ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾಗೆ ಸುಲಭ ಗೆಲುವು; ಹರ್ಮನ್ ಪಡೆ ಸೋತಿದ್ದೇ ಈ ಐದು ಕಾರಣಗಳಿಂದ!
Australia women vs India women 1st ODI: ಬ್ರಿಸ್ಬೇನ್ನ ಬ್ರಿಸ್ಬೇನ್ನ ಅಲನ್ ಬಾರ್ಡರ್ಫೀಲ್ಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ವನಿತೆಯರು ಹೀನಾಯ ಸೋಲಿಗೆ ಶರಣಾಗಿದ್ದಾರೆ. ಟೀಮ್ ಇಂಡಿಯಾದ ಬಹುತೇಕ ಆಟಗಾರ್ತಿಯರು ಬಿಗ್ಬ್ಯಾಷ್ನಲ್ಲಿ ಕಣಕ್ಕಿಳಿದು ಪಿಚ್ ಮತ್ತು ಕಂಡಿಷನ್ ಅರಿತಿದ್ದರೂ ಅತ್ಯಂತ ಕೆಟ್ಟ ಪ್ರದರ್ಶನ ನೀಡುವ ಮೂಲಕ ಬ್ರಿಸ್ಬೇನ್ನಲ್ಲಿ ಜರುಗಿದ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಏಕದಿನ ಕಳೆದುಕೊಂಡು 1-0 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯಾ, ಪ್ರವಾಸಿಗರ ಎದುರು ಐದು ವಿಕೆಟ್ಗಳ ಸುಲಭ ಗೆಲುವು ಸಾಧಿಸಿತು.
ಉಭಯ ತಂಡಗಳ ಬೌಲಿಂಗ್ ಉತ್ತಮವಾಗಿದ್ದರೂ ಬ್ಯಾಟಿಂಗ್ನಲ್ಲಿ ಎರಡು ಟೀಮ್ಗಳು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಟಾಸ್ ಗೆದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಳ್ಳದ ಭಾರತ ತಂಡವು, ಆಸೀಸ್ ಬೌಲಿಂಗ್ ದಾಳಿಗೆ ಕಕ್ಕಾಬಿಕ್ಕಿಯಾಯಿತು. ಆರಂಭಿಕರಿಂದ ಹಿಡಿದು 11ನೇ ವಿಕೆಟ್ ತನಕ ಪೆವಿಲಿಯನ್ ಪರೇಡ್ ನಡೆಸಿದರು. ಮೆಗನ್ ಸೂಟ್ 5 ವಿಕೆಟ್ ಕಿತ್ತು ಭಾರತ ತಂಡದ ಪಾಲಿಗೆ ಮಾರಕವಾಗಿ ಪರಿಣಮಿಸಿದರು. 34.2 ಓವರ್ಗಳು ಬ್ಯಾಟಿಂಗ್ ಮಾಡಿದರೂ ರನ್ ಗಳಿಸಿದ್ದು ಮಾತ್ರ 100. ಜೆಮಿಮಾ 23 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್.
ಈ ಸಾಧಾರಣ ಮೊತ್ತ ಬೆನ್ನಟ್ಟಿದ ಆಸೀಸ್, ಭರ್ಜರಿ ಆರಂಭ ಪಡೆಯಿತು. ಆದರೆ ಟಾರ್ಗೆಟ್ ಬೆನ್ನಟ್ಟುವ ಹೊತ್ತಿಗೆ ಐದು ವಿಕೆಟ್ ಕಳೆದುಕೊಂಡಿತು. ಭಾರತ ಹೆಚ್ಚುವರಿ 100 ರನ್ ಗಳಿಸಿದ್ದರೆ ಆಸೀಸ್ ತಂಡವನ್ನು ಸೋಲಿಸುವ ಅವಕಾಶ ಇತ್ತು. ಮೊದಲ ವಿಕೆಟ್ಗೆ 48 ರನ್ ಗಳಿಸಿದ ಕಾಂಗರೂ ಪಡೆ, 16.2 ಓವರ್ಗಳಲ್ಲಿ ಗುರಿ ತಲುಪಿತು. ಜಾರ್ಜಿಯಾ ವೋಲ್ 46 ರನ್ ಸಿಡಿಸಿ ಗಳಿಸಿ ಗಮನ ಸೆಳೆದರು. ಭಾರತದ ಪರ ರೇಣುಕಾ ಸಿಂಗ್ 3 ವಿಕೆಟ್, ಪ್ರಿಯಾ ಮಿಶ್ರಾ 2 ವಿಕೆಟ್ ಕಿತ್ತರು. ಹೀನಾಯ ಸೋಲಿಗೆ ಕಾರಣಗಳೇನು?
ಟಾಸ್ ಎಡವಟ್ಟು, ಅನುಭವಿ ಸ್ಮೃತಿ ವೈಫಲ್ಯ
ಮೊದಲ ಏಕದಿನ ಪಂದ್ಯದಲ್ಲಿ ನಾಯಕಿ ಹರ್ಮನ್ಪ್ರೀತ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಬ್ರಿಸ್ಬೇನ್ ಪಿಚ್ ಇತಿಹಾಸದಲ್ಲಿ ಚೇಸಿಂಗ್ ತಂಡವೇ ಅತ್ಯಧಿಕ ಬಾರಿ ಗೆದ್ದಿದೆ. ಚೇಸಿಂಗ್ ಮಾಡಿದ್ದರೆ, ಆತಿಥೇಯರನ್ನು ಅಲ್ಪಮೊತ್ತಕ್ಕೆ ಕಟ್ಟಿ ಗೆಲ್ಲಬಹುದಿತ್ತು. ಬ್ರಿಸ್ಬೇನ್ನ ಅಲನ್ ಬಾರ್ಡರ್ಫೀಲ್ಡ್ನಲ್ಲಿ 21 ಏಕದಿನಗಳು ನಡೆದಿದ್ದು ಚೇಸಿಂಗ್ನಲ್ಲಿ12 ಪಂದ್ಯ, ಮೊದಲ ಬ್ಯಾಟಿಂಗ್ನಲ್ಲಿ 9 ಪಂದ್ಯಗಳು ಗೆದ್ದಿವೆ. ಇನ್ನು ಸ್ಮೃತಿ ಮಂಧಾನ (8) ಬೇಗನೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಪ್ರಿಯಾ ಪೂನಿಯಾ ಪವರ್ ತೋರಿಸಲಿಲ್ಲ.
ಬಿಬಿಎಲ್ ಆಡಿದ್ದರೂ ಕೆಟ್ಟ ಬ್ಯಾಟಿಂಗ್
ಭಾರತದ ಬಹುತೇಕ ಆಟಗಾರ್ತಿಯರು ಅಕ್ಟೋಬರ್ 27ರಿಂದ ಡಿಸೆಂಬರ್ 1ರ ತನಕ ತಿಂಗಳ ಕಾಲ ನಡೆದ ಮಹಿಳಾ ಬಿಗ್ಬ್ಯಾಷ್ ಲೀಗ್ ಆಡಿದ್ದರು. ಸ್ಮೃತಿ ಮಂಧಾನ, ಹರ್ಮನ್ಪ್ರೀತ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್, ದೀಪ್ತಿ ಶರ್ಮಾ ಸೇರಿ ಹಲವು ಬಿಬಿಎಲ್ ಆಡಿದ್ದರು. ಇಲ್ಲಿನ ಪಿಚ್, ಕಂಡೀಷನ್ ಬಗ್ಗೆ ಅರಿತಿದ್ದರೂ ಕೆಟ್ಟ ಬ್ಯಾಟಿಂಗ್ ನಡೆಸಿದ್ದು ಭಾರೀ ವಿಪರ್ಯಾಸ. ಅದು ಕೂಡ 100 ರನ್ಗಳಿಗೆ ಆಲೌಟ್ ಆಗಿದ್ದು ನಿಜಕ್ಕೂ ಆಘಾತಕಾರಿ. ಬಿಬಿಎಲ್ ಆಡಿರುವ ಕಾರಣ ಭಾರತ ಆಸೀಸ್ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆಗಿದ್ದೇ ಬೇರೆ.\
ಶಫಾಲಿ ವರ್ಮಾ ಆಡಿಸಬೇಕಿತ್ತು
ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರು ಈ ಸರಣಿಗೆ ಲಭ್ಯರಿಲ್ಲ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು ಈ ಸರಣಿಗೆ ಕೈಬಿಡಲಾಗಿತ್ತು. ಆದರೆ ಶಫಾಲಿ ಅವರು ಆಸೀಸ್ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಫಾಸ್ಟ್ ಆ್ಯಂಡ್ ಬೌನ್ಸಿ ಪಿಚ್ನಲ್ಲಿ ಬೌಲರ್ಗಳ ಉತ್ತಮವಾಗಿ ದಾಳಿ ನಡೆಸುತ್ತಾರೆ. ಆದರು ಅವರಿಗೆ ಮಣೆ ಹಾಕದೇ ಕೈಬಿಟ್ಟಿದ್ದು ವಿಪರ್ಯಾಸ. ಶಫಾಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದರೂ, ಸಾಬೀತುಪಡಿಸದ ಪ್ರಿಯಾ ಪೂನಿಯಾಗೆ (03 ರನ್) ಅವಕಾಶ ಕೊಟ್ಟು ಆಯ್ಕೆ ಸಮಿತಿ ತಪ್ಪು ಮಾಡಿತಾ?
ಮಧ್ಯಮ ಕ್ರಮಾಂಕ ವಿಫಲ
ಅಗ್ರ ಕ್ರಮಾಂಕ ರನ್ ಗಳಿಸುವಲ್ಲಿ ವಿಫಲವಾದ ಕಾರಣ ಮಧ್ಯಮ ಕ್ರಮಾಂಕ ಆಸರೆಯಾಗಬೇಕಿತ್ತು. ಜೆಮಿಮಾ (23), ಹರ್ಮನ್ (17), ರಿಚಾ (14), ದೀಪ್ತಿ (01) ನಾಲ್ವರು ಅನುಭವಿಗಳೇ ಇದ್ದರೂ ರನ್ ಗಳಿಸಲು ಪರದಾಡಿದ್ದು ಕಂಡು ಬಂತು. ಈ ನಾಲ್ವರು ಬಿಬಿಎಲ್ ಆಡಿದ್ದಾರೆ. ಆದರೂ ಕಡಿಮೆ ಮೊತ್ತಕ್ಕೆ ಡಗೌಟ್ ಸೇರಿದ್ದು ಸೋಲಿನ ಮುನ್ಸೂಚನೆ ನೀಡಿತ್ತು. ಆಸೀಸ್ ಪಿಚ್ಗಳಲ್ಲಿ, ಆಸೀಸ್ ಬೌಲರ್ಗಳ ಎದುರು ಆಡಿದ ಅನುಭವ ಇದ್ದರೂ ಕಳಪೆ ಪ್ರದರ್ಶನ ಟೀಕೆಗೆ ಗುರಿಯಾಗಿದೆ.
ಆಸೀಸ್ ಬೆಂಕಿ ಬೌಲಿಂಗ್
ಭಾರತ ಬ್ಯಾಟಿಂಗ್ ಕಳಪೆಯಾಗಿದೆ ಅಂದರೆ, ಆಸೀಸ್ ಬೆಂಕಿ ಬೌಲಿಂಗ್ ನಡೆಸಿದೆ ಎಂದರ್ಥ. ಅದರಲ್ಲೂ ಮೆಗನ್ ಸೂಟ್ ಅವರು ಐದು ವಿಕೆಟ್ ಕಿತ್ತು ದುಸ್ವಪ್ನವಾಗಿ ಕಾಡಿದರು. ಈ ಹಿಂದಿನ ಸರಣಿಗಳಲ್ಲೂ ಭಾರತ ತಂಡದ ವಿರುದ್ಧ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. 6.2 ಓವರ್ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 19 ರನ್ ಬಿಟ್ಟುಕೊಟ್ಟು 5 ವಿಕೆಟ್ ಉರುಳಿಸಿದರು. ಉಳಿದಂತೆ ಕಿಮ್ ಗಾರ್ಥ್, ಆ್ಯಶ್ಲೇ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ಅಲನಾ ಕಿಂಗ್ ತಲಾ 1 ವಿಕೆಟ್ ಪಡೆದರು.