ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕತ್ವ ಹೈಡ್ರಾಮಾ; ಶಾಹೀನ್ ಅಫ್ರಿದಿಗೆ ಗೇಟ್ ಪಾಸ್, ಮತ್ತೆ ಬಾಬರ್ ಅಜಮ್ ಮರು ನೇಮಕ
ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಆರಂಭಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನ ಬದಲಾವಣೆಯಾಗಿದೆ. ಮಾಜಿ ನಾಯಕ ಬಾಬರ್ ಅಜಮ್ ಅವರನ್ನೇ ಮತ್ತೆ ನಾಯಕನ್ನನಾಗಿ ಪಿಸಿಬಿ ನೇಮಿಸಿದೆ. ಇದರೊಂದಿಗೆ ಶಾಹೀನ್ ಅಫ್ರಿದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.
ಭಾರತದಲ್ಲಿ 2023ರಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ತಂಡದ ನಾಯಕನಾಗಿದ್ದ ಬಾಬರ್ ಅಜಮ್ (Babar Azam) ಅವರನ್ನು ಎಲ್ಲಾ ಸ್ವರೂಪದ ನಾಯಕತ್ವದಿಂದ ಕೆಳಗಿಳಿಸಲಾಯ್ತು. ಇದಾದ ನಾಲ್ಕು ತಿಂಗಳ ನಂತರ, ಮತ್ತೆ ಬಾಬರ್ ಅವರನ್ನೇ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿ ಮರು ನೇಮಕ ಮಾಡಲಾಗಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲು ಎರಡು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಅದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾರ್ಚ್ 31ರ ಭಾನುವಾರ ನಾಯಕತ್ವ ಬದಲಾವಣೆಯ ನಿರ್ಧಾರವನ್ನು ಪ್ರಕಟಿಸಿದೆ.
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡವು ನಾಕೌಟ್ ಹಂತವನ್ನು ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಾಬರ್ ನಾಯಕತ್ವದಿಂದ ಕೆಳಗಿಳಿದರು. ಆ ಬಳಿಕ ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರನ್ನು ಪಾಕಿಸ್ತಾನ ಟಿ20 ತಂಡದ ನಾಯಕನಾಗಿ ನೇಮಿಸಲಾಯ್ತು. ಇದೇ ವೇಳೆ ಶಾನ್ ಮಸೂದ್ ಅವರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ಹೆಸರಿಸಲಾಯಿತು. ಈ ಬದಲಾವಣೆಯಿಂದಲೂ ಪಿಸಿಬಿಗೆ ಯಶಸ್ಸು ಸಿಗಲಿಲ್ಲ.
ನೂತನ ನಾಯಕ ಅಫ್ರಿದಿ ನೇತೃತ್ವದಲ್ಲಿ ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದು, 1-4 ಅಂತರದಿಂದ ಸರಣಿ ಸೋತಿತು. ಅತ್ತ ಅಫ್ರಿದಿ ನಾಯಕತ್ವದ ಲಾಹೋರ್ ಖಲಂದರ್ಸ್ ತಂಡವು ಪಾಕಿಸ್ತಾನ ಸೂಪರ್ ಲೀಗ್‌ನಲ್ಲೂ ಕಳಪೆ ಪ್ರದರ್ಶನ ನೀಡಿತು. ಆಡಿದ ಹತ್ತು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸಿತ್ತು. ಅಫ್ರಿದಿ ಅವರ ಕಳಪೆ ನಾಯಕತ್ವದಿಂದಾಗಿ ರಾಷ್ಟ್ರೀಯ ತಂಡದ ನಾಯಕತ್ವಕ್ಕೂ ಕುತ್ತು ಬಿದ್ದಿತು.
ಇದನ್ನೂ ಓದಿ | ಫೇರ್‌ಪ್ಲೇ ಅಲ್ಲ, ಅವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು: ವಿರಾಟ್-ಗಂಭೀರ್ ಅಪ್ಪುಗೆಗೆ ಗವಾಸ್ಕರ್, ರವಿಶಾಸ್ತ್ರಿ ಹಾಸ್ಯಚಟಾಕಿ
ಇದೀಗ ಪಿಸಿಬಿ ಆಯ್ಕೆ ಸಮಿತಿಯ ಸರ್ವಾನುಮತದ ಶಿಫಾರಸ್ಸಿನ ಮೇರೆಗೆ, ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಬಾಬರ್ ಅಜಮ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ವೈಟ್ ಬಾಲ್ ತಂಡದ ನಾಯಕರನ್ನಾಗಿ ನೇಮಿಸಿದ್ದಾರೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಬಾಬರ್ ಅಜಮ್ ಮುಂದೆ ಸಾಲು ಸಾಲು ಸವಾಲು
ಇದೀಗ ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನವು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಆ ಬಳಿಕ ಇಂಗ್ಲೆಂಡ್ ಪ್ರವಾಸ ಕೈಗೊಂಡು ನಾಲ್ಕು ಪಂದ್ಯಗಳ ಟಿ20 ಸರಣಿ ಆಡಲಿದೆ.
ಟಿ20 ವಿಶ್ವಕಪ್‌ನಲ್ಲಿ ಬಾಬರ್‌ಗೆ ಅಗ್ನಿಪರೀಕ್ಷೆ
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಬರ್ ಪಡೆಯು ಮೊದಲ ವಿಶ್ವಕಪ್ ಪಂದ್ಯವನ್ನು ಜೂನ್ 6ರಂದು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ಆಡಲಿದ್ದು, ಯುಎಸ್ಎ ಪಾಕ್‌ನ ಮೊದಲ ಎದುರಾಳಿಯಾಗಿದೆ. ಆ ಬಳಿಕ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸಲಿದೆ. ಪಾಕ್‌ನೊಂದಿಗೆ ಐರ್ಲೆಂಡ್ ಮತ್ತು ಕೆನಡಾ ತಂಡಗಳು ಎ ಗುಂಪಿನಲ್ಲಿವೆ.