ಮಳೆಯಿಂದ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಪಂದ್ಯ ರದ್ದು; ‘ಬಿ’ ಗುಂಪಿಯಲ್ಲಿ ಸೆಮಿಫೈನಲ್ ಲೆಕ್ಕಾಚಾರವೇ ಅದಲು-ಬದಲು
Australia vs South Africa: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಅತ್ಯಂತ ರೋಮಾಂಚಕಾರಿ ಪಂದ್ಯ ಮಳೆಯ ಕಾರಣ ರದ್ದಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಹತ್ವ ಎನಿಸಿಕೊಂಡಿದ್ದ ಪಂದ್ಯಗಳ ಪೈಕಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕದನವೂ ಒಂದು. ಆದರೆ ಇಂದು (ಫೆ 25) ನಡೆಯಬೇಕಿದ್ದ ಉಭಯ ತಂಡಗಳ ನಡುವಿನ ಸೆಣಸಾಟಕ್ಕೆ ಮಳೆ ತಣ್ಣೀರೆರಚಿದೆ. ಎಡಬಿಡದೆ ಸುರಿದ ಭಾರೀ ಮಳೆಯ ಕಾರಣ ಟೂರ್ನಿಯ ಏಳನೇ ಹಾಗೂ ಆಸೀಸ್ ಮತ್ತು ಆಫ್ರಿಕನ್ನರ ನಡುವಿನ ಪಂದ್ಯ ಟಾಸ್ ಕಾಣದೆ ರದ್ದುಗೊಂಡಿದೆ. ಬಿ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು.
ಭಾರತೀಯ ಕಾಲಮಾನ ಮಧ್ಯಾಹ್ನ 2ಕ್ಕೆ ಟಾಸ್ ಪ್ರಕ್ರಿಯೆ ನಡೆಯಬೇಕಿತ್ತು. ಆಗಷ್ಟೇ ಜಿಟಿಜಿಟಿ ಮಳೆ ಶುರುವಾಗಿತ್ತು. ಆದರೆ ಮಳೆ ನಿಲ್ಲಬಹುದು ಎಂದುಕೊಂಡಿದ್ದ ಪಂದ್ಯದ ಉಭಯ ತಂಡಗಳಿಗೆ ವರುಣ ಭಾರೀ ಆಘಾತವನ್ನೇ ನೀಡಿದ್ದಾನೆ. ಈ ಪಂದ್ಯದಲ್ಲಿ ಗೆದ್ದ ತಂಡವು ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಾತ್ರಿಪಡಿಸುತ್ತಿತ್ತು. ಇದೀಗ ತಲಾ ಒಂದೊಂದು ಪಡೆದು ಇಕ್ಕಟ್ಟಿಗೆ ಸಿಲುಕಿದ್ದು, ತಮಗೆ ಉಳಿದ ಒಂದು ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಒಳಗಾಗಿವೆ. ಪ್ರಸ್ತುತ ಮಳೆಯ ಕಾರಣ ಪಂದ್ಯ ರದ್ದಾದ ಹಿನ್ನೆಲೆ ಸೆಮಿಫೈನಲ್ ಲೆಕ್ಕಾಚಾರಗಳೂ ಬದಲಾಗಿವೆ.
ಸೆಮಿಫೈನಲ್ ಲೆಕ್ಕಾಚಾರವೇನು?
ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 3 ಅಂಕ ಪಡೆದಿವೆ. ಆದಾಗ್ಯೂ, ಉತ್ತಮ ನೆಟ್ರನ್ರೇಟ್ ಹೊಂದಿರುವ ದಕ್ಷಿಣ ಆಫ್ರಿಕಾ (+2.140) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (+0.475) ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ. ಈ ಎರಡು ತಂಡಗಳು ಇನ್ನೂ ಖಾತೆ ತೆರೆದಿಲ್ಲ.
ಆದರೆ, ಕೊನೆಯ ಸ್ಥಾನದಲ್ಲಿರುವ ಇಂಗ್ಲೆಂಡ್ ಅಥವಾ ಅಫ್ಘಾನಿಸ್ತಾನ ಪೈಕಿ ಒಂದು ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಹೆಚ್ಚಾಗಿದೆ. ಏಕೆಂದರೆ ಇಂಗ್ಲೆಂಡ್-ಆಘ್ಘನ್ ನಡುವೆಯೇ ಒಂದು ಪಂದ್ಯ ಇದೆ. ಈಗಾಗಲೇ ಒಂದೊಂದು ಸೋತಿರುವ ಎರಡು ತಂಡಗಳು ತಮಗೆ ಉಳಿದ ಎರಡನ್ನೂ ಗೆಲ್ಲಬೇಕು. ಒಂದು ಸೋತರೂ ತಮ್ಮ ಸೆಮೀಸ್ ಹಾದಿ ಅಲ್ಲಿಗೆ ಮುಕ್ತಾಯಗೊಳ್ಳಲಿದೆ.
ದಕ್ಷಿಣ ಆಫ್ರಿಕಾ - ಆಸ್ಟ್ರೇಲಿಯಾ ತಮ್ಮ ಮುಂದಿನ ಪಂದ್ಯದಲ್ಲಿ ಗೆದ್ದರೆ 5 ಅಂಕ ಪಡೆದು ನೇರವಾಗಿ ಸೆಮೀಸ್ಗೆ ಲಗ್ಗೆ ಇಡಲಿವೆ. ಆಗ ಆಫ್ಘನ್-ಇಂಗ್ಲೆಂಡ್ ಹೊರಬೀಳಲಿವೆ. ಆಸೀಸ್ ತನ್ನ ಮುಂದಿನ ಪಂದ್ಯ ಆಫ್ಘನ್ ವಿರುದ್ಧವಿದ್ದು, ಕಾಂಗರೂಗಳು ಹೆಚ್ಚಿನ ಒತ್ತಡಕ್ಕೆ ಸಿಲುಕಿಲ್ಲ. ಹಾಗಂತ ಆಫ್ಘನ್ನನ್ನು ಕೇವಲವಾಗಿ ಪರಿಗಣಿಸುವಂತೆಯೂ ಇಲ್ಲ.
ದಕ್ಷಿಣ ಆಫ್ರಿಕಾ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಸಮಬಲದ ಪೈಪೋಟಿಯನ್ನು ನಿರೀಕ್ಷಿಸಬಹುದು. ಇನ್ನೊಂದು ಪಂದ್ಯದಲ್ಲಿ ಸೆಮೀಸ್ನಲ್ಲಿರುವ ಆಘ್ಪನ್ ಮತ್ತು ಇಂಗ್ಲೆಂಡ್ ತಂಡಗಳ ನಡುವೆಯೇ ಕದನ ನಡೆಯಲಿದೆ. ಹಾಗಾಗಿ ಯಾವ ತಂಡವು ಸೆಮೀಸ್ಗೆ ಲಗ್ಗೆ ಇಡುತ್ತದೋ ಎನ್ನುವ ಕುತೂಹಲ ಮನೆ ಮಾಡಿದೆ.
ತಂಡ (ಗುಂಪು ಎ) | ಪಂದ್ಯ | ಗೆಲುವು | ಸೋಲು | ಅಂಕ | ರನ್ ರೇಟ್ |
---|---|---|---|---|---|
ನ್ಯೂಜಿಲೆಂಡ್ (Q) | 2 | 2 | 0 | 4 | +0.863 |
ಭಾರತ (Q) | 2 | 2 | 0 | 4 | +0.647 |
ಬಾಂಗ್ಲಾದೇಶ (E) | 2 | 0 | 2 | 0 | -0.443 |
ಪಾಕಿಸ್ತಾನ (E) | 2 | 0 | 2 | 0 | -1.087 |
ತಂಡ (ಗುಂಪು ಬಿ) | ಪಂದ್ಯ | ಗೆಲುವು | ಸೋಲು | ಅಂಕ | ರನ್ ರೇಟ್ |
---|---|---|---|---|---|
ದಕ್ಷಿಣ ಆಫ್ರಿಕಾ | 2 | 1 | 0 | 3 | +2.140 |
ಆಸ್ಟ್ರೇಲಿಯಾ | 2 | 1 | 0 | 3 | +0.475 |
ಇಂಗ್ಲೆಂಡ್ | 1 | 0 | 1 | 0 | -0.475 |
ಅಫ್ಘಾನಿಸ್ತಾನ | 1 | 0 | 1 | 0 | -2.140 |
