ದಯವಿಟ್ಟು ನನ್ನನ್ನು ಕಿಂಗ್-ಶಿಂಗ್ ಅಂತೆಲ್ಲಾ ಕರೆಯಬೇಡ್ರಪ್ಪ; ಬಾಬರ್ ಅಜಮ್ ವಿಶೇಷ ಮನವಿ, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ದಯವಿಟ್ಟು ನನ್ನನ್ನು ಕಿಂಗ್-ಶಿಂಗ್ ಅಂತೆಲ್ಲಾ ಕರೆಯಬೇಡ್ರಪ್ಪ; ಬಾಬರ್ ಅಜಮ್ ವಿಶೇಷ ಮನವಿ, ವಿಡಿಯೋ

ದಯವಿಟ್ಟು ನನ್ನನ್ನು ಕಿಂಗ್-ಶಿಂಗ್ ಅಂತೆಲ್ಲಾ ಕರೆಯಬೇಡ್ರಪ್ಪ; ಬಾಬರ್ ಅಜಮ್ ವಿಶೇಷ ಮನವಿ, ವಿಡಿಯೋ

Babar Azam: ನನ್ನನ್ನು ಕಿಂಗ್-ಶಿಂಗ್ ಅಂತೆಲ್ಲಾ ಕರೆಯಬೇಡಿ ಎಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರು ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ವಿಶೇಷ ಮನವಿ ಮಾಡಿದ್ದಾರೆ.

ದಯವಿಟ್ಟು ನನ್ನನ್ನು ಕಿಂಗ್-ಶಿಂಗ್ ಅಂತೆಲ್ಲಾ ಕರೆಯಬೇಡ್ರಪ್ಪ; ಬಾಬರ್ ಅಜಮ್ ವಿಶೇಷ ಮನವಿ, ವಿಡಿಯೋ
ದಯವಿಟ್ಟು ನನ್ನನ್ನು ಕಿಂಗ್-ಶಿಂಗ್ ಅಂತೆಲ್ಲಾ ಕರೆಯಬೇಡ್ರಪ್ಪ; ಬಾಬರ್ ಅಜಮ್ ವಿಶೇಷ ಮನವಿ, ವಿಡಿಯೋ (AFP)

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19ರಿಂದ ಪಾಕಿಸ್ತಾನ-ಯುಎಇ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಆದರೆ ಇದಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ (Babar Azam) ಅವರು ಪಾಕಿಸ್ತಾನಿ ಮಾಧ್ಯಮ ಮತ್ತು ಅಭಿಮಾನಿಗಳ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಭಾರತದಲ್ಲಿ ವಿರಾಟ್ ಕೊಹ್ಲಿ ಅವರನ್ನು ಕಿಂಗ್ ಎಂದು ಕರೆಯುವಂತೆಯೇ ಪಾಕಿಸ್ತಾನದಲ್ಲಿ ಬಾಬರ್​​ ಅವರನ್ನೂ ಅದೇ ರೀತಿ ಕರೆಯುತ್ತಾರೆ. ಆದರೀಗ ತನ್ನನ್ನು ಕಿಂಗ್ (ರಾಜ) ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ. ಅಭಿಮಾನಿಗಳು ಹೇಳುವಂತೆ ನಾನು ರಾಜನಲ್ಲ, ಕ್ರಿಕೆಟ್ ತೊರೆದ ಬಳಿಕ ಈ ಬಗ್ಗೆ ಮಾತನಾಡುವೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬಾಬರ್ ಅಜಮ್ ಮಾತನಾಡಿ, 'ಮೊದಲನೆಯದಾಗಿ, 'ಕಿಂಗ್-ಶಿಂಗ್' ಬಳಕೆ ಕಡಿಮೆ ಮಾಡಿ. ನಾನು ರಾಜನಲ್ಲ (ಕಿಂಗ್), ನಾನು ಇನ್ನೂ ಅಲ್ಲಿಗೆ ತಲುಪಿಲ್ಲ. ಈಗ ನನಗೆ ಹೊಸ ಪಾತ್ರಗಳಿವೆ. ನಾನು ಮೊದಲು ಮಾಡಿದ್ದೆಲ್ಲವೂ ಹಿಂದಿನದು. ಪ್ರತಿಯೊಂದು ಪಂದ್ಯವೂ ಹೊಸ ಸವಾಲು, ಮತ್ತು ನಾನು ವರ್ತಮಾನ ಮತ್ತು ಭವಿಷ್ಯದತ್ತ ಗಮನ ಹರಿಸಬೇಕು. ನಾನು ಕ್ರಿಕೆಟ್ ತೊರೆದ ಬಳಿಕ ಅದರ ಬಗ್ಗೆ ಮಾತನಾಡುತ್ತೇನೆ' ಎಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 3ನೇ ಸ್ಥಾನದಲ್ಲಿ ಆಡುತ್ತಿದ್ದ ಅಜಮ್​ಗೆ ಈಗ ಆರಂಭಿಕರಾಗಿ ಬ್ಯಾಟ್ ಬೀಸುವ ಬಡ್ತಿ ಸಿಕ್ಕಿದೆ. ಫಖರ್ ಜಮಾನ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬಾಬರ್,ಎರಡೂ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಅವರು ನ್ಯೂಜಿಲೆಂಡ್ ವಿರುದ್ಧ 10, ದಕ್ಷಿಣ ಆಫ್ರಿಕಾ ವಿರುದ್ಧ 23 ರನ್ ಗಳಿಸಲಷ್ಟೇ ಶಕ್ತರಾದರು.

ಬಾಬರ್ ವೈಫಲ್ಯದ ಹೊರತಾಗಿಯೂ ಪಾಕಿಸ್ತಾನ ತಂಡವು ತ್ರಿಕೋನ ಸರಣಿಯ ಫೈನಲ್‌ಗೆ ತಲುಪುವಲ್ಲಿ ಯಶಸ್ವಿಯಾಗಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಟ ನಡೆಸಲಿವೆ. ತ್ರಿಕೋನ ಸರಣಿಯ ಫೈನಲ್ ಫೆಬ್ರವರಿ 14 ರಂದು ಕರಾಚಿಯಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಸ್ಕೋರ್ ಅನ್ನು ಬೆನ್ನಟ್ಟಿತು. ಮೊಹಮ್ಮದ್ ರಿಜ್ವಾನ್ (122*) ಮತ್ತು ಸಲ್ಮಾನ್ ಆಘಾ (134) ಅವರ ಶತಕಗಳ ನೆರವಿನಿಂದ ಪಾಕಿಸ್ತಾನ ತಂಡ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್​ಗಳೊಂದಿಗೆ 352 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

2022ರಿಂದ ಬಾಬರ್ ಕಳಪೆ ಪ್ರದರ್ಶನ

ಪ್ರಸ್ತುತ ಬಾಬರ್ ಅಜಮ್ ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ. 2022ರ ತನಕ ಅತ್ಯುತ್ತಮ ಲಯ ಕಾಯ್ದುಕೊಂಡಿದ್ದ ಬಾಬರ್, ಆ ಬಳಿಕ ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. 2023ರ ಆಗಸ್ಟ್​ನಿಂದ ಅವರು ಏಕದಿನ ಶತಕವನ್ನೇ ಸಿಡಿಸಿಲ್ಲ. ಡಿಸೆಂಬರ್ 2022 ರಿಂದ ಟೆಸ್ಟ್ ಶತಕ ಗಳಿಸಿಲ್ಲ. ಇದರೊಂದಿಗೆ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಅವರ ನಾಯಕತ್ವದಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್​ನ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.

ಇಲ್ಲಿದೆ ವಿಡಿಯೋ…

ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ

ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಅಜಮ್, ಫಖರ್ ಜಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಆಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವೇಳಾಪಟ್ಟಿ

ಫೆಬ್ರವರಿ 19 - ಪಾಕಿಸ್ತಾನ vs ನ್ಯೂಜಿಲೆಂಡ್, ನ್ಯಾಷನಲ್ ಸ್ಟೇಡಿಯಂ, ಕರಾಚಿ

ಫೆಬ್ರವರಿ 23 - ಪಾಕಿಸ್ತಾನ vs ಭಾರತ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ, ದುಬೈ

ಫೆಬ್ರವರಿ 27 - ಪಾಕಿಸ್ತಾನ vs ಬಾಂಗ್ಲಾದೇಶ, ರಾವಲ್ಪಿಂಡಿ ಕ್ರಿಕೆಟ್ ಮೈದಾನ, ರಾವಲ್ಪಿಂಡಿ

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner