ಶಕೀಬ್ ಅಲ್ ಹಸನ್, ರಿಶಾದ್ ಹೊಸೈನ್ ಮಿಂಚು; ನೆದರ್ಲೆಂಡ್ಸ್ ಮಣಿಸಿ ಸೂಪರ್-8ರ ಸನಿಹಕ್ಕೆ ಬಂದ ಬಾಂಗ್ಲಾದೇಶ
Bangladesh beat Netherlands : ಟಿ20 ವಿಶ್ವಕಪ್ 2024 ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಬಾಂಗ್ಲಾದೇಶ 25 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಗುಂಪು ಹಂತದ 27ನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಬಾಂಗ್ಲಾದೇಶ (Bangladesh beat Netherlands), 25 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಡಿ ಗುಂಪಿನಲ್ಲಿ ಸೌತ್ ಆಫ್ರಿಕಾ ಈಗಾಗಲೇ ಸೂಪರ್-8ಕ್ಕೆ ಅರ್ಹತೆ ಪಡೆದುಕೊಂಡಿದೆ. ಇದೀಗ ಬಾಂಗ್ಲಾ ಎರಡನೇ ತಂಡವಾಗಿ ಮುಂದಿನ ಸುತ್ತಿಗೆ ಪ್ರವೇಶಿಸಲು ಮುಂಚೂಣಿಯಲ್ಲಿದೆ. ಈ ಪಂದ್ಯದ ಬೆನ್ನಲ್ಲೇ ಶ್ರೀಲಂಕಾ ಎಲಿಮಿನೇಟ್ ಆಗಿದೆ. ಬಾಂಗ್ಲಾ ಪ್ರಸ್ತುತ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು 4 ಅಂಕ ಸಂಪಾದಿಸಿದೆ. ಸೋತರೂ ನೆದರ್ಲೆಂಡ್ಸ್ ತಂಡಕ್ಕೆ ಇನ್ನೂ ಅವಕಾಶ ಇದೆ.
ಸೇಂಟ್ ವಿನ್ಸೆಂಟ್ನ ಅರೊನ್ಸ್ ವಾಲೆ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಕಠಿಣ ಪಿಚ್ನಲ್ಲಿ ಉತ್ತಮ ಮೊತ್ತ ಕಲೆ ಹಾಕಿತು. 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಶಕೀಬ್ ಅಲ್ ಹಸನ್ ಅರ್ಧಶತಕ ಸಿಡಿಸಿ ಮಿಂಚಿದರು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಬ್ಯಾಟಿಂಗ್ನಲ್ಲೂ ವಿಫಲವಾಯಿತು. 20 ಓವರ್ ಬ್ಯಾಟಿಂಗ್ ಮಾಡಿದರೂ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಯಿತು.
ಬ್ಯಾಟಿಂಗ್ನಲ್ಲೂ ಡಚ್ಚರು ವಿಫಲ
ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್, ಕಳಪೆ ಪ್ರದರ್ಶನ ತೋರಿತು. ಬಾಂಗ್ಲಾದೇಶ ಬೌಲರ್ಗಳ ಎದುರು ರನ್ ಗಳಿಸಲು ಡಚ್ ಬ್ಯಾಟರ್ಗಳು ಪರದಾಡಿದರು. ಆರಂಭಿಕರಾದ ಮೈಕೆಲ್ ಲೆವಿಟ್ 18, ಮ್ಯಾಕ್ಸ್ ಓಡೌಡ್ 12 ರನ್ ಗಳಿಸಲಷ್ಟೇ ಶಕ್ತರಾದರು. ಬಳಿಕ ಕಣಕ್ಕಿಳಿದ ವಿಕ್ರಮಜಿತ್ ಸಿಂಗ್ 26, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 33, ಸ್ಕಾಟ್ ಎಡ್ವರ್ಡ್ಸ್ 25 ರನ್ ಕಲೆ ಹಾಕಿ ತಂಡಕ್ಕೆ ನೆರವಾಗಲು ಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ.
ಆ ನಂತರ ಬಾಸ್ ಡಿ ಲೀಡೆ 0, ಲೋಗನ್ ವಾನ್ ಬೀಕ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಆರ್ಯನ್ ದತ್ ಅಜೇಯ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೌಲಿಂಗ್ನಲ್ಲಿ ರಿಶಾದ್ ಹೊಸೈನ್ 3 ವಿಕೆಟ್ ಉರುಳಿಸಿದರೆ, ಟಸ್ಕಿನ್ ಅಹ್ಮದ್ 2 ವಿಕೆಟ್ ಪಡೆದರು. ಮುಸ್ತಫಿಜುರ್ ರೆಹಮಾನ್, ತಂಜಿಮ್ ಹಸನ್ ಸಕೀಬ್, ಮಹಮ್ಮದ್ದುಲ್ಲಾ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಶಕೀಬ್ ಭರ್ಜರಿ ಅರ್ಧಶತಕ
ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ನಡೆಸಿತು. ಆರಂಭಿಕ 3 ಓವರ್ಗಳಲ್ಲೇ ತನ್ನ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ನಜ್ಮುಲ್ ಹೊಸೈನ್ ಶಾಂಟೋ ಮತ್ತು ಲಿತ್ತನ್ ದಾಸ್ ತಲಾ 1 ರನ್ ಗಳಿಸಿ ಆರ್ಯನ್ ದತ್ ಬೌಲಿಂಗ್ನಲ್ಲಿ ಔಟಾದರು. ಆ ಬಳಿಕ ತಂಜೀದ್ ಹಸನ್ (35), ಶಕೀಬ್ ಅಲ್ ಹಸನ್ (64) ಆರಂಭಿಕ ಆಘಾತದಿಂದ ಚೇತರಿಕೆ ನೀಡಿದರು. ಓವರ್ಗಳು ಮುಂದುವರೆದಂತೆ ಬ್ಯಾಟಿಂಗ್ ಅಬ್ಬರ ಹೆಚ್ಚಿಸಿದರು. ವೇಗವಾಗಿ ರನ್ ಕಲೆ ಹಾಕತೊಡಗಿದರು.
ಆದರೆ, ಹಸನ್ 26 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 35 ರನ್ಗಳಿಸಿ ಔಟಾದರು. ಮತ್ತೊಂದೆಡೆ ಶಕೀಬ್ ಅರ್ಧಶತಕ ಸಿಡಿಸಿದರು. 46 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 64 ರನ್ ಸಿಡಿಸಿದ್ದರು. ಮಹಮ್ಮದ್ದುಲ್ಲಾ 25 ರನ್ ಗಳಿಸಿ ಔಟಾದರು. ಜೇಕರ್ ಅಲಿ 14 ರನ್ ಗಳಿಸಿದರು. ತೌಹಿದ್ ಹೃದೋಯ್ 9 ರನ್ ಕಲೆ ಹಾಕಿದರು. ಆರ್ಯನ್ ದತ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ 2 ವಿಕೆಟ್ ಪಡೆದರು. ಟಿಮ್ ಪ್ರಿಂಗಲ್ 1 ವಿಕೆಟ್ ಉರುಳಿಸಿ ಮಿಂಚಿದರು.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
