ಏಕದಿನ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡ ಹೊಸ ಮೈಲಿಗಲ್ಲು; ಭಾರತದ ಬಳಿಕ ಈ ಸಾಧನೆಗೈದ ವಿಶ್ವದ 2ನೇ ತಂಡ
Australia 1000th ODI : ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ 1000ನೇ ಪಂದ್ಯವನ್ನಾಡಿದ ದಾಖಲೆ ಬರೆದಿದೆ. ಆ ಮೂಲಕ ಭಾರತ ತಂಡ ಬಳಿಕ ಈ ಸಾಧನೆಗೈದ ಎರಡನೇ ತಂಡವಾಗಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ (ODI Cricket History) ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australia Cricket Team) ಹೊಸ ದಾಖಲೆ ಬರೆದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡ 1000ನೇ ಏಕದಿನ ಪಂದ್ಯವನ್ನಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಟೀಮ್ ಇಂಡಿಯಾ ನಂತರ ಈ ಸಾಧನೆ ಮಾಡಿದ ವಿಶ್ವದ 2ನೇ ತಂಡ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಕ್ಯಾನ್‌ಬೆರಾದಲ್ಲಿ ವಿಂಡೀಸ್ ವಿರುದ್ಧದ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆಸೀಸ್ ಈ ಮೈಲಿಗಲ್ಲು ಸಾಧಿಸಿದೆ.
1000 ಪಂದ್ಯಗಳಲ್ಲಿ ಆಸೀಸ್ ದಾಖಲೆ ಹೇಗಿದೆ?
ವೆಸ್ಟ್ ಇಂಡೀಸ್ ತಂಡವನ್ನು 24.1 ಓವರ್‌ಗಳಲ್ಲಿ ಕೇವಲ 86 ರನ್‌ಗಳಿಗೆ ಆಲೌಟ್ ಮಾಡಿದ ಆಸೀಸ್, ಕೇವಲ 6.5 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿತು. ಆ ಮೂಲಕ ಅವಿಸ್ಮರಣೀಯ ಪಂದ್ಯದಲ್ಲಿ ಸ್ಮರಣೀಯ ಗೆಲುವು ದಾಖಲಿಸಿತು. ಇದರೊಂದಿಗೆ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತು. ಈವರೆಗೂ ಆಡಿದ 1,000 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 609 ಗೆದ್ದಿದೆ, 348 ಸೋತಿದೆ, ಒಂಬತ್ತು ಟೈ ಮತ್ತು 34 ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಭಾರತದ ದಾಖಲೆ ಹೇಗಿದೆ?
ಏಕದಿನ ಕ್ರಿಕೆಟ್ನಲ್ಲಿ ಆಸೀಸ್ ತಂಡದ ಗೆಲುವಿನ ಶೇಕಡಾವಾರು 60.90 ರಷ್ಟಿದೆ. ಆಸ್ಟ್ರೇಲಿಯಾ ತಂಡಕ್ಕಿಂತ ಮೊದಲು ಭಾರತ ತಂಡ 1,000 ಏಕದಿನ ಪಂದ್ಯಗಳನ್ನು ಆಡಿದೆ ವಿಶ್ವದ ಮೊದಲ ತಂಡದ ಎನಿಸಿಕೊಂಡಿದೆ. 1,055 ಏಕದಿನ ಪಂದ್ಯಗಳಲ್ಲಿ ಭಾರತ 559 ಗೆದ್ದಿದೆ, 443 ಸೋತಿದೆ, 9 ಟೈನಲ್ಲಿ ಕೊನೆಗೊಂಡಿದೆ. ಮತ್ತು 44 ಪಂದ್ಯಗಳು ಫಲಿತಾಂಶ ಇಲ್ಲದೆ ಅಂತ್ಯಗೊಂಡಿವೆ. ಭಾರತದ ಗೆಲುವಿನ ಶೇ 52.98ರಷ್ಟು. 3ನೇ ಸ್ಥಾನದಲ್ಲಿರುವ ಪಾಕಿಸ್ತಾನ 970 ಏಕದಿಗಳು, 4ನೇ ಸ್ಥಾನದಲ್ಲಿರುವ ಶ್ರೀಲಂಕಾ 912 ಏಕದಿನಗಳಲ್ಲಿ ಆಡಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡ ಎಂಬ ದಾಖಲೆಗೆ ಪಾತ್ರವಾಗಿದೆ. ಅದಕ್ಕೆ ಆರು ಏಕದಿನ ವಿಶ್ವಕಪ್ ಗೆದ್ದಿರುವುದೇ ನಿದರ್ಶನ. 1987, 1999, 2003, 2007, 2015 ಮತ್ತು 2023ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ಗೆ ಆಸೀಸ್ ಮುತ್ತಿಕ್ಕಿದೆ. ಈಗ 1000ನೇ ಏಕದಿನ ಪಂದ್ಯವಾಡಿ ಕ್ರಿಕೆಟ್ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದೆ.
ಮೂರನೇ ಪಂದ್ಯದಲ್ಲಿ ಗೆಲುವು
ಮೂರನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ನಡೆಸಿತು. ಕ್ಸೇವಿಯರ್ ಬಾರ್ಟ್ಲೆಟ್ (4/21), ಲ್ಯಾನ್ಸ್ ಮೋರಿಸ್ (2/13) ಮತ್ತು ಆಡಮ್ ಝಂಪಾ (2/14) ಅವರ ಅದ್ಭುತ ಬೌಲಿಂಗ್ನೊಂದಿಗೆ ಕೆರಿಬಿಯನ್ನರು 24.1 ಓವರ್‌ಗಳಲ್ಲಿ 86 ರನ್‌ಗಳಿಗೆ ಆಲೌಟ್ ಆದರು. 87 ರನ್‌ಗಳ ಬೆನ್ನತ್ತಿದ್ದ ಆರಂಭಿಕರಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (18 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 41) ಮತ್ತು ಜೋಶ್ ಇಂಗ್ಲಿಸ್ (16 ಎಸೆತಗಳಲ್ಲಿ 4 ಬೌಂಡರಿ, ಸಿಕ್ಸರ್ ಸಹಿತ 35) ಖಡಕ್ ಬ್ಯಾಟಿಂಗ್ ನೆರವಿನಿಂದ 6.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.
ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಲ್ಲಿ ಡ್ರಾ ಸಾಧಿಸಿದ ಉಭಯ ತಂಡಗಳು ಈಗ ಮೂರು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿವೆ. ಫೆಬ್ರವರಿ 9ರಿಂದ ಚುಟುಕು ಸರಣಿ ಪ್ರಾರಂಭವಾಗಲಿದೆ. ಏಕದಿನ ಸರಣಿ ಸೋತಿರುವ ಕೆರಿಬಿಯನ್ನರು ಟಿ20 ಸರಣಿ ಗೆದ್ದುಕೊಳ್ಳಲು ಯೋಜನೆ ಹಾಕಿಕೊಂಡಿದೆ.