ಕೊನೆಗೂ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ ಪ್ರಕಟ; ಸೈಮ್ ಅಯೂಬ್ ಇಲ್ಲ, ಬಾಬರ್ ಅಜಮ್‌ಗೆ ಹೊಸ ಪಾತ್ರ
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ ಕೊನೆಗೂ ಪ್ರಕಟಗೊಂಡಿದೆ. ಫಖರ್ ಜಮಾನ್ ತಂಡಕ್ಕೆ ಮರಳಿದರೆ, ಸೈಮ್ ಅಯೂಬ್ ಅಲಭ್ಯರಾಗಿದ್ದಾರೆ. ಇದೇ ವೇಳೆ ಬಾಬರ್ ಅಜಮ್‌ಗೆ ಹೊಸ ಪಾತ್ರ ನೀಡಲಾಗಿದೆ.

ಮುಂಬರುವ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೊನೆಗೂ ಪಾಕಿಸ್ತಾನ ತಂಡವನ್ನು ಪ್ರಕಟಿಸಿದೆ. ಎಲ್ಲಾ ತಂಡಗಳು ಈ ಹಿಂದೆಯೇ ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಿದ್ದವು. ಆದರೆ ಪಾಕಿಸ್ತಾನ ಮಾತ್ರ ಪಂದ್ಯಾವಳಿಗೆ ಕೆಲವೇ ದಿನ ಬಾಕಿ ಉಳಿದಿರುವಾಗ ತಂಡವನ್ನು ಘೋಷಿಸಿದೆ. ಶುಕ್ರವಾರ (ಜನವರಿ 31) 15 ಸದಸ್ಯರ ತಂಡವನ್ನು ಪಿಸಿಬಿ ಪ್ರಕಟಿಸಿದ್ದು, ಮೊಹಮ್ಮದ್ ರಿಜ್ವಾನ್ ತಂಡವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ ಸಲ್ಮಾನ್ ಅಲಿ ಆಘಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. 2017ರಲ್ಲಿ ಓವಲ್‌ನಲ್ಲಿ ಕೊನೆಯ ಪ್ರಶಸ್ತಿ ಗೆದ್ದ ತಂಡದಿಂದ ಬಾಬರ್ ಅಜಮ್, ಫಹೀಮ್ ಅಶ್ರಫ್ ಮತ್ತು ಫಖರ್ ಜಮಾನ್ ಮಾತ್ರ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿ ಆಡಿದ 15 ಆಟಗಾರರ ತಂಡದಲ್ಲಿ ಪಿಸಿಬಿ ನಾಲ್ಕು ಬದಲಾವಣೆಗಳನ್ನು ಮಾಡಿದೆ. ಅಬ್ದುಲ್ಲಾ ಶಫೀಕ್, ಮುಹಮ್ಮದ್ ಇರ್ಫಾನ್ ಖಾನ್, ಸೈಮ್ ಅಯೂಬ್ ಮತ್ತು ಸುಫ್ಯಾನ್ ಮೊಕಿಮ್ ಬದಲಿಗೆ ಫಹೀಮ್ ಅಶ್ರಫ್, ಫಖರ್ ಜಮಾನ್, ಖುಷ್ದಿಲ್ ಶಾ ಮತ್ತು ಸೌದ್ ಶಕೀಲ್ ಸ್ಥಾನ ಪಡೆದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿರುವ ಆತಿಥೇಯ ದೇಶವು ತಂಡದಲ್ಲಿ ನಾಲ್ವರು ವೇಗಿಗಳನ್ನು ಹೆಸರಿಸಿದೆ. ಅವರೇ ಹ್ಯಾರಿಸ್ ರೌಫ್, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ಹಸ್ನೈನ್ ಮತ್ತು ನಸೀಮ್ ಶಾ. ಈ ಬಾರಿ ಅಬ್ರಾರ್ ಅಹ್ಮದ್ ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ.
ತಂಡಕ್ಕೆ ಮರಳಿದ ಫಖರ್ ಜಮಾನ್
ಭಾರತ ವಿರುದ್ಧದ ಚಾಂಪಿಯನ್ಸ್ ಟ್ರೋಫಿ 2017ರ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಆರಂಭಿಕ ಆಟಗಾರ ಫಖರ್ ಜಮಾನ್, ಜೂನ್ 2024ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಗಾಯ ಮತ್ತು ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಇದೀಗ ಮತ್ತೆ ತಂಡಕ್ಕೆ ಮರಳಿದ್ದಾರೆ.
ಪಾಕಿಸ್ತಾನ ವಿರುದ್ಧದ ಕೇಪ್‌ಟೌನ್ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಸೈಮ್ ಅಯೂಬ್, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಮುಂಬರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೂ ಮುನ್ನ ಲಾಹೋರ್ ಮತ್ತು ಕರಾಚಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾವನ್ನು ತಂಡಗಳನ್ನು ಒಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲೂ ಇದೇ ತಂಡ ಕಾಣಿಸಿಕೊಳ್ಳಲಿದೆ.
ಬಾಬರ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಫಖರ್ ಜಮಾನ್ ಅವರೊಂದಿಗೆ ಬಾಬರ್ ಅಜಮ್ ಪಾಕಿಸ್ತಾನ ಪರ ಇನ್ನಿಂಗ್ಸ್ ಆರಂಭಿಸಬಹುದು ಎಂದು ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯ ಅಸಾದ್ ಶಫೀಕ್ ಬಹಿರಂಗಪಡಿಸಿದ್ದಾರೆ. “ಪರಿಸ್ಥಿತಿ, ಎದುರಾಳಿ ಮತ್ತು ಪಂದ್ಯದ ಕಾರ್ಯತಂತ್ರದ ಆಧಾರದ ಮೇಲೆ ಫಖರ್ ಅವರೊಂದಿಗೆ ಬಾಬರ್ ಅಜಮ್ ಅಥವಾ ಸೌದ್ ಶಕೀಲ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಇಬ್ಬರೂ ಆಟಗಾರರು ಅಗ್ರ ಕ್ರಮಾಂಕದಲ್ಲಿ ಹೆಚ್ಚು ಸಮರ್ಥರಾಗಿದ್ದಾರೆ,” ಎಂದು ಅಸಾದ್ ಶಫೀಕ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನ ತಂಡವು ತನ್ನ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಫೆಬ್ರುವರಿ 19ರಂದು ಟೂರ್ನಿಯ ಉದ್ಘಾಟನಾ ದಿನದಂದೇ ಆರಂಭಿಸಲಿದೆ. ಕರಾಚಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ತಂಡ ಆಡಲಿದೆ. ಫೆಬ್ರುವರಿ 23ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ
ಬಾಬರ್ ಅಜಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಷ್ದಿಲ್ ಶಾ, ಸಲ್ಮಾನ್ ಅಲಿ ಆಘಾ, ಮೊಹಮ್ಮದ್ ರಿಜ್ವಾನ್ (ನಾಯಕ), ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಮೊಹಮ್ಮದ್ ಹಸ್ನೈನ್.
