ಏಷ್ಯಾಕಪ್ ಫೈನಲ್: 'ಅಲ್ಲಾಹು ಅಕ್ಬರ್' ಘೋಷಣೆ ಕೂಗುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಿದ ಬಾಂಗ್ಲಾದೇಶ ನಾಯಕ -ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾಕಪ್ ಫೈನಲ್: 'ಅಲ್ಲಾಹು ಅಕ್ಬರ್' ಘೋಷಣೆ ಕೂಗುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಿದ ಬಾಂಗ್ಲಾದೇಶ ನಾಯಕ -ವಿಡಿಯೋ

ಏಷ್ಯಾಕಪ್ ಫೈನಲ್: 'ಅಲ್ಲಾಹು ಅಕ್ಬರ್' ಘೋಷಣೆ ಕೂಗುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಿದ ಬಾಂಗ್ಲಾದೇಶ ನಾಯಕ -ವಿಡಿಯೋ

ಭಾರತ ವಿರುದ್ಧದ ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದ ವೇಳೆ 'ಅಲ್ಲಾಹು ಅಕ್ಬರ್' ಎಂದು ಕೂಗಲು ಬಾಂಗ್ಲಾದೇಶ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ಪ್ರೇಕ್ಷಕರನ್ನು ಪ್ರೇರೇಪಿಸಿದ್ದಾರೆ.

ಅಲ್ಲಾಹು ಅಕ್ಬರ್' ಘೋಷಣೆ ಕೂಗುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಿದ ಬಾಂಗ್ಲಾದೇಶ ನಾಯಕ -ವಿಡಿಯೋ
ಅಲ್ಲಾಹು ಅಕ್ಬರ್' ಘೋಷಣೆ ಕೂಗುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಿದ ಬಾಂಗ್ಲಾದೇಶ ನಾಯಕ -ವಿಡಿಯೋ (Screengrab - X )

ಮೊಹಮ್ಮದ್ ಅಮಾನ್ ನೇತೃತ್ವದ ಭಾರತ ಅಂಡರ್ 19 ತಂಡವು, ಈ ಬಾರಿ ಏಷ್ಯಾಕಪ್ ಗೆಲ್ಲುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಆಗಿದ್ದೇ ಬೇರೆ. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ, ಭಾರತದ ಯುವ ಆಟಗಾರರು ಬಾಂಗ್ಲಾದೇಶ ವಿರುದ್ಧ ಮುಗ್ಗರಿಸಿದರು. 59 ರನ್‌ಗಳಿಂದ ಸೋತ ಕಿರಿಯರ ತಂಡ, ಬಾಂಗ್ಲಾದೇಶಕ್ಕೆ ಏಷ್ಯಾಕಪ್‌ ಬಿಟ್ಟುಕೊಟ್ಟಿತು. ಗೆಲುವಿಗೆ 199 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟುವಲ್ಲಿ ಬ್ಯಾಟಿಂಗ್ ಲೈನ್ಅಪ್ ವಿಫಲವಾಯಿತು. ಇದರ ಪರಿಣಾಮವಾಗಿ ಬಾಂಗ್ಲಾದೇಶವು ಟ್ರೋಫಿಯನ್ನು ತವರಿಗೆ ಕೊಂಡೊಯ್ದಿತು.

ದುಬೈನಲ್ಲಿ ನೆರೆದಿದ್ದ ಪ್ರೇಕ್ಷಕರು ಕೂಡಾ ಅಚ್ಚರಿಯ ರೀತಿಯಲ್ಲಿ ಬಾಂಗ್ಲಾದೇಶದ ಪರವಾಗಿದ್ದರು. ಅಂಡರ್ 19 ಏಷ್ಯಾ ಕಪ್ ಹಾಲಿ ಚಾಂಪಿಯನ್‌ಗಳನ್ನು ಬೆಂಬಲಿಸಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪಂದ್ಯದುದ್ದಕ್ಕೂ ದುಬೈ ಸ್ಟೇಡಿಯಂನಲ್ಲಿ 'ಅಲ್ಲಾಹು ಅಕ್ಬರ್' ಎಂಬ ಘೋಷಣೆಗಳು ಮೊಳಗಿದವು.

ಭಾರತ ವಿರುದ್ಧದ ಪಂದ್ಯದ ಕೊನೆಯ ಹಂತದಲ್ಲಿ, ಪಂದ್ಯ ಬಾಂಗ್ಲಾದೇಶ ಪರವಿತ್ತು. ಆಗ ತಂಡದ ನಾಯಕ ಅಜೀಜುಲ್ ಹಕೀಮ್ ತಮೀಮ್ ಪ್ರೇಕ್ಷಕರು 'ಅಲ್ಲಾಹು ಅಕ್ಬರ್' ಎಂದು ಜೋರಾಗಿ ಕೂಗುವಂತೆ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಪ್ರೇರೇಪಿಸಿದರು. ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಜನರನ್ನು ಪ್ರೋತ್ಸಾಹಿಸಿದರು. ಆಗ ಸ್ಟೇಡಿಯಂನಿಂದ ಸದ್ದು ದುಪ್ಪಟ್ಟಾಯಿತು.‌

ಬಾಂಗ್ಲಾದೇಶದ ನಾಯಕ ಕೇಳಿದ್ದನ್ನು ಅಭಿಮಾನಿಗಳು ಅನುಸರಿಸಿದರು. ಈ ವೇಳೆ ವೀಕ್ಷಕ ವಿವರಣೆಗಾರರು ಕೂಡಾ ಇದೇ ವಿಷಯವನ್ನು ಚರ್ಚಿಸಿದರು.

ವಿಡಿಯೋ ಇಲ್ಲಿದೆ

ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬಾಂಗ್ಲಾದೇಶವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಅಂತಿಮವಾಗಿ 49.1 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟ್ ಆಯಿತು. 65 ಎಸೆತಗಳಲ್ಲಿ 47 ರನ್ ಗಳಿಸಿದ ಮೊಹಮ್ಮದ್ ರಿಜಾನ್, ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತದ ಪರ ಯುಧಜಿತ್ ಗುಹಾ, ಚೇತನ್ ಶರ್ಮಾ ಹಾಗೂ ಹಾರ್ದಿಕ್ ರಾಜ್ ತಲಾ 2 ವಿಕೆಟ್ ಪಡೆದರು.

ಭಾರತದ ಕಳಪೆ ಚೇಸಿಂಗ್

ಭಾರತ ತಂಡ ಸುಲಭವಾಗಿ ಸರಳ ಗುರಿ ಬೆನ್ನಟ್ಟುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಭಾರತದ ಯಾವುದೇ ಬ್ಯಾಟರ್‌ಗಳು ಕ್ರೀಸ್‌ಕಚ್ಚಿ ಆಡಲಿಲ್ಲ. ಆರಂಭದಿಂದಲೂ ವಿಕೆಟ್‌ಗಳು ಉದುರುತ್ತಾ ಸಾಗಿದವು. 13 ವರ್ಷದ ವೈಭವ್ ಸೂರ್ಯವಂಶಿ ಕೂಡ ಕೇವಲ 9 ರನ್ ಗಳಿಸಿ ನಿರಾಸೆ ಅನುಭವಿಸಿದರು.

27ನೇ ಓವರ್‌ನಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತ್ತು. ನಾಯಕ ಮೊಹಮ್ಮದ್ ಅಮಾನ್ (26) ಕ್ರೀಸ್ ನಲ್ಲಿರುವವರೆಗೂ ತಂಡದ ಗೆಲುವಿನ ಭರವಸೆಗಳು ಉಳಿದಿತ್ತು. ಆದರೆ 32ನೇ ಓವರ್‌ನಲ್ಲಿ ಅವರ ವಿಕೆಟ್ ಉರುಳುತ್ತಿದ್ದಂತೆ ತಂಡದ ಸೋಲು ಬಹುತೇಕ ಖಚಿತವಾಯ್ತು. ಅಂತಿಮವಾಗಿ ಬಾಂಗ್ಲಾದೇಶ 36 ಓವರ್‌ಗಳಲ್ಲಿ ಭಾರತವನ್ನು 139 ರನ್‌ಗಳಿಗೆ ಆಲೌಟ್ ಮಾಡಿತು. 59 ರನ್‌ಗಳಿಂದ ಗೆದ್ದು ಸತತ ಎರಡನೇ ಏಷ್ಯಾ ಕಪ್ ತನ್ನದಾಗಿಸಿಕೊಂಡಿತು.

Whats_app_banner