ಆಸ್ಟ್ರೇಲಿಯಾ ವನಿತೆಯರ ದಾಖಲೆಯ ಚೇಸಿಂಗ್; ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ವನಿತೆಯರ ದಾಖಲೆಯ ಚೇಸಿಂಗ್; ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಸೋಲು

ಆಸ್ಟ್ರೇಲಿಯಾ ವನಿತೆಯರ ದಾಖಲೆಯ ಚೇಸಿಂಗ್; ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಸೋಲು

ಒಂದು ಹಂತದಲ್ಲಿ 182 ರನ್‌ ವೇಳೆಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಜೆಮಿಮಾ ಮತ್ತು ಪೂಜಾ ಚೇತರಿಕೆ ತಂದುಕೊಟ್ಟರು. ಇವರಿಬ್ಬರೂ ಸ್ಫೋಟಕ ಜೊತೆಯಾಟವಾಡಿದರು.

ಭಾರತ ವಿರುದ್ಧ ಆಸೀಸ್‌ ಮಹಿಳಾ ತಂಡಕ್ಕೆ ಗೆಲುವು
ಭಾರತ ವಿರುದ್ಧ ಆಸೀಸ್‌ ಮಹಿಳಾ ತಂಡಕ್ಕೆ ಗೆಲುವು (PTI)

ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ಭಾರತ ವನಿತೆಯರು, ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.‌ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಇಂಡೋ-ಆಸೀಸ್‌ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಆಸೀಸ್‌ (India Women vs Australia Women) ಮಹಿಳೆಯರ ತಂಡ 6 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ಜೆಮಿಮಾ ರೋಡ್ರಿಗಸ್‌ 82 ರನ್‌ ಹಾಗೂ ಪೂಜಾ ವಸ್ತ್ರಾಕರ್‌ ಸ್ಫೋಟಕ ಅರ್ಧಶತಕ (62) ನೆರವಿನಿಂದ 8 ವಿಕೆಟ್‌ ಕಳೆದುಕೊಂಡು 282 ರನ್‌ ಗಳಿಸಿತು. ಬೃಹತ್‌ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಅಲಿಸಾ ಹೀಲಿ ಬಳಗವು, ಕೇವಲ 46.3 ಓವರ್‌ಗಳಲ್ಲಿ 4 ವಿಕೆಟ್‌ ಮಾತ್ರ ಕಳೆದುಕೊಂಡು 285 ರನ್‌ ಗಳಿಸಿ ಗೆದ್ದು ಬೀಗಿತು. ವನಿತೆಯರ ಕ್ರಿಕೆಟ್‌ ಇತಿಹಾಸದಲ್ಲೇ ಇದು ಎರಡನೇ ಅತ್ಯಂತ ಯಶಸ್ವಿ ರನ್‌ ಚೇಸಿಂಗ್‌ ಎಂಬ ದಾಖಲೆ ನಿರ್ಮಿಸಿತು.

ಅತ್ತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಪುರುಷರ ತಂಡ ಸೋಲು ಕಂಡರೆ, ಇತ್ತ ವನಿತೆಯರ ತಂಡವೂ ಸೋಲೊಪ್ಪಿ ನಿರಾಶೆ ಮೂಡಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತದ ಪರ ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ 49 ರನ್‌ ಗಳಿಸಿ ಅರ್ಧಶತಕ ವಂಚಿತರಾದ್ರು. ಶಫಾಲಿ ವರ್ಮಾ ಕೇವಲ 1 ರನ್‌ ಗಳಿಸಿ ನಿರಾಶೆ ಮೂಡಿಸಿದ್ರು. ರಿಚಾ ಘೋಷ್‌ 21 ರನ್‌ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್‌ ಕೌರ್ 9 ರನ್‌ ಗಳಿಸಿ ಔಟಾದರು. ದೀಪ್ತಿ ಶರ್ಮಾ 21 ಹಾಗೂ ಅಮನ್ಜೋತ್‌ ಕೌರ್‌ 20 ರನ್‌ ಕಲೆ ಹಾಕಿ ವಿಕೆಟ್‌ ಒಪ್ಪಿಸಿದರು.‌

ಇದನ್ನೂ ಓದಿ | ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಇನ್ನಿಂಗ್ಸ್‌ ಮತ್ತು 32 ರನ್‌ ಸೋಲು

ಒಂದು ಹಂತದಲ್ಲಿ 182 ರನ್‌ ವೇಳೆಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಜೆಮಿಮಾ ಮತ್ತು ಪೂಜಾ ಚೇತರಿಕೆ ತಂದುಕೊಟ್ಟರು. ಇವರಿಬ್ಬರೂ ಸ್ಫೋಟಕ ಜೊತೆಯಾಟವಾಡಿದರು. ಉತ್ತಮ ಸ್ಟ್ರೈಕ್‌ ರೇಟ್‌ ಜೊತೆಗೆ ಬ್ಯಾಟ್‌ ಬೀಸಿ ತಂಡದ ಮೊತ್ತ ಹೆಚ್ಚಿಸುವುದಲ್ಲದೆ ತಲಾ ಅರ್ಧಶತಕ ಸಿಡಿಸಿ ಮಿಂಚಿದರು.

ಬೃಹತ್‌ ಗುರಿ ಬೆನ್ನಟ್ಟಿದ ಆಸೀಸ್‌, ಖಾತೆ ತೆರೆಯುವ ಮುನ್ನವೇ ನಾಯಕಿ ಹೀಲಿ ವಿಕೆಟ್‌ ಕಳೆದುಕೊಂಡು ಮಂಕಾಯ್ತು. ಆದರೆ, ಎಲಿಸ್ ಪೆರ್ರಿ ಮತ್ತು ಲಿಚ್‌ಫೀಲ್ಡ್‌ ಶತಕದ ಜೊತೆಯಟವಾಡಿ ಅಬ್ಬರಿಸಿದರು. ಆರ್‌ಸಿಬಿ ಆಟಗಾರ್ತಿ ಪೆರ್ರಿ 75 ರನ್‌ ಗಳಿಸಿದರೆ, ಲಿಚ್‌ಫೀಲ್ಡ್‌ 78 ರನ್‌ ಸಿಡಿಸಿದರು. ಬೆತ್‌ ಮೂನಿ 42 ರನ್‌ ಗಳಿಸಿದರೆ, ತಾಹ್ಲಿಯಾ ಮೆಕ್‌ಗ್ರಾತ್‌ ಅಜೇಯ 68 ರನ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಸದ್ಯ ಆಸೀಸ್‌ ತಂಡವು ಏಕದಿನ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ | ಏಕೈಕ ಟೆಸ್ಟ್ ಪಂದ್ಯ​ದಲ್ಲಿ ಆಸ್ಟ್ರೇಲಿಯಾ ಘೋರ ಪರಾಜಯ; ಭಾರತ ಮಹಿಳಾ ತಂಡಕ್ಕೆ ಐತಿಹಾಸಿಕ ದಿಗ್ವಿಜಯ

ಇಂಗ್ಲೆಂಡ್ ಬಳಿಕ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧವೂ ಭಾರತದ ವನಿತೆಯರು ಐತಿಹಾಸಿಕ ಜಯ ಸಾಧಿಸಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಇತ್ತೀಚೆಗೆ ನಡೆದ ಏಕೈಕ ಟೆಸ್ಟ್​​ನಲ್ಲಿ ಹರ್ಮನ್ ಪಡೆ, 8 ವಿಕೆಟ್​ಗಳ ಭರ್ಜರಿ ಜಯಭೇರಿ ಬಾರಿಸಿದೆ. ಇದರೊಂದಿಗೆ ಐತಿಹಾಸಿಕ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮೊಟ್ಟ ಮೊದಲ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಆಸೀಸ್ ವಿರುದ್ಧ 10 ಪಂದ್ಯ ಟೆಸ್ಟ್​​ ಪಂದ್ಯಗಳಲ್ಲಿ ಕಣಕ್ಕಿಳಿದಿತ್ತು. ಆದರೆ 6 ಪಂದ್ಯಗಳಲ್ಲಿ ಸೋತಿತ್ತು.

Whats_app_banner