ಸಿಡ್ನಿ ಟೆಸ್ಟ್ ಸೋತು ದಶಕದ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ ಕಳೆದುಕೊಂಡ ಟೀಮ್ ಇಂಡಿಯಾ; WTC ಫೈನಲ್ ಕನಸೂ ಭಗ್ನ
ಆತಿಥೇಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ದಶಕದ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದೆ. ಕೊನೆಯ ಬಾರಿಗೆ ಆಸೀಸ್ 2014–15ರಲ್ಲಿ ಸರಣಿ ಗೆದ್ದಿತ್ತು. ಅದಾದ ಬಳಿಕ ಕಳೆದ ನಾಲ್ಕು ಆವೃತ್ತಿಗಳಲ್ಲಿ ಭಾರತವೇ ಟ್ರೋಫಿಯನ್ನು ಉಳಿಸಿಕೊಂಡಿತ್ತು.
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದು ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ. ಮೂರೇ ದಿನಕ್ಕೆ ಅಂತ್ಯಗೊಂಡ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಮೂಲಕ, ಆತಿಥೇಯ ಆಸ್ಟ್ರೇಲಿಯಾ ದಶಕದ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಿದೆ. ಕೊನೆಯ ಬಾರಿಗೆ ಆಸೀಸ್ 2014–15ರಲ್ಲಿ ನಡೆದಿದ್ದ ಸರಣಿ ಗೆದ್ದಿತ್ತು. ಅದಾದ ಬಳಿಕ ಕಳೆದ ನಾಲ್ಕು ಆವೃತ್ತಿಗಳಲ್ಲಿ ಭಾರತವೇ ಟ್ರೋಫಿಯನ್ನು ಉಳಿಸಿಕೊಂಡಿತ್ತು. ಆ ನಂತರ ಇದೇ ಮೊದಲ ಬಾರಿಗೆ ಟ್ರೋಫಿ ಕಳೆದುಕೊಂಡಿದೆ. ಇದರೊಂದಿಗೆ, ಈ ಬಾರಿಯ ಡಬ್ಲ್ಯುಟಿಸಿ ಫೈನಲ್ ರೇಸ್‌ನಿಂದ ಭಾರತ ತಂಡ ಅಧಿಕೃತವಾಗಿ ಹೊರಬಿದ್ದಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 157 ರನ್‌ಗಳಿಗೆ ಆಲೌಟ್ ಆಯ್ತು. ಹೀಗಾಗಿ ಆಸೀಸ್ ತಂಡ 162 ರನ್‌ಗಳ ಗುರಿ ಪಡೆಯಿತು. ದಿನದ ಎರಡನೇ ಸೆಷನ್‌ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಆಸೀಸ್, ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತು. ಇಷ್ಟೇ ಅಲ್ಲ ಆಸೀಸ್ ತಂಡವೀಗ ಅಧಿಕೃತವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಸಿದೆ.
ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದ್ದ ಭಾರತ, ಮೂರನೇ ದಿನ ಆಟ ಮುಂದುವರೆಸಿತು. ರವೀಂದ್ರ ಜಡೇಜಾ (13) ಮತ್ತು ವಾಷಿಂಗ್ಟನ್ ಸುಂದರ್ (12) ಔಟಾದ ಬಳಿಕ ಭಾರತದ ಮೊತ್ತ 157-8ಕ್ಕೆ ಇಳಿಯಿತು. ಬುಮ್ರಾ ಬ್ಯಾಟಿಂಗ್‌ಗೆ ಬಂದರೂ ಡಕೌಟ್ ಆದರು. ಗಾಯಾಳು ಜೋಶ್ ಹೇಜಲ್ವುಡ್‌ಗೆ ಬದಲಿಯಾಗಿ ಸತತ ಎರಡನೇ ಟೆಸ್ಟ್ ಆಡುತ್ತಿರುವ ಬೋಲ್ಯಾಂಡ್, ಪಂದ್ಯದಲ್ಲಿ 10 ವಿಕೆಟ್ ಪಡೆಯುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದರು.
ಆಸೀಸ್ ವೇಗದ ಚೇಸಿಂಗ್
ಕೊನೆಯ ಇನ್ನಿಂಗ್ಸ್ ವೇಳೆ ಚೇಸಿಂಗ್‌ನಲ್ಲಿ ಆತಿಥೇಯ ತಂಡ ಆರಂಭದಿಂದಲೇ ವೇಗದ ಆಟವಾಡಿತು. ಸ್ಯಾಮ್ ಕಾನ್ಸ್ಟಾಸ್ ಆಕ್ರಮಣಕಾರಿ ಇನ್ನಿಂಗ್ಸ್ ಆರಂಭಿಸಿದರು. ಆದರೆ ಪ್ರಸಿದ್ಧ್ ಕೃಷ್ಣ ಸತತ ಮೂರು ವಿಕೆಟ್ ಪಡೆದು ಆರಂಭಿಕ ವೇಗಕ್ಕೆ ಬ್ರೇಕ್ ಹಾಕಿದರು. ಕಾನ್ಸ್ಟಾಸ್ 22 ರನ್ ಗಳಿಸಿದರೆ, ಮಾರ್ನಸ್ ಲಬುಶೇನ್ (6) ಮತ್ತು ಸ್ಟೀವ್ ಸ್ಮಿತ್ (4) ಪ್ರಸಿದ್ಧ್ ವೇಗದ ಮುಂದೆ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ಉಸ್ಮಾನ್ ಖವಾಜಾ (41) ಸ್ಥಿರ ಪ್ರದರ್ಶನ ನೀಡಿದರು. ಕೊನೆಗೆ ಟ್ರಾವಿಸ್ ಹೆಡ್ (34) ಮತ್ತು ವೆಬ್‌ಸ್ಟರ್ (39) ತಂಡವನ್ನು ಗೆಲುವಿನ ದಡ ಸೇರಿಸಿದರು.
ಭಾರತಕ್ಕೆ ಕಾಡಿದ ಬುಮ್ರಾ ಅನುಪಸ್ಥಿತಿ
ಕೊನೆಯ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯು ಭಾರತವನ್ನು ಕಾಡಿತು. ಬೆನ್ನಿನ ಸೆಳೆತದಿಂದಾಗಿ, ಸ್ಟ್ಯಾಂಡ್ ಇನ್ ನಾಯಕ ಬೌಲಿಂಗ್ ಮಾಡಲಿಲ್ಲ. ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗಿಯ ಅಲಭ್ಯತೆ ತಂಡದ ಸೋಲಿಗೆ ಪ್ರಮುಖ ಕಾರಣವಾಯ್ತು.
ಮೊದಲ ಬಾರಿ ಭಾರತ ಡಬ್ಲ್ಯುಟಿಸಿ ಫೈನಲ್‌ನಿದ ಹೊರಕ್ಕೆ
ಭಾರತ ತಂಡವು ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನವನ್ನು ಕಳೆದುಕೊಂಡಿತು. ಇದೇ ವೇಳೆ ಆಸ್ಟ್ರೇಲಿಯಾ ತಂಡ ಸತತ ಎರಡನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಿದೆ. ಕಳೆದ ಆವೃತ್ತಿಯಲ್ಲಿ ಭಾರತವನ್ನು ಮಣಿಸಿದ್ದ ಆಸೀಸ್ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಮತ್ತೊಮ್ಮೆ ಫೈನಲ್ ಪ್ರವೇಶಿಸಿದ್ದು, ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಜೂನ್ 11ರಂದು ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.