಿದ 2ನೇ ಪಿಂಕ್ ಬಾಲ್ ಟೆಸ್ಟ್ನಲ್ಲೂ ಭಾರತ ಶರಣಾಗಿದೆ. 2020ರಲ್ಲಿ ಆಡಿದ್ದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೂ ಸೋತಿತ್ತು. ಮೂರನೇ ದಿನದ ಮೊದಲ ಸೆಷನ್ನ ಆರಂಭದಲ್ಲೇ ಪಂದ್ಯವನ್ನು ಗೆದ್ದು ಬೀಗಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ವಿಫಲವಾಯಿತು. ಸ್ಟಾರ್ಗಳ ದಂಡೇ ಇದ್ದರೂ ಆಸೀಸ್ ಬೌಲರ್ಗಳ ಎದುರು ಸದ್ದೇ ಮಾಡಲಿಲ್ಲ. ಹೀಗಾಗಿ ಮೊದಲ ಇನ್ನಿಂಗ್ಸ್ನಲ್ಲಿ 180 ರನ್ಗಳಿಗೆ ಸರ್ವಪತನ ಕಂಡಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಬೀಸಿದ ಆಸೀಸ್, ಪ್ರಥಮ ಇನ್ನಿಂಗ್ಸ್ನಲ್ಲಿ ಭಾರತೀಯ ಬೌಲರ್ಗಳಿಗೆ ಬೆಂಡೆತ್ತಿತ್ತು. ಟ್ರಾವಿಸ್ ಹೆಡ್ ಶತಕ ಸಿಡಿಸಿ ಮಿಂಚಿದರು. ಪರಿಣಾಮ 337 ರನ್ ಗಳಿಸಿ 157 ರನ್ಗಳ ಮುನ್ನಡೆ ಪಡೆಯಿತು. ಆದರೆ 2ನೇ ಇನ್ನಿಂಗ್ಸ್ನಲ್ಲೂ ಮಿಂಚದ ಭಾರತ 175 ರನ್ಗಳಿಗೆ ಕುಸಿಯಿತು. ಇದರೊಂದಿಗೆ ಆಸೀಸ್ಗೆ 19 ರನ್ಗಳ ಅಲ್ಪ ಗುರಿ ನೀಡಿತು. ಈ ಟಾರ್ಗೆಟ್ ಅನ್ನು ಆಸೀಸ್ ಮೂರು ಓವರ್ಗಳಲ್ಲೇ ಮುಕ್ತಾಯಗೊಳಿಸಿತು.
ಸಂಕ್ಷಿಪ್ತ ಸ್ಕೋರ್
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ - 180/10
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ - 337/10 (157 ರನ್ಗಳ ಮುನ್ನಡೆ)
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ - 175/10 (18 ರನ್ ಗುರಿ)
ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ - 19/00 (10 ವಿಕೆಟ್ಗಳ ಗೆಲುವು)
ಸ್ಟಾರ್ಕ್, ಹೆಡ್, ಕಮಿನ್ಸ್ ಅಬ್ಬರ
ಪಿಂಕ್ ಬಾಲ್ ಟೆಸ್ಟ್ನಲ್ಲಿ ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್ ಅಬ್ಬರಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಸ್ಟಾರ್ಕ್ 6 ವಿಕೆಟ್, 2ನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಉರುಳಿಸಿ ಟೀಮ್ ಇಂಡಿಯಾ ಕುಸಿತಕ್ಕೆ ಕಾರಣರಾದರೆ, ಹೆಡ್ ಭರ್ಜರಿ 140 ರನ್ ಗಳಿಸಿ ತಂಡಕ್ಕೆ 157 ರನ್ ಮುನ್ನಡೆ ತಂದಕೊಡಲು ನೆರವಾದರು. ಇನ್ನು ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್, ಎರಡನೇ ಇನ್ನಿಂಗ್ಸ್ನಲ್ಲಿ ಪ್ಯಾಟ್ ಕಮಿನ್ಸ್ 5 ವಿಕೆಟ್ಗಳ ಗುಚ್ಛ ಪಡೆದು ಭಾರತ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು. ಜೊತೆಗೆ ಮಾರ್ನಸ್ ಲಬುಶೇನ್ ಅರ್ಧಶತಕ ಸಿಡಿಸಿ ಮಹತ್ವದ ಕೊಡುಗೆ ನೀಡಿದರು. ಸ್ಕಾಟ್ ಬೋಲ್ಯಾಂಡ್ ಸಹ ವಿಕೆಟ್ ಬೇಟೆಯಾಡಿದರು.
ನಿತೀಶ್ ಭರವಸೆ, ಉಳಿದವರು ನಿರಾಸೆ
ಟೀಮ್ ಇಂಡಿಯಾ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. ಆಲ್ರೌಂಡರ್ ನಿತೀಶ್ ರೆಡ್ಡಿ ಎರಡೂ ಇನ್ನಿಂಗ್ಸ್ಗಳಲ್ಲಿ ತಲಾ 42 ರನ್ ಸಿಡಿಸಿ ಭರವಸೆ ಮೂಡಿಸಿದರೆ, ಉಳಿದವರು ತೀವ್ರ ನಿರಾಸೆ ಮೂಡಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಿಷಭ್ ಪಂತ್ ಬ್ಯಾಟಿಂಗ್ನಲ್ಲಿ ಕೊಡುಗೆ ನೀಡಲು ವಿಫಲರಾದರು. ಅದರಲ್ಲೂ ಕೊಹ್ಲಿ-ರೋಹಿತ್ರನ್ನು ನಿವೃತ್ತಿಯಾಗಿ ಎಂದು ಫ್ಯಾನ್ಸ್ ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮಿಂಚಿದರೂ, ಆಸ್ಟ್ರೇಲಿಯಾವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಲು ವಿಫಲರಾದರು.
ಆಸ್ಟ್ರೇಲಿಯಾ ದಾಖಲೆ
ಆಸ್ಟ್ರೇಲಿಯಾ ಈವರೆಗೂ ಆಡಿರುವ 13 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 12 ಗೆಲುವು (ಭಾರತ ವಿರುದ್ಧ ಗೆದ್ದಿದ್ದು) ಸಾಧಿಸಿದೆ. ಒಂದೇ ಒಂದು ಸೋಲು ಕಂಡಿದೆ. ಆಸೀಸ್ ಅಡಿಲೇಡ್ ಓವಲ್‌ನಲ್ಲಿ ನಡೆದ 8 ಹಗಲು ರಾತ್ರಿ ಟೆಸ್ಟ್‌ಗಳಲ್ಲಿ ಒಂದನ್ನು ಇನ್ನಿಂಗ್ಸ್ ಅಂತರದಿಂದ, ಮೂರನ್ನು 100+ ರನ್‌ಗಳಿಂದ ಮತ್ತು ಮೂರು ಏಳು ಪ್ಲಸ್ ವಿಕೆಟ್‌ಗಳಿಂದ ಗೆದ್ದಿದೆ.