ಸರಾಸರಿ ಆಟಗಾರರು ಸರಾಸರಿ ನೋಡುತ್ತಾರೆ; ವಿರಾಟ್ ಕೊಹ್ಲಿ ಹೊಗಳಿ ಬಾಬರ್ ಅಜಮ್ಗೆ ಟಾಂಗ್ ಕೊಟ್ಟ ಮೊಹಮ್ಮದ್ ರಿಜ್ವಾನ್
Mohammad Rizwan : ಮೊಹಮ್ಮದ್ ರಿಜ್ವಾನ್ ವೈಟ್-ಬಾಲ್ ಸ್ವರೂಪಗಳಲ್ಲಿ ತಮ್ಮ ಬ್ಯಾಟಿಂಗ್ ವಿಧಾನದ ಬಗ್ಗೆ ವಿವರವಾಗಿ ಮಾತನಾಡಿದ್ದು, ವಿರಾಟ್ ಕೊಹ್ಲಿ ಅವರ ಉದಾಹರಣೆಯನ್ನು ಕೊಟ್ಟು ಬಾಬರ್ ಅಜಮ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ (Mohammad Rizwan), ತಮ್ಮ ಬ್ಯಾಟಿಂಗ್ ವಿಧಾನದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಅದಕ್ಕಾಗಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರನ್ನು ಉಲ್ಲೇಖಿಸಿ ತಮ್ಮ ಸಹ ಆಟಗಾರ ಬಾಬರ್ ಅಜಮ್ (Babar Azam) ಅವರಿಗೆ ಚುಚ್ಚಿದ್ದಾರೆ. ರಿಜ್ವಾನ್ ತಮ್ಮ ಸ್ವಂತ ಬ್ಯಾಟಿಂಗ್ ತತ್ವಶಾಸ್ತ್ರವನ್ನು ವಿವರಿಸುವಾಗ ಭಾರತದ ಶ್ರೇಷ್ಠ ಆಟಗಾರನ ಉದಾಹರಣೆ ನೀಡಿದ್ದಾರೆ.
ಕ್ರಿಕ್ಬುಜ್ಗೆ ನೀಡಿದ ಸಂದರ್ಶನದಲ್ಲಿ ಏಕದಿನ ಮತ್ತು ಟಿ20ಐ ಪಂದ್ಯಗಳಲ್ಲಿ ಅವರ ಪಾತ್ರಗಳನ್ನು ಸಮತೋಲನಗೊಳಿಸುವ ಬಗ್ಗೆ ರಿಜ್ವಾನ್ ಅವರನ್ನು ಕೇಳಲಾಯಿತು. 50 ಓವರ್ಗಳ ಸ್ವರೂಪದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆದರೆ, ರಿಜ್ವಾನ್ ಟಿ20 ಗಳಲ್ಲಿ ಪಾಕಿಸ್ತಾನಕ್ಕಾಗಿ ಆರಂಭಿಕರಾಗಿ ಆಡುವ ವಿಕೆಟ್ ಕೀಪರ್-ಬ್ಯಾಟ್ಸ್ಮನ್, ತಮ್ಮ ತಂಡಕ್ಕೆ ಅಗತ್ಯವಿರುವ ರೀತಿಯಲ್ಲಿ ಮಾತ್ರ ಬ್ಯಾಟಿಂಗ್ ಮಾಡುವುದಾಗಿ ಹೇಳಿದ್ದಾರೆ.
ಅಗತ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸುತ್ತೇನೆ ಎಂದ ರಿಜ್ವಾನ್
ಎರಡು ಸ್ವರೂಪಗಳಲ್ಲಿ ಬ್ಯಾಟಿಂಗ್ ಸರಾಸರಿಗೆ ಹೆಚ್ಚು ಒತ್ತು ನೀಡುವುದಿಲ್ಲ. ತಂಡದ ಗೆಲುವಿಗೆ ಶ್ರಮಿಸುತ್ತೇನೆ ಎಂದು ಅವರು ಹೇಳಿದ್ದಾರೆ. ನೀವು ಪ್ರತಿನಿಧಿಸುತ್ತಿರುವ ತಂಡಗಳು ಯಾವ ಪಾತ್ರವನ್ನು ಕೇಳುತ್ತದೋ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸಬೇಕು. ಸಂದರ್ಭಕ್ಕೆ ತಕ್ಕಂತೆ ಆಡುತ್ತೇನೆ. ತಂಡವನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತೇನೆ. ಸರಾಸರಿಗೆ ಹೆಚ್ಚು ಒತ್ತು ನೀಡುವುದಿಲ್ಲ ಎಂದು ರಿಜ್ವಾನ್ ಹೇಳಿದ್ದಾರೆ.
ಕೊಹ್ಲಿಯನ್ನು ಹೊಗಳಿದ ವಿಕೆಟ್ ಕೀಪರ್
ಇದೇ ವೇಳೆ ವಿರಾಟ್ ಕೊಹ್ಲಿ ಅವರನ್ನು ಉಲ್ಲೇಖಿಸಿದ್ದಾರೆ. ಸರಾಸರಿಗೆ ಒತ್ತು ನೀಡುವ ಆಟಗಾರರು ಸರಾಸರಿ ಆಟಗಾರರು. ಯಾರಾದರೂ ಪ್ರದರ್ಶನ ನೀಡುತ್ತಿದ್ದರೆ, ಜನರು ನೋಡಲು ಅಂಕಿ-ಅಂಶಗಳಲ್ಲಿ ಇರುತ್ತದೆ. ಭಾರತದ ವಿರಾಟ್ ಕೊಹ್ಲಿ ಅವರು ತಮ್ಮ ಸರಾಸರಿಯನ್ನು ಹೆಚ್ಚಿಸುತ್ತಿದ್ದಾರೆ. ಆದರೆ ಅವರು ಅದರ ಮೇಲೆ ಗಮನ ಹರಿಸುತ್ತಿಲ್ಲ. ಏಕೆಂದರೆ ದೊಡ್ಡ ಆಟಗಾರರು ತಂಡ ಮತ್ತು ಪರಿಸ್ಥಿತಿಯನ್ನು ನೋಡುತ್ತಾರೆ ಎಂದು ಕಿಂಗ್ ಕೊಹ್ಲಿಯನ್ನು ಹೊಗಳಿ ಬಾಬರ್ಗೆ ಟಾಂಗ್ ಕೊಟ್ಟಿದ್ದಾರೆ.
ಇದು ಮೈಂಡ್ ಗೇಮ್
ತಂಡದ ಅವಶ್ಯಕತೆ ಏನು ಎಂಬುದರ ಮೇಲೆ ನನ್ನ ಗಮನ ಉಳಿದಿದೆ. ಬೋರ್ಡ್ ನೋಡಿ ಅದಕ್ಕೆ ತಕ್ಕಂತೆ ಆಡಿ ಎಂದು ತಂಡ ಹೇಳುತ್ತದೆ. ನನ್ನ ಸ್ವಂತ ಜೀವನದಲ್ಲಿಯೂ ನಾನು ಅದೇ ವಿಷಯವನ್ನು ಕಾಪಾಡಿಕೊಳ್ಳುತ್ತೇನೆ. ಆದರೆ ಅದು ಸುಲಭವಲ್ಲ. ಟಿ20ಯಲ್ಲಿ ಹೊಸ ಚೆಂಡಿನೊಂದಿಗೆ ಆಡುವಾಗ ಮತ್ತು ಏಕದಿನದಲ್ಲಿ ಚೆಂಡು ಸ್ವಲ್ಪ ಹಳೆಯದಾಗ 25 ಓವರ್ಗಳ ನಂತರ ಹೋಗಿ ಆಡುವುದು ಸುಲಭವಲ್ಲ. ಇದು ಮೈಂಡ್ ಗೇಮ್ ಎಂದು ರಿಜ್ವಾನ್ ಹೇಳಿದ್ದಾರೆ.
ಪಿಎಸ್ಎಲ್ನಲ್ಲಿ ರಿಜ್ವಾನ್ ಭಾಗಿ
ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ನ್ಯೂಜಿಲೆಂಡ್ನಲ್ಲಿ ನಡೆದ ಟಿ20ಐ ಸರಣಿಯಲ್ಲಿ ಕೊನೆಯ ಬಾರಿಗೆ ಆಡಿದರು. ಈ ಸರಣಿಯಲ್ಲಿ ಪ್ರವಾಸಿ ತಂಡವಾದ ಪಾಕ್ 4-1 ಅಂತರದಿಂದ ಸರಣಿಯನ್ನು ಸೋಲು ಕಂಡರು. ಮೇ ವರೆಗೆ ಪಾಕಿಸ್ತಾನಕ್ಕೆ ಬೇರೆ ಯಾವುದೇ ಪಂದ್ಯಗಳು ನಿಗದಿಯಾಗಿಲ್ಲವಾದರೂ ರಿಜ್ವಾನ್ ಸೇರಿದಂತೆ ಸಹ ಆಟಗಾರರು ಫೆ. 17ರಿಂದ ಪ್ರಾರಂಭವಾಗುವ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗವಹಿಸಲಿದ್ದಾರೆ.
3, 4ನೇ ಟೆಸ್ಟ್ಗೂ ಕೊಹ್ಲಿ ಅಲಭ್ಯ?
ಏತನ್ಮಧ್ಯೆ ವಿರಾಟ್ ಕೊಹ್ಲಿ ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯ ನಂತರ ಮೈದಾನದಿಂದ ದೂರವಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್ಗಳಿಗೆ ವೈಯಕ್ತಿಕ ಕಾರಣಗಳಿಂದಾಗಿ ಅವರು ಅಲಭ್ಯರಾಗಿದ್ದರು. ಸರಣಿಯ ಮೂರನೇ ಮತ್ತು ನಾಲ್ಕನೇ ಟೆಸ್ಟ್ಗಳಿಂದ ಕೊಹ್ಲಿ ಹೊರಗುಳಿಯಲಿದ್ದಾರೆ ಎಂದು ವರದಿಗಳು ತಿಳಿಸಿವೆ.