5ನೇ ಟಿ20 ಪಂದ್ಯದಲ್ಲೂ ಗೆಲುವು; ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ವೆಸ್ಟ್ ಇಂಡೀಸ್‌ಗೆ ಮತ್ತೊಮ್ಮೆ ಭಾರಿ ಹಿನ್ನಡೆಯಾದಂತಾಗಿದೆ.

ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಸಾಧಿಸಿದೆ. ಸೈಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ನಡೆದ ಉಭಯ ತಂಡಗಳ ನಡುವಿನ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಕಾಂಗರೂಗಳು 3 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದಾರೆ. ಬೆನ್ ಡ್ವಾರ್ಶುಯಿಸ್ ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ತಂಡವು ಪಂದ್ಯದ ಜೊತೆಗೆ ಸರಣಿಯನ್ನು 5-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಬ್ಯಾಟಿಂಗ್‌ನಲ್ಲಿ ಆಸ್ಟ್ರೇಲಿಯಾ ಪರ ಮಿಚೆಲ್ ಓವನ್ 17 ಎಸೆತಗಳಲ್ಲಿ 37 ರನ್ ಗಳಿಸಿದರೆ, ಕ್ಯಾಮರೂನ್ ಗ್ರೀನ್ 32 ರನ್ ಬಾರಿಸಿದರು. ಇದೇ ವೇಳೆ ಕೊನೆಯ ಪಂದ್ಯದ ಶತಕಕವೀರ ಆರ್‌ಸಿಬಿ ಸ್ಟಾರ್ ಆಟಗಾರ ಟಿಮ್ ಡೇವಿಡ್ 30 ಹಾಗೂ ಆರೋನ್ ಹಾರ್ಡಿ 28 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.
ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ನೆಲದಲ್ಲಿ ಆಸ್ಟ್ರೇಲಿಯಾ ಪುರುಷರ ತಂಡವು ಮೊಟ್ಟ ಮೊದಲ ಬಾರಿಗೆ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಂತಾಯ್ತು.
ಡ್ವಾರ್ಶುಯಿಸ್ ಮ್ಯಾಜಿಕಲ್ ಸ್ಪೆಲ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ 31 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ಹೆಚ್ಚು ರನ್ ಗಳಿಸಿದ ಆಟಗಾರನಾದರು. ಕೊನೆಗೆ ತಂಡ 170 ರನ್‌ಗಳಿಗೆ ಆಲೌಟ್ ಆಯ್ತು. ಡ್ವಾರ್ಶುಯಿಸ್ ಉತ್ತಮ ಬೌಲಿಂಗ್ ಮೂಲಕ ಹೆಟ್ಮೆಯರ್ ಮಾತ್ರವಲ್ಲದೆ ಆರಂಭಿಕ ಆಟಗಾರರಾದ ಬ್ರಾಂಡನ್ ಕಿಂಗ್ 11 ಮತ್ತು ಶಾಯ್ ಹೋಪ್ 9 ವಿಕೆಟ್ ಪಡೆದರು.
ಚೇಸಿಂಗ್ ನಡೆಸಿದ ಆಸೀಸ್ ಕೇವಲ 17 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಗೆದ್ದು ಬೀಗಿತು. ಟಿ20 ಸರಣಿಗೂ ಮುನ್ನ ನಡೆದಿದ್ದ ಟೆಸ್ಟ್ ಸರಣಿಯನ್ನು ಕೂಡಾ ಪ್ರವಾಸಿ ಆಸೀಸ್ 3-0 ಅಂತರದಿಂದ ವೈಟ್ ವಾಶ್ ಮಾಡಿತ್ತು. ಇದೀಗ ಚುಟುಕು ಸರಣಿಯಲ್ಲೂ ವಿಂಡೀಸ್ ತಂಡಕ್ಕೆ ಹಿನ್ನಡೆಯಾಗಿದೆ.
“5-0 ಅಂತರದಿಂದ ಸರಣಿ ಗೆಲ್ಲುತ್ತೇನೆ ಎಂದು ಸರಣಿಯ ಆರಂಭದಲ್ಲಿ ನಾನು ನಿರೀಕ್ಷಿಸಿರಲಿಲ್ಲ” ಎಂದು ಪಂದ್ಯದ ಬಳಿಕ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಹೇಳಿದ್ದಾರೆ.
ಮುಂದೆ ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡಲು ಆಸ್ಟ್ರೇಲಿಯಾ ತಂಡ ತವರಿಗೆ ಮರಳಿದರೆ, ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನ ವಿರುದ್ಧ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.


