ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್; ರೋಹಿತ್ ಶರ್ಮಾ ವಿಶ್ವಾದಾಖಲೆ ಮುರಿಯಲು ಬೇಕು ಕೇವಲ 40 ರನ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್; ರೋಹಿತ್ ಶರ್ಮಾ ವಿಶ್ವಾದಾಖಲೆ ಮುರಿಯಲು ಬೇಕು ಕೇವಲ 40 ರನ್

ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್; ರೋಹಿತ್ ಶರ್ಮಾ ವಿಶ್ವಾದಾಖಲೆ ಮುರಿಯಲು ಬೇಕು ಕೇವಲ 40 ರನ್

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್‌ ಬಾಬರ್ ಅಜಮ್ 28 ಎಸೆತಗಳಲ್ಲಿ 41 ರನ್ ಗಳಿಸಿದರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು. ಈ ವೇಳೆ ವಿರಾಟ್‌ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್; ರೋಹಿತ್ ದಾಖಲೆ ಮುರಿಯಲು ಬೇಕು ಕೇವಲ 40 ರನ್
ವಿರಾಟ್ ಕೊಹ್ಲಿ ಹಿಂದಿಕ್ಕಿದ ಬಾಬರ್ ಅಜಮ್; ರೋಹಿತ್ ದಾಖಲೆ ಮುರಿಯಲು ಬೇಕು ಕೇವಲ 40 ರನ್ (AFP)

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಪಾಕಿಸ್ತಾನ ವೈಟ್‌ವಾಶ್‌ ಅನುಭವಿಸಿದೆ. ಮೂರನೇ ಟಿ20 ಪಂದ್ಯದಲ್ಲಿ ಆತಿಥೇಯ ಆಸೀಸ್‌ 7 ವಿಕೆಟ್‌ಗಳ ಜಯ ಸಾಧಿಸಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ (Babar Azam), ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಲಯಕ್ಕೆ ಮರಳಿದರು. ಆದರೂ ತಂಡದ ಗೆಲುವು ಸಾಧ್ಯವಾಗಲಿಲ್ಲ. ಪಂದ್ಯದಲ್ಲಿ 28 ಎಸೆತಗಳಲ್ಲಿ 41 ರನ್ ಗಳಿಸಿದ ಬಾಬರ್‌, ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು. ಇದೇ ವೇಳೆ ಟಿ20 ಸ್ವರೂಪದಲ್ಲಿ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಗೆ ಸಮೀಪಿಸಿದರು.

ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಬಾಬರ್ ಕೇವಲ ಮೂರು ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ಮತ್ತೆ ಲಯ ಕಂಡುಕೊಂಡು 41 ರನ್ ಗಳಿಸಿದರು. ಅರ್ಧಶತಕದತ್ತ ಮುನ್ನುಗ್ಗುತ್ತಿದ್ದಾಗ 13ನೇ ಓವರ್‌ನಲ್ಲಿ ಆಡಮ್ ಜಂಪಾ ಎಸೆತದಲ್ಲಿ ಔಟಾದರು.

ಅಷ್ಟರಲ್ಲೇ ಬಾಬರ್‌ ಬ್ಯಾಟ್‌ನಿಂದ ದಾಖಲೆಯೊಂದು ನಿರ್ಮಾಣವಾಗಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಬಾಬರ್ ಭಾರತದ ಮಾಜಿ ನಾಯಕ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. 119 ಇನ್ನಿಂಗ್ಸ್‌ಗಲ್ಲಿ 4192 ರನ್‌ ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 125 ಪಂದ್ಯಗಳಲ್ಲಿ 4188 ರನ್ ಗಳಿಸಿರುವ ಕೊಹ್ಲಿ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇದೇ ವೇಳೆ ಬಾಬರ್ ಈಗ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಹಿಂದಿಕ್ಕುವ ಹಂತದಲ್ಲಿದ್ದಾರೆ. 159 ಟಿ20 ಪಂದ್ಯಗಳಲ್ಲಿ 4231 ರನ್ ಗಳಿಸಿರುವ ರೋಹಿತ್ ಶರ್ಮಾ, ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಸದ್ಯ ಮೊದಲ ಸ್ಥಾನದಲ್ಲಿದ್ದಾರೆ. ಹಿಟ್‌ಮ್ಯಾನ್‌ ಹಿಂದಿಕ್ಕಲು ಬಾಬರ್‌ಗೆ ಕೇವಲ 40 ರನ್ ಅಗತ್ಯವಿದೆ. ಹಿಟ್‌ಮ್ಯಾನ್‌ ಮತ್ತು ಕೊಹ್ಲಿ ಈಗಾಗಲೇ ಚುಟುಕು ಸ್ವರೂಪಕ್ಕೆ ವಿದಾಯ ಹೇಳಿದ್ದು, ಬಾಬರ್‌ ಶೀಘ್ರದಲ್ಲೇ ಈ ದಾಖಲೆ ಮುರಿಯುವ ವಿಶ್ವಾಸದಲ್ಲಿದ್ದಾರೆ.

ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ಆಸೀಸ್‌

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕ್‌, 18.1 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯ್ತು. ತಂಡದ ಪರ ಬಾಬರ್ ಮಾತ್ರ ಕೆಲಕಾಲ ಕ್ರೀಸ್‌ಕಚ್ಚಿ ಆಡಿದರು. ಆರೋನ್ ಹಾರ್ಡಿ 21 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಪೆನ್ಸರ್ ಜಾನ್ಸನ್ ಮತ್ತು ಜಂಪಾ ತಲಾ 2 ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ಆಸೀಸ್‌ ಪರ ಮಾರ್ಕಸ್ ಸ್ಟೋಯ್ನಿಸ್ 27 ಎಸೆತಗಳಲ್ಲಿ ಅಜೇಯ 61 ರನ್ ಗಳಿಸಿ ಅಬ್ಬರಿಸಿದರು. ಆ ಮೂಲಕ ಆಸೀಸ್‌ ಮೂರನೇ ಟಿ20 ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು. ಸ್ಟೋಯ್ನಿಸ್ ಸ್ಫೋಟಕ ಬ್ಯಾಟಿಂಗ್‌ನಲ್ಲಿ ತಲಾ ಐದು ಸಿಕ್ಸರ್ ಮತ್ತು ಬೌಂಡರಿಗಳು ಸೇರಿದ್ದವು.

ಚುಟುಕು ಸರಣಿಗೂ ಮೊದಲು ನಡೆದಿದ್ದ ಏಕದಿನ ಸರಣಿಯನ್ನು ಪಾಕಿಸ್ತಾನ 2-1ರಿಂದ ಗೆದ್ದುಕೊಂಡಿತ್ತು. ಆದರೆ, ಈಗ ಟಿ20 ಸರಣಿ ಆತಿಥೇಯ ಆಸೀಸ್‌ ಪಾಲಾಗಿದೆ.

Whats_app_banner