ಸ್ಮೃತಿ ಮಂಧಾನ ಶತಕಕ್ಕೆ ಒಲಿಯದ ವಿಜಯ; 3-0 ಅಂತರದಿಂದ ಸರಣಿ ಕ್ಲೀನ್‌ಸ್ವೀಪ್ ಮಾಡಿದ ಆಸ್ಟ್ರೇಲಿಯಾ
ಸ್ಮೃತಿ ಮಂಧನಾ 109 ಎಸೆತಗಳಲ್ಲಿ 105 ರನ್ ಗಳಿಸಿ ಆಕರ್ಷಕ ಶತಕ ಸಿಡಿಸಿದರು. ಅವರು ಕ್ರೀಸ್‌ನಲ್ಲಿ ಇರುವವರೆಗೂ ತಂಡ ಗೆಲ್ಲುವ ಭರವಸೆ ಇತ್ತು. ಮಂಧಾನ ಔಟಾಗುತ್ತಿದ್ದಂತೆಯೇ ತಂಡದ ಗೆಲುವಿನ ಭರವಸೆ ಕಮರಿತು. ನಾಯಕಿ ಹರ್ಮನ್ ಪ್ರೀತ್ ಕೌರ್12 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ 16 ರನ್ ಗಳಿಸಿದರು.
ಸ್ಮೃತಿ ಮಂಧಾನ ಆಕರ್ಷಕ ಶತಕದ ಹೊರತಾಗಿಯೂ ಭಾರತ ವನಿತೆಯರ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿಯೂ 83 ರನ್‌ಗಳ ಹೀನಾಯ ಸೋಲನುಭವಿಸಿದೆ. ಇದರೊಂದಿಗೆ ಬಲಿಷ್ಠ ಕಾಂಗರೂಗಳ ವಿರುದ್ಧ ವೈಟ್‌ವಾಶ್ ಮುಖಭಂಗಕ್ಕೆ ತುತ್ತಾಗಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿಯೂ ಭರ್ಜರಿ ಅಂತರದಿಂದ ಗೆದ್ದಿದ್ದ ಆಸೀಸ್, ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ 3-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ನಿರ್ಣಾಯಕ ಪಂದ್ಯದಲ್ಲಿ ಶತಕದಾಟವಾಡಿದ ಅನ್ನಾಬೆಲ್ ಸದರ್ಲ್ಯಾಂಡ್ ಪಂದ್ಯಶ್ರೇಷ್ಠ ಜೊತೆಗ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, 6 ವಿಕೆಟ್ ನಷ್ಟಕ್ಕೆ 298 ರನ್ ಕಲೆ ಹಾಕಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಅನ್ನಾಬೆಲ್ ಸದರ್ ಲ್ಯಾಂಡ್ ಅವರ 95 ಎಸೆತಗಳಲ್ಲಿ 110 ರನ್ ಗಳಿಸಿದರು. ಆಲ್‌ರೌಂಡರ್ ಆಶ್ಲೆ ಗಾರ್ಡನರ್ 50 ರನ್ ಗಳಿಸಿದರೆ, ನಾಯಕಿ ತಹ್ಲಿಯಾ ಮೆಕ್‌ಗ್ರಾತ್ ಅಜೇಯ 56 ರನ್ ಸಿಡಿಸಿದರು. ಒಂದು ಹಂತದಲ್ಲಿ 78 ರನ್ ವೇಳೆಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡ ಬಲುಬೇಗನೆ ಪುಟಿದೆದ್ದಿತು.
ಇದಕ್ಕೆ ಉತ್ತರವಾಗಿ ಭಾರತ ತಂಡವು ಕೇವಲ 45.1 ಓವರ್‌ಗಳಲ್ಲಿ 215 ರನ್‌ಗಳಿಗೆ ಆಲೌಟ್ ಆಯಿತು. 299 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಕ್ಕಿತು. ರಿಚಾ ಘೋಷ್ ಕೇವಲ 2 ರನ್ ಗಳಿಸಿ ಔಟಾದರೂ, ಸ್ಟೈಲಿಶ್ ಆಟಗಾರ್ತಿ ಮಂಧನಾ ಮತ್ತು ಹರ್ಲೀನ್ ಡಿಯೋಲ್ ಶತಕದ ಜೊತೆಯಾಟವಾಡಿದರು. ಹರ್ಲೀನ್ 39 ರನ್ ಗಳಿಸಿದರು. ಇವರಿಬ್ಬರ ನಡುವಿನ 118 ರನ್‌ಗಳ ಜೊತೆಯಾಟಕ್ಕೆ ಅಲನಾ ಕಿಂಗ್ ಬ್ರೇಕ್ ಹಾಕಿದರು.
ಸ್ಮೃತಿ ಆಕರ್ಷಕ ಶತಕ
ಅಬ್ಬರ ಮುಂದುವರೆಸಿದ ಆರ್‌ಸಿಬಿ ಆಟಗಾರ್ತಿ ಮಂಧನಾ 109 ಎಸೆತಗಳಲ್ಲಿ 105 ರನ್ ಗಳಿಸಿದರು. ಅವರು ಕ್ರೀಸ್‌ನಲ್ಲಿ ಇರುವವರೆಗೂ ತಂಡ ಗೆಲ್ಲುವ ಭರವಸೆ ಇತ್ತು. ನಾಯಕಿ ಹರ್ಮನ್ ಪ್ರೀತ್ ಕೌರ್ 22 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿದರೆ, ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ 11 ಎಸೆತಗಳಲ್ಲಿ 16 ರನ್ ಮಾತ್ರ ಗಳಿಸಿದರು. ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಸ್ಪಿನ್ ಬೌಲಿಂಗ್ ಆಲ್‌ರೌಡರ್ ಕೇವಲ ಗಾರ್ಡ್ನರ್ 30 ರನ್ 5 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ತಮ್ಮ ವಶಕ್ಕೆ ಪಡೆದರು.
ಆಸೀಸ್ ಪರ ಫೋಬೆ ಲಿಚ್‌ಫೀಲ್ಡ್ 33 ಎಸೆತಗಳಲ್ಲಿ 25 ರನ್ ಗಳಿಸಿದರೆ, ಜಾರ್ಜಿಯಾ ವೋಲ್ 30 ಎಸೆತಗಳಲ್ಲಿ 26 ರನ್ ಕಲೆ ಹಾಕಿದರು. ಸ್ಟಾರ್ ಆಲ್‌ರೌಂಡರ್ ಎಲಿಸ್ ಪೆರ್ರಿ 4 ರನ್ ಮಾತ್ರ ಗಳಿಸಿ ಅರುಂಧತಿ ರೆಡ್ಡಿ ಮ್ಯಾಜಿಕ್‌ಗೆ ಬಲಿಯಾದರು.