ಬಾಕ್ಸಿಂಗ್‌ ಡೇ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ 311 ರನ್‌ ಗಳಿಸಿ ಸುಸ್ಥಿತಿಯಲ್ಲಿ ಆಸ್ಟ್ರೇಲಿಯಾ, ನಾಲ್ವರು ಅರ್ಧಶತಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಕ್ಸಿಂಗ್‌ ಡೇ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ 311 ರನ್‌ ಗಳಿಸಿ ಸುಸ್ಥಿತಿಯಲ್ಲಿ ಆಸ್ಟ್ರೇಲಿಯಾ, ನಾಲ್ವರು ಅರ್ಧಶತಕ

ಬಾಕ್ಸಿಂಗ್‌ ಡೇ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ 311 ರನ್‌ ಗಳಿಸಿ ಸುಸ್ಥಿತಿಯಲ್ಲಿ ಆಸ್ಟ್ರೇಲಿಯಾ, ನಾಲ್ವರು ಅರ್ಧಶತಕ

ಮೆಲ್ಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್​ ಅಥವಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 311 ರನ್​ಗಳ ಉತ್ತಮ ಮೊತ್ತ ಕಲೆಹಾಕಿದೆ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ 311 ರನ್‌ ಗಳಿಸಿದ ಆಸ್ಟ್ರೇಲಿಯಾ
ಬಾಕ್ಸಿಂಗ್‌ ಡೇ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ 311 ರನ್‌ ಗಳಿಸಿದ ಆಸ್ಟ್ರೇಲಿಯಾ (AFP)

ಭಾರತದ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಬಳಿಕ ಆತಿಥೇಯ ಆಸ್ಟ್ರೇಲಿಯಾ ತಂಡ ಸುಸ್ಥಿತಿಯಲ್ಲಿದೆ. ಮೆಲ್ಬೋರ್ನ್‌ನ ಐತಿಹಾಸಿಕ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​​ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕಾಂಗರೂಗಳು, ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ನಷ್ಟಕ್ಕೆ 311 ರನ್‌ ಕಲೆ ಹಾಕಿದ್ದಾರೆ. ಇದರೊಂದಿಗೆ 2ನೇ ದಿನದಾಟಕ್ಕೆ ತಂಡ ಬ್ಯಾಟಿಂಗ್‌ ಕಾಯ್ದುಕೊಂಡಿದೆ. ಪಂದ್ಯದ ಮೂಲಕ ಆಸೀಸ್‌ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ 19ರ ಹರೆಯದ ಆಟಗಾರ ಸ್ಯಾಮ್ ಕಾನ್ಸ್ಟಾಸ್ (Sam Konstas) ಭಾರತದ ಪ್ರಬಲ ಬೌಲಿಂಗ್‌ ದಾಳಿಯನ್ನು ನಿರ್ಭೀತಿಯಿಂದ ಎದುರಿಸಿದರು. ದಿನದಾಟದಲ್ಲಿ ಕಾನ್ಸ್ಟಾಸ್ ಆಕರ್ಷಕ ಆಟ ಹಾಗೂ ಅರ್ಧಶತಕ ಗಮನ ಸೆಳೆಯಿತು.

ಆತಿಥೇಯರ ಪರ ಆರಂಭಿಕ ನಾಲ್ವರು ಆಟಗಾರರು ತಲಾ ಅರ್ಧಶತಕ ಸಿಡಿಸಿದರು. ವಿಶ್ವದ ಶ್ರೇಷ್ಠ ಬೌಲರ್‌ ಜಸ್ಪ್ರೀತ್‌ ಬುಮ್ರಾ ಅವರನ್ನು ಇದೇ ಮೊದಲ ಬಾರಿಗೆ ಎದುರಿಸಿದ ಕಾನ್ಸ್ಟಾಸ್, ನಿರ್ಭೀತಿಯಿಂದ ಬ್ಯಾಟ್‌ ಬೀಸಿದರು. ಈ ವೇಳೆ ಸ್ಕೂಪ್‌ ಶಾಟ್‌, ರಿವರ್ಸ್‌ ಸ್ಕೂಪ್‌ ಗಮನ ಸೆಳೆಯಿತು. ಕೇವಲ 52 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಸ್ಯಾಮ್‌, ಕೊನೆಗೆ 60 (65) ರನ್‌ ಗಳಿಸಿ ಜಡೇಜಾ ಎಸೆತದಲ್ಲಿ ಔಟಾದರು. 92.31ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅವರು, 6 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಸಿದರು. ವಿಶ್ವದ ಡೇಂಜರಸ್‌ ಬೌಲರ್‌ಗಳಲ್ಲಿ ಒಬ್ಬರು ಎನಿಸಿಕೊಂಡ ಬುಮ್ರಾ ಅವರ ಒಂದೇ ಓವರ್‌ನಲ್ಲಿ 18 ರನ್‌ ಕಲೆ ಹಾಕಿ ಗಮನ ಸೆಳೆದರು.

ಅನುಭವಿ ಆಟಗಾರ ಉಸ್ಮಾನ್‌ ಖವಾಜಾ 121 ಎಸೆತಗಳಲ್ಲಿ 57 ರನ್‌ ಗಳಿಸಿ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಕ್ರೀಸ್‌ಕಚ್ಚಿ ಆಡುತ್ತಿದ್ದ ಮಾರ್ನಸ್‌ ಲಬುಶೇನ್‌ 72 ರನ್‌ ಗಳಿಸಿದ್ದಾಗ ಕೊಹ್ಲಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಈ ವೇಳೆ ಮೈದಾನಕ್ಕೆ ಬಂದ ಅಪಾಯಕಾರಿ ಬ್ಯಾಟರ್ ಟ್ರಾವಿಸ್‌ ಹೆಡ್‌ ಶೂನ್ಯಕ್ಕೆ ನಿರ್ಗಮಿಸಿದರು. ಹೆಡ್​ ಕಳೆದ ಎರಡು ಪಂದ್ಯಗಳಲ್ಲಿ ಸತತ ಶತಕ ಸಿಡಿಸಿದ್ದರು. ಆದರೆ ಮೆಲ್ಬೋರ್ನ್​​ನಲ್ಲಿ ನಿರಾಸೆ ಮೂಡಿಸಿದರು. ಅವರ ಬೆನ್ನಲ್ಲೇ ಮಿಚೆಲ್‌ ಮಾರ್ಷ್‌ (4) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಜಸ್ಪ್ರೀತ್‌ ಬುಮ್ರಾ ಸತತ ಎರಡು ವಿಕೆಟ್‌ ಕಬಳಿಸಿ ಭಾರತಕ್ಕೆ ಬೃಹತ್‌ ಮುನ್ನಡೆ ತಂದುಕೊಟ್ಟರು.

ಸ್ಟೀವ್‌ ಸ್ಮಿತ್‌ ಅಜೇಯ ಆಟ

ಅಲೆಕ್ಸ್‌ ಕ್ಯಾರಿ 31 ರಮ್‌ ಗಳಿಸಿ ಔಟಾದರೆ, ಸ್ಟೀವ್‌ ಸ್ಮಿತ್‌ ಅಜೇಯ 68 ರನ್‌ ಗಳಿಸಿ, ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರಿಗೆ ನಾಯಕ ಪ್ಯಾಟ್‌ ಕಮಿನ್ಸ್‌ ಸಾಥ್‌ ಕೊಡಲಿದ್ದಾರೆ. ಭಾರತದ ಪರ ಜಸ್ಪ್ರೀತ್‌ ಬುಮ್ರಾ 3 ಪ್ರಮುಖ ವಿಕೆಟ್‌ ಕಬಳಿಸಿದರೆ, ಆಕಾಶ್‌ ದೀಪ್‌, ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ 1 ವಿಕೆಟ್‌ ಕಬಳಿಸಿದರು.‌ ಸದ್ಯ ಎರಡನೇ ದಿನದಾಟ ಕುತೂಹಲ ಮೂಡಿಸಿದ್ದು, ಕಾಂಗರೂಗಳನ್ನು ಬೇಗನೆ ಆಲೌಟ್‌ ಮಾಡಿ ಇನ್ನಿಂಗ್ಸ್‌ ಆರಂಭಿಸುವ ಲೆಕ್ಕಾಚಾರ ಭಾರತದ್ದು.

ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಶುಭ್ಮನ್‌ ಗಿಲ್‌ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು, ವಾಷಿಂಗ್ಟನ್‌ ಸುಂದರ್‌ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಇದೇ ವೇಳೆ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ನಿತೀಶ್‌ ರೆಡ್ಡಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಾಗಿದೆ. 

Whats_app_banner