ಆಸ್ಟ್ರೇಲಿಯಾ ಮಾಧ್ಯಮದ ಅತಿರೇಕ; 'ವಿರಾಟ್ ಐ ಆಮ್ ಯುವರ್ ಫಾದರ್' ಹೆಡ್‌ಲೈನ್‌ಗೆ ನೆಟ್ಟಿಗರ ಕಟು ಟೀಕೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ಮಾಧ್ಯಮದ ಅತಿರೇಕ; 'ವಿರಾಟ್ ಐ ಆಮ್ ಯುವರ್ ಫಾದರ್' ಹೆಡ್‌ಲೈನ್‌ಗೆ ನೆಟ್ಟಿಗರ ಕಟು ಟೀಕೆ

ಆಸ್ಟ್ರೇಲಿಯಾ ಮಾಧ್ಯಮದ ಅತಿರೇಕ; 'ವಿರಾಟ್ ಐ ಆಮ್ ಯುವರ್ ಫಾದರ್' ಹೆಡ್‌ಲೈನ್‌ಗೆ ನೆಟ್ಟಿಗರ ಕಟು ಟೀಕೆ

ಆಸ್ಟ್ರೇಲಿಯಾದ ಟ್ಯಾಬ್ಲಾಯ್ಡ್ ಒಂದು ಯುವ ಆಟಗಾರ ಸ್ಯಾಮ್ ಕಾನ್ಸ್ಟಾಸ್ ಚಿತ್ರವನ್ನು ಬಳಸಿಕೊಂಡು 'ವಿರಾಟ್ ಕೊಹ್ಲಿ, ನಾನು ನಿಮ್ಮ ತಂದೆ' ಎಂಬ ಶೀರ್ಷಿಕೆ ನೀಡಿದೆ. ಇದು ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದ ವೇಳೆ ಇಂಥ ಸನ್ನಿವೇಶಗಳು ಬೆಳಕಿಗೆ ಬರುತ್ತಿವೆ.

ಆಸ್ಟ್ರೇಲಿಯಾ ಮಾಧ್ಯಮದ ಅತಿರೇಕ; ವಿರಾಟ್ ಐ ಆಮ್ ಯುವರ್ ಫಾದರ್ ಹೆಡ್‌ಲೈನ್‌ಗೆ ನೆಟ್ಟಿಗರ ಟೀಕೆ
ಆಸ್ಟ್ರೇಲಿಯಾ ಮಾಧ್ಯಮದ ಅತಿರೇಕ; ವಿರಾಟ್ ಐ ಆಮ್ ಯುವರ್ ಫಾದರ್ ಹೆಡ್‌ಲೈನ್‌ಗೆ ನೆಟ್ಟಿಗರ ಟೀಕೆ

ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಇನ್ನೂ ಮುಕ್ತಾಯಗೊಂಡಿಲ್ಲ. ಪಂದ್ಯದ ಮೊದಲ ಇನ್ನಿಂಗ್ಸ್‌ ವೇಳೆ ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ ಸ್ಯಾಮ್‌ ಕಾನ್ಸ್ಟಾಸ್ ಪರಸ್ಪರ ಡಿಕ್ಕಿ ಹೊಡೆದ ಘಟನೆ ಬಗ್ಗೆ ಗೊತ್ತೇ ಇದೆ. ಇದು ವಿರಾಟ್ ಕೊಹ್ಲಿಯದ್ದೇ ತಪ್ಪು ಎಂದು, ಐಸಿಸಿ ಈಗಾಗಲೇ ಶೇಕಡಾ 20ರಷ್ಟು ದಂಡ ವಿಧಿಸಿದೆ. ಘಟನೆ ನಡೆದ ಎರಡು ದಿನಗಳು ಕಳೆದರೂ, ಆಸ್ಟ್ರೇಲಿಯಾದ ಮಾಧ್ಯಮಗಳು ವಿರಾಟ್ ಕೊಹ್ಲಿಯನ್ನು ಟೀಕಿಸುವುದನ್ನ ಇನ್ನೂ ನಿಲ್ಲಿಸಿಲ್ಲ. ಒಂದು ತಿಂಗಳ ಹಿಂದೆ ಕೊಹ್ಲಿಯನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಆಸ್ಟ್ರೇಲಿಯಾ ಮಾಧ್ಯಮಗಳು, ಇದೀಗ ಸಣ್ಣ ನೆಪ ಹುಡುಕಿ ಟೀಕಿಸಿ ಅವಮಾನಿಸುತ್ತಿವೆ.

ಆಸ್ಟ್ರೇಲಿಯಾ ಮಾಧ್ಯಮಗಳಿಗೆ, ತಮ್ಮ ದೇಶದ ಯುವ ಆಟಗಾರ ಸ್ಯಾಮ್‌ ಕಾನ್ಸ್ಟಾಸ್‌ ಹೀರೋ ಆದರೆ, ವಿರಾಟ್ ಕೊಹ್ಲಿ ಖಳನಾಯಕನಾಗಿ ಮಾರ್ಪಟ್ಟಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮೊದಲ ದಿನದಂದು ನಡೆದ ಆ ಒಂದು ಘಟನೆ. ಕೊಹ್ಲಿ ಕ್ರೀಸ್‌ನ ಹೊರಗಿನಿಂದ ಕಾನ್ಸ್ಟಾಸ್ ಕಡೆಗೆ ನಡೆದುಕೊಂಡು ಬಂದು, ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಕೊಹ್ಲಿ ಮತ್ತು 19 ವರ್ಷದ ಯುವಕನ ನಡುವೆ ಮಾತಿನ ಚಕಮಕಿ ನಡೆದಿತ್ತು.

ಈ ಘಟನೆ ಬೆನ್ನಲ್ಲೇ, ಆಸ್ಟ್ರೇಲಿಯಾದ ಟ್ಯಾಬ್ಲಾಯ್ಡ್ ಆಗಿರುವ'ಸಂಡೇ ಟೈಮ್ಸ್' ಸ್ಯಾಮ್ ಕಾನ್ಸ್ಟಾಸ್ ಅವರ ಚಿತ್ರವನ್ನು ಬಳಸಿ 'ವಿರಾಟ್ ಐ ಆಮ್ ಯುವರ್ ಫಾದರ್' (Virat I Am Your Father) ಎಂಬ ಶೀರ್ಷಿಕೆ ಹಾಕಿದೆ. ಅಂದರೆ, ‘ವಿರಾಟ್‌ ನಾನು ನಿನ್ನ ಅಪ್ಪ’ ಎಂದು ಕಾನ್ಸ್ಟಾಸ್‌ ಹೇಳುತ್ತಿರುವಂತೆ ಬಿಂಬಿಸಿದೆ. ಆ ಮೂಲಕ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ. 'ಕೊಹ್ಲಿ ಮತ್ತು ಭಾರತ ತಂಡವನ್ನು ಬೆಚ್ಚಿಬೀಳಿಸಿದ ಯುವ ತಾರೆ, ಆಸೀಸ್ ತಂಡವನ್ನು ಮತ್ತೆ ಹಳಿಗೆ ತಂದರು' ಎಂದು ಟ್ಯಾಬ್ಲಾಯ್ಡ್‌ನಲ್ಲಿ ವಿವರಿಸಲಾಗಿದೆ.

ವಿರಾಟ್‌ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾವ ಅನುಮಾನಗಳೂ ಇಲ್ಲ. ಅದಕ್ಕೆ ಅವರ ಅಂಕಿ-ಅಂಶಗಳು, ದಾಖಲೆಗಳೇ ಸಾಕ್ಷಿ. ಆದರೆ, ಅವರ ಆ ಒಂದು ನಡೆಗಾಗಿ ಅಗೌರವ ತೋರಿದ್ದಕ್ಕಾಗಿ ನೆಟ್ಟಿಗರು ಈಗ ಆಸೀಸ್‌ ಮಾಧ್ಯಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೋಡಂಗಿ ಎಂದಿದ್ದ ವೆಸ್ಟರ್ನ್ ಆಸ್ಟ್ರೇಲಿಯಾ‌

ಅಂದ ಹಾಗೆ, ಸ್ಯಾಮ್ ಕಾನ್ಸ್ಟಾಸ್‌ಗೆ ಸಂಬಂಧಿಸಿದ ಘಟನೆ ನಂತರ ಕೊಹ್ಲಿಯನ್ನು ಟೀಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವೆಸ್ಟರ್ನ್ ಆಸ್ಟ್ರೇಲಿಯಾ‌ ಪತ್ರಿಕೆಯು ಕೊಹ್ಲಿಯನ್ನು 'ಕೋಡಂಗಿ' ಎಂದು ಅವಮಾನಿಸಿತ್ತು. ಮೆಲ್ಬೋರ್ನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 36 ರನ್‌ಗಳಿಗೆ ಔಟಾದ ನಂತರ 'ಕರ್ಮ' ಎಂದು ಹೇಳಿತ್ತು. ಇವೆಲ್ಲದಕ್ಕೂ ಭಾರತೀಯ ಅಭಿಮಾನಿಗಳು ಆಕ್ರೋಶದ ಪ್ರತಿಕ್ರಿಯೆ ನೀಡಿದ್ದಾರೆ.

ನೆಟ್ಟಿಗರ ಆಕ್ರೋಶ

“ನೀವು‌ (ಮಾಧ್ಯಮ) ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದ್ದೀರಿ. ಕೊಹ್ಲಿಗೆ ಅಗೌರವ ತೋರುವುದು ಮಾತ್ರವಲ್ಲ, ಇಂಥ ಬಾಲಿಶ ನಡೆಯಿಂದ 19 ವರ್ಷದ ಯುವ ಆಟಗಾರನ ಬಗ್ಗೆ ದ್ವೇಷ ಹುಟ್ಟಿಸುತ್ತಿದ್ದೀರಿ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, “ಎಲ್ಲವೂ ಚೆನ್ನಾಗಿತ್ತು, ಆದರೆ ಇದು ಅತಿಯಾಯ್ತು. ನಿಮಗೆ ಸ್ವಲ್ಪವಾದರೂ ನಾಚಿಕೆಯಾಗಬೇಕು,” ಎಂದು ಬರೆದಿದ್ದಾರೆ. “ಪತ್ರಿಕೆ ನಿಜಕ್ಕೂ ಇದನ್ನು ಮುದ್ರಿಸುತ್ತಿದೆಯೇ? ತಮಾಷೆ ಮತ್ತು ಸ್ಲೆಡ್ಜಿಂಗ್‌ಗೂ ಒಂದು ಮಿತಿ ಇದೆ. ನಾಚಿಕೆಯಾಗಬೇಕು!,” ಎಂದಿದ್ದಾರೆ.

Whats_app_banner