ತವರಿನಲ್ಲೇ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್ಗಳ ಸೋಲು; ಪ್ರವಾಸಿಗರಿಗೆ ಐತಿಹಾಸಿಕ ಜಯ
Pakistan vs Bangladesh 1st Test: ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 10 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ.
ಟಿ20 ವಿಶ್ವಕಪ್ ನಂತರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದ ಪಾಕಿಸ್ತಾನ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ತವರಿನಲ್ಲಿ ಬಾಂಗ್ಲಾದೇಶದ ವಿರುದ್ಧವೇ ಸೋತು ಜಾಗತಿಕ ಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಿದೆ. ಬಾಂಗ್ಲಾ ಎದುರು ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳ ಹೀನಾಯ ಸೋಲನುಭವಿಸಿದೆ. ಆ ಮೂಲಕ ಬಾಂಗ್ಲಾ ಟೈಗರ್ಸ್ ಪಾಕಿಸ್ತಾನದ ನೆಲದಲ್ಲಿ ಚೊಚ್ಚಲ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ.
ರಾವಲ್ಪಿಂಡಿ ಮೈದಾನದಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಅದರಂತೆ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಬಾಂಗ್ಲಾ 565 ರನ್ಗಳಿಗೆ ಆಲೌಟ್ ಆದರೂ ಅದ್ಭುತ ಪ್ರದರ್ಶನ ತೋರಿತು. ಇದರೊಂದಿಗೆ ಪಾಕ್ 117 ರನ್ಗಳ ಹಿನ್ನಡೆ ಅನುಭವಿಸಿತು.
ಆದರೆ ಆತಿಥೇಯರು ಎರಡನೇ ಇನ್ನಿಂಗ್ಸ್ನಲ್ಲಿ 146 ರನ್ ಗಳಿಸಿ ಸರ್ವಪತನ ಕಂಡರು. ಇದರೊಂದಿಗೆ ಪ್ರವಾಸಿಗರಿಗೆ ಕೇವಲ 30 ರನ್ಗಳ ಗುರಿಯನ್ನಷ್ಟೇ ನೀಡಿತು. ಬಾಂಗ್ಲಾ 6.3 ಓವರ್ಗಳಲ್ಲೇ ಗೆದ್ದು ಚರಿತ್ರೆ ಸೃಷ್ಟಿಸಿದೆ. ಬ್ಯಾಟಿಂಗ್ನಲ್ಲಿ ಮುಷ್ಫಿಕರ್ ರೆಹಮಾನ್ (191) ಮತ್ತು ಬೌಲಿಂಗ್ನಲ್ಲಿ ಮೆಹದಿ ಹಸನ್ ಮಿರಾಜ್ ಅವರ ಭರ್ಜರಿ ಆಟಕ್ಕೆ ಪಾಕ್ ಶರಣಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಪಾಕ್ ಡಿಕ್ಲೇರ್ ಘೋಷಿಸದೆ ಬ್ಯಾಟಿಂಗ್ ನಡೆಸಿದ್ದರೆ ಡ್ರಾ ಅಥವಾ ಗೆಲುವಿಗೆ ಪ್ರಯತ್ನಿಸಬಹುದಿತ್ತು.
ಮುಷ್ಫೀಕರ್ ಬೊಂಬಾಟ್ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಪರ ಸೌದ್ ಶಕೀಲ್ (141) ಮತ್ತು ಮೊಹಮ್ಮದ್ ರಿಜ್ವಾನ್ (171) ಭರ್ಜರಿ ಶತಕ ಸಿಡಿಸಿದರು. ಪರಿಣಾಮ ಪಾಕ್ 448 ರನ್ಗಳ ಉತ್ತಮ ಮೊತ್ತ ಕಲೆ ಹಾಕಿ ಡಿಕ್ಲೇರ್ ಘೋಷಿಸಿತ್ತು. ಇದು ತನ್ನ ಅತಿಯಾದ ಆತ್ಮವಿಶ್ವಾಸವನ್ನು ತೋರಿಸಿತು. ನಂತರ ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಪರ ಮುಷ್ಫೀಕರ್ ರೆಹಮಾನ್ 191 ರನ್ ಗಳಿಸಿ ತಂಡದ ಮೊತ್ತವನ್ನು 550ರ (565) ಗಡಿ ದಾಟಿಸಿದರು. ಇದರೊಂದಿಗೆ 117 ರನ್ಗಳ ಮುನ್ನಡೆಸಲು ಸಾಧಿಸಲು ನೆರವಾಯಿತು. 341 ಎಸೆತಗಳಲ್ಲಿ 22 ಬೌಂಡರಿ, 1 ಸಿಕ್ಸರ್ ಸಹಿತ 191 ರನ್ ಗಳಿಸಿದರು.
ದಾಖಲೆ ಬರೆದ ಬಾಂಗ್ಲಾ
ಪಾಕಿಸ್ತಾನ ಎದುರು ಗೆಲ್ಲುವ ಮೂಲಕ ಪಾಕಿಸ್ತಾನ ಐತಿಹಾಸಿಕ ದಾಖಲೆ ಬರೆಯಿತು. ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೂ ಪಾಕ್ ನೆಲದಲ್ಲಿ ಗೆದ್ದ ಇತಿಹಾಸವೇ ಇಲ್ಲ. ಇದೀಗ ಆತಿಥೇಯರ ನೆಲದಲ್ಲಿ ಚೊಚ್ಚಲ ಗೆಲುವು ಸಾಧಿಸಿದೆ. ಈವರೆಗೆ 13 ಟೆಸ್ಟ್ ಪಂದ್ಯಗಳಲ್ಲಿ ಆಡಿತ್ತಾದರೂ ಒಂದರಲ್ಲೂ ಗೆದ್ದಿರಲಿಲ್ಲ. ಇದೀಗ 14ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಅಮೋಘ ಸಾಧನೆ ಮಾಡಿದೆ.
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲೂ ಏರಿದ ಬಾಂಗ್ಲಾ
ಪಾಕ್ ಎದುರು ಐತಿಹಾಸಿಕ ದಾಖಲೆಯ ನಂತರ ವಿಶ್ವ ಟೆಸ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನಕ್ಕೆ ಪಡೆಯಿತು. ಆದರೆ ಸೋಲು ಕಂಡಿರುವ ಪಾಕಿಸ್ತಾನ ಕೊನೆಯ ಎರಡನೇ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾ ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 3ರಲ್ಲಿ ಸೋತಿದೆ. ಪಾಕಿಸ್ತಾನ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 4 ಸೋಲು ಕಂಡಿದೆ. ಭಾರತ ಅಗ್ರಸ್ಥಾನದಲ್ಲಿದೆ. ಆಡಿದ 9 ಪಂದ್ಯಗಳಲ್ಲಿ 6ರಲ್ಲಿ, 2 ಸೋಲು, 1 ಡ್ರಾ ಸಾಧಿಸಿದೆ.