ಪಂಡಿತರೇ ನೀವೆಷ್ಟು ಶತಕ ಗಳಿಸಿದ್ದೀರಿ; ವಿರಾಟ್ ಕೊಹ್ಲಿ ಟೀಕಿಸಿದವರ ವಿರುದ್ಧ ಸಿಡಿದೆದ್ದ ಎಬಿ ಡಿವಿಲಿಯರ್ಸ್
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂಡಿತರೇ ನೀವೆಷ್ಟು ಶತಕ ಗಳಿಸಿದ್ದೀರಿ; ವಿರಾಟ್ ಕೊಹ್ಲಿ ಟೀಕಿಸಿದವರ ವಿರುದ್ಧ ಸಿಡಿದೆದ್ದ ಎಬಿ ಡಿವಿಲಿಯರ್ಸ್

ಪಂಡಿತರೇ ನೀವೆಷ್ಟು ಶತಕ ಗಳಿಸಿದ್ದೀರಿ; ವಿರಾಟ್ ಕೊಹ್ಲಿ ಟೀಕಿಸಿದವರ ವಿರುದ್ಧ ಸಿಡಿದೆದ್ದ ಎಬಿ ಡಿವಿಲಿಯರ್ಸ್

AB de Villiers on Virat Kohli : ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಟೀಕಿಸಿದವರ ವಿರುದ್ಧ ಆರ್​​ಸಿಬಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸಿಡಿದೆದ್ದಿದ್ದಾರೆ.

ಪಂಡಿತರೇ ನೀವೆಷ್ಟು ಶತಕ ಗಳಿಸಿದ್ದೀರಿ; ವಿರಾಟ್ ಕೊಹ್ಲಿ ಟೀಕಿಸಿದವರ ವಿರುದ್ಧ ಸಿಡಿದೆದ್ದ ಎಬಿ ಡಿವಿಲಿಯರ್ಸ್
ಪಂಡಿತರೇ ನೀವೆಷ್ಟು ಶತಕ ಗಳಿಸಿದ್ದೀರಿ; ವಿರಾಟ್ ಕೊಹ್ಲಿ ಟೀಕಿಸಿದವರ ವಿರುದ್ಧ ಸಿಡಿದೆದ್ದ ಎಬಿ ಡಿವಿಲಿಯರ್ಸ್

ಐಪಿಎಲ್ 2024ರಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತು ಅವರ ಸ್ಟ್ರೈಕ್ ರೇಟ್ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. 71ರ ಸರಾಸರಿಯಲ್ಲಿ 500 ರನ್ ಗಳಿಸಿರುವ ಕೊಹ್ಲಿ, 147ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಾಜಿ ನಾಯಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಕೊಹ್ಲಿ ಬೆಂಬಲಕ್ಕೆ ಗೆಳೆಯ ಎಬಿ ಡಿವಿಲಿಯರ್ಸ್ (AB de Villiers) ನಿಂತಿದ್ದಾರೆ. 2008ರಿಂದ ಆರ್​​ಸಿಬಿ ಪರವೇ ಆಡುತ್ತಿರುವ ಕೊಹ್ಲಿ, ಎಸ್​​ಆರ್​ಹೆಚ್ ವಿರುದ್ಧ 43 ಎಸೆತಗಳಲ್ಲಿ 51 ರನ್ ಗಳಿಸಿದ ನಂತರ ಸ್ಟ್ರೈಕ್ ರೇಟ್ ಚರ್ಚೆ ಭುಗಿಲೆದ್ದಿತು.

ವಿವಿಧ ಫ್ರಾಂಚೈಸಿಗಳನ್ನು ಪ್ರತಿನಿಧಿಸುವ ಡೈನಮಿಕ್ ಓಪನರ್​​ಗಳು ವಿಭಿನ್ನ ಪಾತ್ರವನ್ನು ನಿರ್ವಹಿಸುವ ಮೂಲಕ ಸೆಳೆದಿದ್ದಾರೆ. ಸನ್​ರೈಸರ್ಸ್​ ಹೈದರಾಬಾದ್​ನ ಟ್ರಾವಿಸ್ ಹೆಡ್, ಡೆಲ್ಲಿ ಕ್ಯಾಪಿಟಲ್ಸ್​ನ ಜೇಕ್​ಫ್ರೇಸರ್​-ಮೆಕ್​ಗುರ್ಕ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ನ ಸುನಿಲ್ ನರೇನ್ ಅವರ ಬ್ಯಾಟಿಂಗ್​ ವಿಧಾನವು ಆಧುನಿಕ ಟಿ20 ಕ್ರಿಕೆಟ್​​ನಲ್ಲಿ ಬ್ಯಾಟಿಂಗ್ ಹೇಗೆ ಮಾಡಬೇಕೆಂಬುದಕ್ಕೆ ತಾಜಾ ಉದಾಹರಣೆಯಾಗಿದೆ. ಆದರೆ ಕೊಹ್ಲಿ ಅದಕ್ಕೆ ತದ್ವಿರುದ್ದವಾಗಿದ್ದಾರೆ ಎಂಬುದು ಹಲವರ ವಾದ.

ಈ ಟೀಕೆಗಳನ್ನು ಎದುರಿಸಿದ ಮರು ಪಂದ್ಯದಲ್ಲೇ ಗುಜರಾತ್ ಟೈಟಾನ್ಸ್ ವಿರುದ್ಧದ ಕೊಹ್ಲಿ ಅಜೇಯ 70 ರನ್ ಗಳಿಸಿದರು. ಅದು ಕೂಡ 159ರ ಸ್ಟ್ರೈಕ್​ರೇಟ್​ನಲ್ಲಿ. ಆರ್​​ಸಿಬಿ ಈ ಪಂದ್ಯದಲ್ಲಿ 16 ಓವರ್​ಗಳಲ್ಲೇ 200 ಗುರಿ ಮುಟ್ಟಿತು. ಪಂದ್ಯದ ನಂತರ ತನ್ನ ಮೇಲೆ ಕೇಳಿ ಬಂದಿರುವ ಟೀಕೆಗಳ ವಿರುದ್ಧ ಕೊಹ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕಾಮೆಂಟರಿ ಬಾಕ್ಸ್​​​ನಲ್ಲಿ ಕೂತು ನನ್ನ ಸ್ಟ್ರೈಕ್​ರೇಟ್​ ಬಗ್ಗೆ ಮಾತನಾಡುವುದು ಸುಲಭ ಎಂದು ಹೇಳಿದ್ದರು. ಇದೀಗ ವಿರಾಟ್ ಬೆಂಬಲಕ್ಕೆ ನಿಂತ ಡಿವಿಲಿಯರ್ಸ್, ಕೊಹ್ಲಿಯತ್ತ ಬೆರಳು ತೋರಿಸುವವರ ಮೇಲೆ ಗುಂಡು ಹಾರಿಸಿದ್ದಾರೆ.

ಕೊಹ್ಲಿ ಟೀಕಿಸಿದವರ ವಿರುದ್ಧ ಸಿಡಿದೆದ್ದ ಎಬಿಡಿ

ವಿರಾಟ್ ಕೊಹ್ಲಿ ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದು ಬಹಳ ಸಮಯದಿಂದ ನಡೆಯುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ತುಂಬಾ ನಿರಾಸೆಯಾಗಿದೆ. ಈ ವ್ಯಕ್ತಿ ಕ್ರಿಕೆಟ್ ಆಟವನ್ನು ಆಡಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ಐಪಿಎಲ್​ನಲ್ಲಿ ಅವರು ಅದ್ಭುತಗಳನ್ನು ಸೃಷ್ಟಿಸಿದ್ದಾರೆ. ಅವರು ಆರ್​​ಸಿಬಿ ಪರ ಒಂದು ನಿರ್ದಿಷ್ಟ ಪಾತ್ರವನ್ನು ವಹಿಸುತ್ತಿದ್ದಾರೆ. ನಿಮಗೆ ನಿಜವಾಗಿಯೂ ಆಟದ ಜ್ಞಾನವಿಲ್ಲದೇ ಇದ್ದಾಗ ಈ ವ್ಯಕ್ತಿಯನ್ನು ಟೀಕಿಸುವ ಈ ಡೇಟಾ-ಚಾಲಿತ ಪಂಡಿತರನ್ನು ನಾವು ಹೊಂದಿದ್ದೇವೆ. ಪದೆಪದೇ ಟೀಕಿಸುವ ನೀವು ಎಷ್ಟು ಕ್ರಿಕೆಟ್ ಪಂದ್ಯಗಳನ್ನಾಡಿದ್ದೀರಿ? ನೀವು ಎಷ್ಟು ಐಪಿಎಲ್ ಶತಕಗಳನ್ನು ಗಳಿಸಿದ್ದೀರಿ? ಎಂದು ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ.

ಐಪಿಎಲ್​ನಲ್ಲಿ ಇನ್ನೂ ನಾಲ್ಕು ಪಂದ್ಯಗಳು ಬಾಕಿ ಇರುವಾಗ ಕೊಹ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ರನ್ ಕಲೆ ಹಾಕುವ ಹಾದಿಯಲ್ಲಿದ್ದಾರೆ. 2023ರಲ್ಲಿ 53.25 ಸರಾಸರಿಯಲ್ಲಿ 639 ರನ್ ಗಳಿಸಿದ್ದರು. ಆರ್​​ಸಿಬಿ ಮಾಜಿ ಆಟಗಾರ ಡಿವಿಲಿಯರ್ಸ್ ವಿರಾಟ್ ಟೀಕಿಸಿದವರ ಬಾಯಿ ಮುಚ್ಚಿಸಲು ಬಹಳ ಆಸಕ್ತಿದಾಯಕ ಅಂಕಿ-ಅಂಶವನ್ನು ಉಲ್ಲೇಖಿಸಿದ್ದಾರೆ. 2016ರಲ್ಲಿ ಕೊಹ್ಲಿ 973 ರನ್ ಗಳಿಸಿದ್ದರು. ಐಪಿಎಲ್​ನ ಒಂದೇ ಸೀಸನ್​ನಲ್ಲಿ ಯಾವುದೇ ಆಟಗಾರ ಗಳಿಸಿದ ಅತಿ ಹೆಚ್ಚು ರನ್ ಸ್ಕೋರ್. ಅವರ ಸ್ಟ್ರೈಕ್ ರೇಟ್ 152.03 ಆಗಿತ್ತು. ತಾವು ಏನು ಮಾಡುತ್ತಿದ್ದೇವೆಯೋ ಅದನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ ಎಂದು ಟೀಕಾಕಾರರ ಬಾಯ್ಮುಚ್ಚಿಸಿದ್ದಾರೆ.

ವಿರಾಟ್ ನಿಮ್ಮಂತೆಯೇ ನೀವು ಆಡಿ ಎಂದ ಎಬಿಡಿ

ತಂಡಕ್ಕಾಗಿ ಅವರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಒಂದು ನಿರ್ದಿಷ್ಟ ರೀತಿಯಲ್ಲಿ ಆಡುವ ಮೂಲಕ ತಂಡಕ್ಕೆ ಅನೇಕ ಗೆಲುವು ತಂದುಕೊಟ್ಟಿದ್ದಾರೆ. ಕೊಹ್ಲಿ ಒಂದು ಸೂತ್ರ ಹೊಂದಿದ್ದಾರೆ. ಅದರಂತೆ ಅದರ ಸುತ್ತಲೂ ಕಾರ್ಯತಂತ್ರ ರೂಪಿಸುತ್ತಾರೆ. ಈ ವರ್ಷ ಅವರ ಸ್ಟ್ರೈಕ್ ರೇಟ್ ಅದ್ಭುತವಾಗಿದೆ. ಆದರೂ ಈ ಟೀಕೆಗಳು ಎಲ್ಲಿಂದ ಬರುತ್ತವೋ ಎಂದು ನನಗೆ ಗೊತ್ತಿಲ್ಲ. ವಿರಾಟ್, ನಿಮ್ಮಂತೆಯೇ ಆಡುವುದನ್ನು ಮುಂದುವರಿಸಿ' ಎಂದು ನಾನು ಹೇಳಬಲ್ಲೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ 3ನೇ ಕ್ರಮಾಂಕಕ್ಕೆ ಸೂಕ್ತ ಎಂದು ನಾನು ಈ ಹಿಂದೆ ಹೇಳಿದ್ದೇನೆ. ನಾನು ಇನ್ನೂ ನಂಬುತ್ತೇನೆ. ಆದರೆ, ಆರಂಭಿಕರಾಗಿ ಕಣಕ್ಕಿಳಿಯಲು ಇಷ್ಟಪಡುತ್ತಾರೆ ಎಂದು ನನಗೆ ತಿಳಿದಿದೆ. ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಫಾಫ್ ಡು ಪ್ಲೆಸಿಸ್ ಮತ್ತು ವಿಲ್ ಜಾಕ್ಸ್​ ಅವರು ಇನ್ನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಟ್ಟರೆ, ಅದಕ್ಕೆ ಅನುಗುಣವಾಗಿ ಇನ್ನಿಂಗ್ಸ್ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಎಬಿಡಿ ಹೇಳಿದ್ದಾರೆ.

Whats_app_banner