ತಾನು ಬೌಲಿಂಗ್ ಮಾಡಿದ ಮೂವರು ಬೆಸ್ಟ್ ಕ್ರಿಕೆಟಿಗರ ಹೆಸರಿಸಿದ ನಾಥನ್ ಲಿಯಾನ್; ಇಬ್ಬರು ಭಾರತೀಯರು
Nathan Lyon: ಆಸ್ಟ್ರೇಲಿಯಾ ಸ್ಪಿನ್ನರ್ ನಾಥನ್ ಲಿಯಾನ್, ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಮೂವರು ಅತ್ಯುತ್ತಮ ಆಟಗಾರರನ್ನು ಹೆಸರಿಸಿದ್ದಾರೆ. ಇವರಲ್ಲಿ ಎಬಿ ಡಿವಿಲಿಯರ್ಸ್ ಜೊತೆಗೆ ಇಬ್ಬರು ಭಾರತೀಯ ಕ್ರಿಕೆಟಿಗರು ಇದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ (Nathan Lyon), ತಮ್ಮ ವೃತ್ತಿಜೀವನದಲ್ಲಿ ಆಡಿದ ಮೂವರು ಅತ್ಯುತ್ತಮ ಆಟಗಾರರು ಯಾರು ಎಂಬುದಾಗಿ ಹೆಸರಿಸಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯರಾಗಿದ್ದು, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಎಬಿ ಡಿವಿಲಿಯರ್ಸ್ ಹೆಸರನ್ನು ಲಿಯಾನ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದ ಲಿಯಾನ್, ಆಸ್ಟ್ರೇಲಿಯ ಪರ ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧದ ಸರಣಿಯಲ್ಲೂ ಆಡುತ್ತಿದ್ದಾರೆ.
ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನ ಸೋಷಿಯಲ್ ಮೀಡಿಯಾ ಹ್ಯಾಂಡಲ್ ಜೊತೆಗೆ ಮಾತನಾಡಿದ ಲಿಯಾನ್, ತಾವು ಆಡಿದ ಮೂವರು ಅತ್ಯುತ್ತಮ ಬ್ಯಾಟರ್‌ಗಳನ್ನು ಬಹಿರಂಗಪಡಿಸಿದ್ದಾರೆ. ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ. "ಇದು ತುಂಬಾ ಕಠಿಣ ಪ್ರಶ್ನೆ. ನಾನು ಹಲವು ಶ್ರೇಷ್ಠ ಆಟಗಾರರ ವಿರುದ್ಧ ಆಡಿದ್ದೇನೆ. ನಾನು ನಿಮಗೆ ಮೂರು ಹೆಸರು ಹೇಳುವುದಾದರೆ; ಅವರು ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಎಬಿ ಡಿವಿಲಿಯರ್ಸ್ ಆಗಿರುತ್ತಾರೆ,” ಎಂದು ಲಿಯಾನ್ ಹೇಳಿದ್ದಾರೆ. ಹಿರಿಯ ಆಟಗಾರನ ಉತ್ತರ ಭಾರತದ ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಕ್ರಿಕೆಟ್‌ನಲ್ಲಿ ಈ ಮೂವರು ಬ್ಯಾಟರ್‌ಗಳು ಮಾಡಿದ ಸಾಧನೆ ಒಂದೆರಡಲ್ಲ. ಅವರ ಫಾರ್ಮ್ ಹಾಗೂ ದಾಖಲೆಗಳ ಪಟ್ಟಿ ತುಂಬಾ ದೊಡ್ಡದು. ಹೀಗಾಗಿ ಈ ಮೂವರ ವಿಕೆಟ್ ಪಡೆಯಲು ತಾನು ಎಷ್ಟು ಕಷ್ಟಪಟ್ಟಿದ್ದೇನೆ ಎಂಬುದರ ಕುರಿತು ಲಿಯಾನ್ ಹೇಳಿಕೊಂಡಿದ್ದಾರೆ.
“ಅವರ ವಿಕೆಟ್ ಪಡೆಯಲು ನಾನು ಹೆಣಗಾಡುವ ವಿಷಯವೆಂದರೆ, ದೀರ್ಘಕಾಲದವರೆಗೆ ಅವರ ರಕ್ಷಣಾತ್ಮಕ ಆಟಕ್ಕೆ ಸವಾಲು ಹಾಕಲು ಪ್ರಯತ್ನಿಸುವುದು” ಎಂದು ಲಿಯಾನ್ ಸಂದರ್ಶನದಲ್ಲಿ ಹೇಳಿದರು.
ಇದನ್ನೂ ಓದಿ | ಏಕದಿನ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಡೇವಿಡ್ ವಾರ್ನರ್; ಆದರೆ, ಈ ಟೂರ್ನಿಗೆ ಲಭ್ಯ
ಸದ್ಯ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಪರ್ತ್ ಮತ್ತು ಎಂಸಿಜಿಯಲ್ಲಿ ನಡೆದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲ್ಲುವುದರೊಂದಿಗೆ, ಈಗಾಗಲೇ ಸರಣಿ ವಶಪಡಿಸಿಕೊಂಡಿದೆ. ಇದೀಗ ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. 1995ರಿಂದ ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ಇದುವರೆಗೂ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ.
ಈ ನಡುವೆ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸಿಡ್ನಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ. ಆದರೆ, 2025ರ ಚಾಂಪಿಯನ್ಸ್ ಟ್ರೋಫಿಯ ಆಯ್ಕೆಗೆ ತಾನು ಲಭ್ಯವಿರುವುದಾಗಿ 37 ವರ್ಷದ ಆಟಗಾರ ಹೇಳಿದ್ದಾರೆ.
ಏಕದಿನ ಸ್ವರೂಪದಲ್ಲಿ 6932 ರನ್ ಕಲೆ ಹಾಕಿರುವ ವಾರ್ನರ್ 22 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಮಾದರಿಯಲ್ಲಿ ವಾರ್ನರ್ ಆಸ್ಟ್ರೇಲಿಯದ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಮತ್ತೊಂದೆಡೆ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ 29 ಶತಕಗಳ ಬಳಿಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಸೀಸ್‌ನ ಎರಡನೇ ಆಟಗಾರನಾಗಿದ್ದಾರೆ.